ವಾಯುವ್ಯ ಸಾರಿಗೆಯ ಪ್ರಾದೇಶಿಕ ಕಾರ್ಯಾಗಾರವನ್ನು ಪುನರುಜ್ಜೀವನಗೊಳಿಸಬೇಕು ಹಾಗೂ ಅಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಖಾಯಂ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆಯಿಂದ ಧಾರವಾಡ ವಾಯುವ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.
ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿಶಂಕರ್ ಎಸ್. ಗೌಡ ಮಾತನಾಡಿ, “ಹುಬ್ಬಳ್ಳಿಯಲ್ಲಿ ವಾಯುವ್ಯ ಸಾರಿಗೆಯ ಪ್ರಾದೇಶಿಕ ಕಾರ್ಯಾಗಾರವು ಕಾರ್ಯ ನಿರ್ವಹಿಸುತ್ತಿದ್ದು, ಈ ಭಾಗದ ಯುವಜನರಿಗೆ ಹೆಚ್ಚಿನ ಉದ್ಯೋಗವನ್ನು ಒದಗಿಸುತ್ತಿತ್ತು. ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಿನ ಸಂಖ್ಯೆಯ ಐಟಿಐ ಕಾಲೇಜುಗಳಿದ್ದು ಇಲ್ಲಿ ತರಬೇತಿ ಪಡೆದ ಯುವಜನರಿಗೆ ಹೆಚ್ಚಿನ ಉದ್ಯೋಗವನ್ನು ಈ ಕಾರ್ಯಾಗಾರವು ಉದ್ಯೋಗದ ಹೆಬ್ಬಾಗಿಲಾಗಿತ್ತು. ಆದರೆ ಪ್ರಾದೇಶಿಕ ಕಾರ್ಯಾಗಾರದಲ್ಲಿ ಹಂತಹಂತವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗಿದೆ” ಎಂದು ಆರೋಪಿಸಿದರು.
“ಒಂದು ಅಂದಾಜಿನ ಪ್ರಕಾರ ಪ್ರಾದೇಶಿಕ ಕಾರ್ಯಾಗಾರದಲ್ಲಿ ಈ ಹಿಂದೆ 2000ಕ್ಕೂ ಹೆಚ್ಚಿದ್ದ ಉದ್ಯೋಗಗಳನ್ನು ಕಡಿತ ಮಾಡಿ 200ಕ್ಕೆ ಇಳಿಸಲಾಗಿದೆ. ಅಲ್ಲದೇ ಈ ಹಿಂದೆ ಕಾರ್ಯಾಗಾರದಲ್ಲಿ ನಿರ್ವಹಿಸುತ್ತಿದ್ದ ಎಷ್ಟೋ ಕೆಲಸಗಳನ್ನು ಉಪಗುತ್ತಿಗೆ/ಹೊರಗುತ್ತಿಗೆ ನೀಡಲಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಕಡಿತಗೊಳ್ಳಲು ಕಾರಣವಾಗಿದೆ. ಮುಂದೊಂದು ದಿನ ಈ ಕಾರ್ಯಾಗಾರ ಮುಚ್ಚಿಹೋದರೂ ಆಶ್ಚರ್ಯವಿಲ್ಲ. ಅಲ್ಲದೇ ವಾಯುವ್ಯ ಸಾರಿಗೆಯಲ್ಲಿ ಆಡಳಿತಾತ್ಮಕ, ತಾಂತ್ರಿಕ, ಚಾಲಕರ, ನಿರ್ವಾಹಕರ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಮತ್ತೊಂದೆಡೆ ಅವಶ್ಯಕ ಹುದ್ದೆಗಳಿಗೆ ಗುತ್ತಿಗೆ-ಹೊರಗುತ್ತಿಗೆ ಆಧಾರದಲ್ಲಿ ಭರ್ತಿಮಾಡಿಕೊಳ್ಳಲಾಗುತ್ತಿದೆ. ಇದರಿಂದ ಯುವಜನರು ಉದ್ಯೋಗ ಭದ್ರತೆಯಿಲ್ಲದೆ ಆತಂಕದಿಂದಲೇ ಕಾರ್ಯ ನಿರ್ವಹಿಸುವಂತಾಗಿದೆ” ಎಂದರು.
“ವಾಯುವ್ಯ ಸಾರಿಗೆಯ ಪ್ರಾದೇಶಿಕ ಕಾರ್ಯಾಗಾರವನ್ನು ಕೂಡಲೇ ಪುನರುಜ್ಜೀವನಗೊಳಿಸಬೇಕು ಹಾಗೂ ಅಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಈ ಕೂಡಲೇ ಖಾಯಂ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಬೇಕು. ವಾಯುವ್ಯ ಸಾರಿಗೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಖಾಯಂ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಬೇಕು. ಕಾರ್ಯಾಗಾರದಲ್ಲಿ ಕೆಲಸಗಳನ್ನು ಉಪಗುತ್ತಿಗೆ/ಹೊರಗುತ್ತಿಗೆ ಕೊಡುವುದನ್ನು ಕೈಬಿಟ್ಟು ಈ ಮೊದಲು ನಿರ್ವಹಿಸುತ್ತಿದ್ದ ಎಲ್ಲ ಕೆಲಸಗಳನ್ನು ಪುನಃ ಇಲ್ಲಿಯೇ ನಿರ್ವಹಿಸಿ ಹೆಚ್ಚಿನ ಹುದ್ದೆಗಳನ್ನು ಸೃಷ್ಟಿಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪೊರಕೆ ಹಿಡಿದು ಕಸ ಗುಡಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ
ಪ್ರತಿಭಟನೆಯಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ರಣಜಿತ್ ದುಪದ್, ಎಐಡಿವೈಒ ಜಿಲ್ಲಾ ಸಂಘಟನಾಕಾರರಾದ ಪ್ರೀತಿ ಸಿಂಗಾಡೆ, ನಾಗರಾಜ್, ಆಕಾಶ, ಬಸವರಾಜ ದಾಟನಾಳ, ಪವನ್ ಸೇರಿದಂತೆ ಮುಂತಾದ ಐಟಿಐ ತರಬೇತುದಾರರು ಇದ್ದರು.