ಎಚ್.ಕೆ ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಿದ್ದಾಗ ಗದಗಿಗೆ ಕೊಡುಗೆಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯನ್ನು ಸ್ಥಾಪಿಸಿದರು. ಆದರೆ, ಈಗ ವಿವಿ ಆರ್‌ಎಸ್‌ಎಸ್ ಶಾಖೆಯಾಗಿ ಪರಿವರ್ತನೆ ಆಗುತ್ತಿದೆ ಎಂದು ದಲಿತ ಪರ ಹೋರಾಟಗಾರ ಮುತ್ತು ಬಿಳಿಯಲಿ ಆರೋಪಿಸಿದ್ದಾರೆ.
ಗದಗ ಪಟ್ಟಣದಲ್ಲಿ ಡಿ.13ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಈಗ ಆರ್.ಎಸ್.ಎಸ್ ಶಾಖೆಯಾಗಿ ಪರಿವರ್ತನೆಯಾಗಿದೆ. ಈಗ ಕಾರ್ಯನಿರ್ವಹಿಸುತ್ತಿರುವ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಆರ್.ಎಸ್.ಎಸ್‌ನ ಕಾರ್ಯಕರ್ತನಂತೆ ವರ್ತಿಸುತ್ತಿದ್ದಾರೆ. ಇವರು ವಿಶ್ವವಿದ್ಯಾಲಯಕ್ಕೆ ಕಾಲಿಟ್ಟಾಗಿಲಿಂದಲೂ ಕೋಮುವಾದಿ ಸಂಘಟನೆಯ ಸಹಕಾರದಿಂದ ವಿಶ್ವವಿದ್ಯಾಲಯದಲ್ಲಿ ಒಂದಿಲ್ಲೊಂದು ಕಾರ್ಯಕ್ರಮವನ್ನು ಮಾಡುತ್ತ ಬರುತ್ತಿದ್ದಾರೆ ಎಂದು ಮುತ್ತು ಬಿಳಿಯಲಿ ಆರೋಪಿಸಿದರು.
ಇದೀಗ ತಾಜಾ ಉದಾಹರಣೆ ಅಂದರೆ, ಇದೇ ತಿಂಗಳು 17ರಂದು ವಿಶ್ವವಿದ್ಯಾಲಯದಲ್ಲಿ ಆರ್.ಎಸ್.ಎಸ್‌ನ ಸಹಭಾಗಿ ಸಂಘಟನೆಗಳೊಂದಿಗೆ ವಚನ ದರ್ಶನ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದ ಎಲ್ಲ ಅತಿಥಿಗಳು ಆರ್.ಎಸ್.ಎಸ್ ನ ಭಾಗವಾಗಿರುವವರು. ಆಶ್ಚರ್ಯ ಅಂದರೆ ಅತಿಥಿಗಳ ಪಟ್ಟಿಯಲ್ಲಿ ನಮ್ಮ ರಾಜ್ಯದ ವೈಚಾರಿಕ ಮಠಗಳಲ್ಲಿ ಒಂದು ಎಂದು ಅನ್ನಿಸಿಕೊಳ್ಳುವ ಗದಗನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿಗಳು ಇದ್ದಾರೆ.
12 ನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರ ಜೊತೆ ಸೇರಿ ಸನಾತನದ ವಿರುದ್ಧ ವಚನ ಚಳುವಳಿಯನ್ನು ಕಟ್ಟಿದರು ಬಸವ ತತ್ವ ಅನುಸರಿಸುವ ಸಿದ್ಧರಾಮ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ದುರಂತ.
ಇಡೀ ಬಸವ ತತ್ವದ ವಿರೋಧಿಯಾಗಿ, ಸಮಾನತೆಯ ವಿರೋಧಿಯಾಗಿ ಪ್ರಜಾಪ್ರಭುತ್ವದ ವಿರುದ್ಧ ಕೆಲಸ ಮಾಡುವ ಆರ್.ಎಸ್.ಎಸ್ ಇಂತಹ ಕಾರ್ಯಕ್ರಮಕ್ಕೆ ಸಿದ್ಧರಾಮ ಸ್ವಾಮೀಜಿಗಳು ಗೊತ್ತಿದ್ದು ಹೋಗಿರೋದ ಅಥವಾ ಗೊತ್ತಿಲ್ಲದೆ ಹೋಗಿರೋದ ಎಂದು ಅವರೆ ಸ್ಪಷ್ಟಪಡಿಸಬೇಕು.
ಈಗಿನ ಕುಲಪತಿ ಈ ಹಿಂದೆಯೂ ಎಬಿವಿಪಿಯ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಆರ್.ಎಸ್.ಎಸ್ ಕೇಂದ್ರವನ್ನಾಗಿ ಮಾರ್ಪಡಿಸುತ್ತಿದ್ದಾರೆ ಎಂಬ ಅನುಮಾನಗಳಿವೆ.
ಈಗಿನ ಕುಲಪತಿಯಿಂದ ವಿಶ್ವವಿದ್ಯಾಲಯವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 17ರಂದು ನಡೆಯುವ ಕಾರ್ಯಕ್ರಮ ತಡೆಯೋಣ ವಿಶ್ವವಿದ್ಯಾಲಯವನ್ನು ಉಳಿಸೋಣ ಎಂದು ಕರೆ ನೀಡಿದರು.