ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುರತ್ಕಲ್ ಅಕ್ರಮ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಹೋರಾಟ ಮಾಡಿದ್ದ ಸಾವಿರಾರು ಹೋರಾಟಗಾರ ಪೈಕಿ 101 ಮಂದಿಯ ವಿರುದ್ಧ ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಹಲವು ಕಾಂಗ್ರೆಸ್ ಮಾಜಿ ಶಾಸಕರು, ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ ಈ ಹೋರಾಟಗಾರರ ಮೇಲೆ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವುದು ಹೋರಾಟಗಾರರಲ್ಲಿ ಅಚ್ಚರಿ ಮೂಡಿಸಿದೆ.
ಹೋರಾಟ ಸಮಿತಿಯ ಸಂಚಾಲಕ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರನ್ನು ಮೊದಲ ಆರೋಪಿಯನ್ನಾಗಿ ಉಲ್ಲೇಖಿಸಿದ್ದು, ಎರಡನೇ ಆರೋಪಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈ ಅವರನ್ನು ಉಲ್ಲೇಖಿಸಲಾಗಿದೆ. ಒಟ್ಟು 101 ಹೋರಾಟಗಾರರ ಹೆಸರು ಉಲ್ಲೇಖಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಹೋರಾಟಗಾರರ ಮೇಲೆ ಭಾರತೀಯ ದಂಡ ಸಂಹಿತೆ 143, 147, 341, 283 ಹಾಗೂ ಆರ್‌ಡಬ್ಲ್ಯೂ 149 ಸೆಕ್ಷನ್ ನಡಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇದೊಂದು ಚಾರ್ಜ್ ಶೀಟ್ ಸಲ್ಲಿಸುವಂತಹ ಪ್ರಕರಣವೇ ಅಲ್ಲ. ಅಂದಿನ ಹೋರಾಟದಲ್ಲಿ ಯಾವುದೇ ಹಿಂಸಾಚಾರ, ಹೊಡೆದಾಟ ನಡೆದಿರಲಿಲ್ಲ. ಸಾರ್ವಜನಿಕರ ನ್ಯಾಯಪರವಾದ ಬೇಡಿಕೆ ಹಿನ್ನೆಲೆಯಲ್ಲಿ ಹೋರಾಟ ನಡೆದಿತ್ತು. ಇನ್ನೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ 101 ಮಂದಿಯ ಮೇಲೆ ಚಾರ್ಜ್ ಶೀಟ್ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ನಾಯಕರೇ ಭಾಗವಹಿಸಿದ್ದ ಹೋರಾಟದ ವಿರುದ್ಧ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದು ಆತಂಕದ ವಿಚಾರ” ಎಂದು ಪ್ರತಿಕ್ರಿಯೆ ನೀಡಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಲ್ಲಿದ್ದರೂ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವಂತಿದೆ” ಎಂದು ಮುನೀರ್ ವ್ಯಂಗ್ಯವಾಡಿದ್ದಾರೆ.
“ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 7ರಿಂದ 8 ಟೋಲ್‌ಗೇಟ್‌ಗಳು ನಿರ್ಮಾಣವಾಗಲಿದೆ. ಈ ಟೋಲ್‌ಗೇಟ್‌ಗಳ ವಿರುದ್ದ ಮುಂದಿನ ದಿನಗಳಲ್ಲಿ ಜನ ಹೋರಾಟ ನಡೆಸಬಾರದೆಂಬ ಕಾರಣಕ್ಕಾಗಿ ಜನರಲ್ಲಿ ಭಯ ಸೃಷ್ಟಿಸಲು ಬಿಜೆಪಿ ಸಂಸದರು ಹಾಗೂ ಮಂಗಳೂರು ಮತ್ತು ಸುರತ್ಕಲ್ ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದು ಸುರತ್ಕಲ್ ಪೊಲೀಸರು ಟೋಲ್ ಗೇಟ್ ವಿರೋಧಿ ಹೋರಾಟಗಾರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವಂತೆ ತಂತ್ರ ಹೆಣೆದಿದ್ದಾರೆ” ಎಂದು ಆರೋಪಿಸಿದರು.
“ಪೊಲೀಸರು ಹಾಗೂ ಸಂಸದರ ಈ ತಂತ್ರಕ್ಕೆ ಭಯ ಪಡುವುದಿಲ್ಲ, ಕಾನೂನು ಮೂಲಕ ಎದುರಿಸುತ್ತೇವೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮುಖ ಇದ್ದರೆ ಹೋರಾಟಗಾರರ ಮೇಲಿನ ಚಾರ್ಜ್ ಶೀಟನ್ನು ವಾಪಸು ಪಡೆಯಲು ಮುಂದಾಗಲಿ” ಎಂದು ಮುನೀರ್ ಕಾಟಿಪಳ್ಳ ಪ್ರತಿಸವಾಲು ಹಾಕಿದ್ದಾರೆ.
ಘಟನೆ ಹಿನ್ನೆಲೆ
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುರತ್ಕಲ್ ಎನ್‌ಐಟಿಕೆ ಬಳಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಬಿಜೆಪಿಯನ್ನು ಹೊರತುಪಡಿಸಿದಂತೆ ಇತರೆಲ್ಲ ಪಕ್ಷಗಳು ಸಾರ್ವಜನಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ಸುದೀರ್ಘ 35 ದಿನಗಳ ಕಾಲ ಈ ಧರಣಿ ಸತ್ಯಾಗ್ರಹ ನಡೆದಿತ್ತು. ಹೋರಾಟದ ಕೊನೆಯ ದಿನ ಟೋಲ್ ಹೋರಾಟಗಾರರು ಮುತ್ತಿಗೆ ಹಾಕಿದ್ದರು. ಹೋರಾಟಕ್ಕೆ ಮಣಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕೊನೆಗೆ ಟೋಲ್‌ಗೇಟನ್ನು ರದ್ಧುಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
2022ರ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಅಕ್ರಮ ಟೋಲ್‌ಗೇಟ್ ವಿರುದ್ಧ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅಹೋರಾತ್ರಿಯ ಹೋರಾಟ ನಡೆದಿತ್ತು. ಹೋರಾಟದಲ್ಲಿ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ, ಜನತಾ ದಳ, ಎಎಪಿ, ಕಾರ್ಮಿಕ ಸಂಘಟನೆ, ಟ್ಯಾಕ್ಸಿ ಚಾಲಕರ ಸಂಘಟನೆ, ಸಮಾನ ಮನಸ್ಕ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.