ಬಿಜೆಪಿ ಮಟ್ಟಿಗೆ ಹೊಸ ಮುಖಗಳನ್ನು ದಿಢೀರ್ ಅಧಿಕಾರ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದು ಹೊಸದೇನಲ್ಲ. 2001ರಲ್ಲಿ ನರೇಂದ್ರ ಮೋದಿ ಕೂಡ ಇದೇ ರೀತಿ ಸಿಎಂ ಆಗಿದ್ದವರು. ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಪಕ್ಷದಲ್ಲಿ ಸ್ಥಳೀಯ ನಾಯಕರನ್ನು ವ್ಯವಸ್ಥಿತವಾಗಿ ಮೂಲೆಗುಂಪಾಗಿಸುವುದು; ಮಾಸ್ ಲೀಡರ್‌ಗಳು ತಲೆಯೆತ್ತದಂತೆ ನೋಡಿಕೊಳ್ಳುವುದು; ರಾಜ್ಯಗಳಲ್ಲಿ ಚುನಾವಣಾ ಬಂದಾಗ ಪಕ್ಷವು ಮೋದಿ-ಅಮಿತ್ ಶಾ ಅವರತ್ತ ನೋಡಬೇಕು ಎನ್ನುವ ತಂತ್ರವೂ ಇದರ ಹಿಂದಿದೆ.
ಭಾರತೀಯ ಜನತಾ ಪಕ್ಷವು ತನ್ನನ್ನು ತಾನು ‘ದ ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ಕರೆದುಕೊಳ್ಳುತ್ತದೆ. ಅದನ್ನು ಸಮರ್ಥನೆ ಮಾಡಲೋ ಎಂಬಂತೆ ಇತ್ತೀಚಿನ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಮೂರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೊಸಬರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಆದರೆ, ಪಕ್ಷವು ಹೀಗೆ ಹೊಸ ಮುಖಗಳಿಗೆ ಮಣೆ ಹಾಕಿರುವುದರ ಹಿಂದೆ ಹೈಕಮಾಂಡ್‌ನ ಹಲವು ಲೆಕ್ಕಾಚಾರಗಳಿವೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ರಾಜ್ಯಗಳಲ್ಲಿ ಬಿಜೆಪಿಗೆ ನಿರೀಕ್ಷೆ ಮೀರಿ ಬೆಂಬಲ ಸಿಕ್ಕಿದೆ. ಆದರೆ, ಗೆದ್ದಷ್ಟೇ ವೇಗವಾಗಿ ಅವರಿಗೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಶರವೇಗದಲ್ಲಿ ತೆಲಂಗಾಣದಲ್ಲಿ ರೇವಂತ್ ರೆಡ್ಡಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಅವರು ಸರ್ಕಾರ ರಚಿಸಿ ಎರಡು ಗ್ಯಾರಂಟಿಗಳನ್ನು ಜಾರಿ ಮಾಡಿದರೂ ಬಿಜೆಪಿಯು ತಾನು ಗೆದ್ದಿದ್ದ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿರಲಿಲ್ಲ.
ಮಧ್ಯಪ್ರದೇಶದಲ್ಲಿ ಬಿಜೆಪಿಯು 15 ವರ್ಷಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿದೆ. ಈ ಬಾರಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಇದು ಸಾಧ್ಯವಾಗಿದ್ದು ಶಿವರಾಜ್ ಸಿಂಗ್ ಚೌಹಾಣ್ ಅವರ ಲಾಡ್ಲಿ ಬೆಹನಾ ಯೋಜನೆ ಸೇರಿದಂತೆ ಹಲವು ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳಿಂದ. ಹಾಗಾಗಿ ಅವರಿಗೇ ಮತ್ತೆ ಮುಖ್ಯಮಂತ್ರಿ ಪಟ್ಟ ಸಿಗುವುದು ನಿಶ್ಚಿತ ಎನ್ನಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಮೋಹನ ಯಾದವ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ.
ಮೋಹನ್ ಯಾದವ್ ಅವರ ಆಯ್ಕೆಗೆ ಜಾತಿಯೂ ಒಂದು ಮುಖ್ಯ ಕಾರಣ. ಮೋಹನ್ ಯಾದವ್, ಹಿಂದುಳಿದ ವರ್ಗದವರು. ಯಾದವ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿಯಾಗಿಸುವ ಮೂಲಕ ಮಧ್ಯಪ್ರದೇಶ ಅಷ್ಟೇ ಅಲ್ಲದೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿರುವ ಯಾದವರ ಮತಕ್ಕೆ ಬಿಜೆಪಿ ಗಾಳ ಹಾಕಿದೆ. ಹೀಗಾಗಿಯೇ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ, ಜ್ಯೋತಿರಾದಿತ್ಯ ಸಿಂಧಿಯಾ ಮುಂತಾದ ಆಕಾಂಕ್ಷಿಗಳ ನಡುವೆ ಬಿಜೆಪಿ ಮೋಹನ್ ಯಾದವ್‌ಗೆ ಪಟ್ಟ ಕಟ್ಟಿದೆ. ಅವರ ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳಿದ್ದು, ಜಗದೀಶ್ ದೇವ್ಡಾ ದಲಿತ ಸಮುದಾಯದವರಾಗಿದ್ದರೆ, ರಾಜೇಂದ್ರ ಶುಕ್ಲಾ ಬ್ರಾಹ್ಮಣರಾಗಿದ್ದಾರೆ.
ರಾಜಸ್ಥಾನದಲ್ಲಿ ರಾಜಕುಟುಂಬದ ವಸುಂಧರಾ ರಾಜೇ, ಅವರ ಸಂಬಂಧಿ ದಿಯಾ ಕುಮಾರಿ ಅಥವಾ ಬಾಬಾ ಬಾಲಕನಾಥ, ಕೇಂದ್ರ ಸಚಿವರಾಗಿದ್ದ ಗಜೇಂದ್ರ ಸಿಂಗ್ ಶೇಖಾವತ್ ಇವರ ಪೈಕಿ ಯಾರಾದರೊಬ್ಬರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಬಹುದು ಎಂಬ ನಿರೀಕ್ಷೆ ಇತ್ತು. ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿರುವ ಬಿಜೆಪಿ ಹೈಕಮಾಂಡ್, ಭಜನ್‌ಲಾಲ್ ಶರ್ಮಾರನ್ನು ಸಿಎಂ ಗಾದಿಯಲ್ಲಿ ಕೂರಿಸಿದೆ. ವಿಶೇಷ ಅಂದರೆ, ಶರ್ಮಾ, ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವಂಥವರು. ರಾಜಸ್ಥಾನದಲ್ಲಿ ಬ್ರಾಹ್ಮಣರ ಮತಗಳು ಹೆಚ್ಚಾಗಿದ್ದು. ಅದನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ವರಿಷ್ಠರು ಬ್ರಾಹ್ಮಣ ಸಮುದಾಯದ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಇವರ ಜೊತೆಗೆ ರಜಪೂತ ಸಮುದಾಯದ ದಿಯಾಕುಮಾರಿ ಹಾಗೂ ದಲಿತ ಸಮುದಾಯದ ಪ್ರೇಮಚಂದ ಭೈರವ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿದೆ. ಇಲ್ಲೂ ಕೂಡ ಜಾತಿ ಬಹಳ ಮುಖ್ಯ ಪಾತ್ರ ವಹಿಸಿದೆ.
ಛತ್ತೀಸಗಢದಲ್ಲಿ ಕೂಡ ಬಿಜೆಪಿ ವರಿಷ್ಠರು ಭಿನ್ನ ತಂತ್ರಗಾರಿಕೆ ಮಾಡಿದ್ದು, ಬುಡಕಟ್ಟು ಸಮುದಾಯದ ವಿಷ್ಣು ದೇವ್ ಸಾಯ್ ಕೂಡ ಅನಿರೀಕ್ಷಿತ ಆಯ್ಕೆಯೇ. ಅಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಮಾಜಿ ಮುಖ್ಯಂಮತ್ರಿ ರಮಣ್‌ಸಿಂಗ್, ರೇಣುಕಾ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಸಾವೋ ಮುಂತಾದವರಿದ್ದರು. ಇವರ ನಡುವೆ ಪಕ್ಷವು ವಿಷ್ಣು ದೇವ್ ಸಾಯ್ ಅವರಿಗೆ ಮಣೆ ಹಾಕಿದೆ. ಅವರ ಜೊತೆಗೆ ಒಬಿಸಿಯ ಅರುಣ್ ಸಾವೋ ಹಾಗೂ ಬ್ರಾಹ್ಮಣ ಸಮುದಾಯದ ವಿಜಯ್ ಶರ್ಮಾ ಡಿಸಿಎಂಗಳಾಗಿದ್ದಾರೆ.
ಮೂರು ರಾಜ್ಯಗಳಲ್ಲಿಯೂ ಬುಡಕಟ್ಟು, ಹಿಂದುಳಿದ ಜಾತಿಗಳ ಜೊತೆಗೆ ಬ್ರಾಹ್ಮಣರು ನಿರ್ಣಾಯಕ ಪದವಿ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಹಿಂದುಳಿದವರ ಮತಗಳಿಗೆ ಲಗ್ಗೆ ಹಾಕಿರುವುದಷ್ಟೇ ಅಲ್ಲದೆ ಕಾಂಗ್ರೆಸ್ ಪ್ರತಿಪಾದಿಸುತ್ತಿದ್ದ ಜಾತಿ ಜನಗಣತಿ ಅಸ್ತ್ರವನ್ನೂ ಹೊಡೆದುರುಳಿಸಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಪಕ್ಷದಲ್ಲಿ ಶಿವರಾಜ್‌ಸಿಂಗ್ ಚೌಹಾಣ್, ವಸುಂಧರಾ ರಾಜೇ, ರಮಣ್‌ಸಿಂಗ್ ಅವರ ನಂತರದ ತಲೆಮಾರಿನ ನಾಯಕತ್ವವನ್ನು ಪ್ರತಿನಿಧಿಸುತ್ತಾರೆ. ಅನನುಭವಿಗಳೆಂಬ ಕಾರಣಕ್ಕೆ ಇವರೆಲ್ಲ ಹೈಕಮಾಂಡ್ ಹೇಳಿದಂತೆ ಕೇಳಿಕೊಂಡಿರುತ್ತಾರೆ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.
ಬಿಜೆಪಿ ಹೈಕಮಾಂಡ್ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಹಲವು ತಂತ್ರಗಳನ್ನು ಅಳವಡಿಸಿಕೊಂಡಿದೆ. ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಒಡೆದಿದೆ. ಪಕ್ಷದಲ್ಲಿ ಸ್ಥಳೀಯ ಮಟ್ಟದಲ್ಲಿ ನಾಯಕತ್ವವೇ ಇರಬಾರದು; ರಾಜ್ಯಗಳ ಮುಖಂಡರು ಚುನಾವಣೆ ಮತ್ತಿತರ ಸಂದರ್ಭಗಳಲ್ಲೆಲ್ಲ ಕೇಂದ್ರ ನಾಯಕತ್ವದ ಕಡೆ, ಅದರಲ್ಲೂ ಮುಖ್ಯವಾಗಿ ಮೋದಿಯವರ ಕಡೆ, ನೋಡಬೇಕು ಎನ್ನುವ ಲೆಕ್ಕಾಚಾರ ಇದರ ಹಿಂದಿದೆ. ಅಂದರೆ, ಪಕ್ಷದಲ್ಲಿ ಸ್ಥಳೀಯ ನಾಯಕರನ್ನು ವ್ಯವಸ್ಥಿತವಾಗಿ ಮೂಲೆಗುಂಪಾಗಿಸುವ ಪ್ರಯತ್ನ.
ಇನ್ನೊಂದು, ಪಕ್ಷದಲ್ಲಿ ಮಾಸ್ ಲೀಡರ್‌ಗಳು ತಲೆಯೆತ್ತದಂತೆ ನೋಡಿಕೊಳ್ಳುವುದು; ಬಿಜೆಪಿಯಲ್ಲಿ ಇಂದು ಬಿಜೆಪಿಯಲ್ಲಿ ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಕೆಲವೇ ಕೆಲವು ನಾಯಕರು ಉಳಿದಿದ್ದಾರೆ. ಅಂಥವರ ಪೈಕಿ ಒಬ್ಬರಾದ ವಸುಂಧರಾ ರಾಜೇ ಎರಡು ಬಾರಿ ಸಿಎಂ ಆಗಿದ್ದರು. ರಮಣ್‌ಸಿಂಗ್ ಕೂಡ ಅಷ್ಟೇ, ಎರಡು ಬಾರಿ ಸಿಎಂ ಆಗಿದ್ದರು. ಇಬ್ಬರನ್ನೂ ಮತ್ತೆ ಮುಖ್ಯಮಂತ್ರಿ ಮಾಡಿದ್ದರೆ ಪಕ್ಷದಲ್ಲಿ ಅವರ ಇಮೇಜ್ ವಿಪರೀತ ಬೆಳೆಯುತ್ತಿತ್ತು. ಅವರು ಸ್ಥಳೀಯ ಮಟ್ಟದಲ್ಲಿ ದೊಡ್ಡ ನಾಯಕರಾಗುತ್ತಿದ್ದರು.
ವಯಸ್ಸಿನಲ್ಲಿ ಇವರಿಬ್ಬರಿಗಿಂತ ಚಿಕ್ಕವರಾದ ಶಿವರಾಜ್‌ಸಿಂಗ್ ಚೌಹಾಣ್ ಅವರದ್ದೂ ಇದೇ ಕಥೆ. ಚೌಹಾಣ್ ಅವರಿಗೆ ಈಗ ಇನ್ನೂ ಕೇವಲ 64 ವರ್ಷ. ಚೌಹಾಣ್ ಅವರಿಗೆ ಐದನೇ ಅವಧಿ ನೀಡಿದರೆ, ಅವರು ಬಿಜೆಪಿ ಮುಖ್ಯಮಂತ್ರಿಯಾಗಿ ದಾಖಲೆಯ 25 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದರು. ಇದು ಪಕ್ಷದಲ್ಲಿ ಇದುವರೆಗೆ ಸಾಟಿಯಿಲ್ಲದ ಸಾಧನೆಯಾಗುತ್ತಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಪ್ರಧಾನಿ ಮೋದಿಗೆ ಇವರು ಪ್ರತಿಸ್ಪರ್ಧಿಗಳಾಗದೇ ಹೋಗಬಹುದು. ಆದರೆ, 2029ರ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಇವರಲ್ಲಿ ಒಬ್ಬಿಬ್ಬರಾದರೂ ಪ್ರಧಾನಿ ಹುದ್ದೆಗೆ ಗಂಭೀರ ಸ್ಪರ್ಧಿಗಳಾಗುವ ಸಾಧ್ಯತೆಯಿತ್ತು. ಹಾಗಾಗಿಯೇ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಮೋದಿ ಮತ್ತು ಅಮಿತ್ ಶಾ ಇಚ್ಛಿಸಲಿಲ್ಲ ಎನ್ನಲಾಗುತ್ತಿದೆ.
ಬಿಜೆಪಿ ಮಟ್ಟಿಗೆ ಹೊಸ ಮುಖಗಳನ್ನು ದಿಢೀರ್ ಅಧಿಕಾರ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದು ಹೊಸದೇನಲ್ಲ. ಮೋದಿ ಕೂಡ ಇದೇ ರೀತಿ ಸಿಎಂ ಆಗಿದ್ದವರು. 2001ರಲ್ಲಿ ಕೇಶುಭಾಯ್ ಪಟೇಲ್ ಅವರ ಉತ್ತರಾಧಿಕಾರಿಯನ್ನು ಹುಡುಕುವಾಗ ಹೈಕಮಾಂಡ್ ಸಂಘ ಪರಿವಾರದ ನೇಪಥ್ಯದಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಮೋದಿಯವರನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿಸಿತ್ತು. ಇವತ್ತು ಮೋದಿಯಿಲ್ಲದೇ ಬಿಜೆಪಿ ಇಲ್ಲ ಎನ್ನುವಂಥ ಸ್ಥಿತಿಯಿದೆ.
ಈ ಸುದ್ದಿ ಓದಿದ್ದೀರಾ: ಮಹುವಾ ಮೊಯಿತ್ರಾ | ದಿಟ್ಟ ಸಂಸದೆಯ ವಿವಾದಾಸ್ಪದ ನಿರ್ಗಮನ
ಇದೇನೇ ಇದ್ದರೂ ಬಿಜೆಪಿ ರಾಜ್ಯಗಳಲ್ಲಿ 2014ಕ್ಕಿಂತ ಮುಂಚೆ ಮುಖ್ಯಮಂತ್ರಿಗಳಾಗಿದ್ದವರ್‍ಯಾರೂ ಈಗ ಅಧಿಕಾರದಲ್ಲಿಲ್ಲ. ಎಲ್ಲವೂ ಹೊಸ ಮುಖಗಳೇ. ಬಿಜೆಪಿಯ ಈ ತಂತ್ರಗಾರಿಕೆಗೆ ಪಕ್ಷದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಭವಿಷ್ಯದಲ್ಲಿ ತಿಳಿಯಲಿದೆ.