- ಕುಮಾರಸ್ವಾಮಿ ಸಂಪರ್ಕಕ್ಕೆ ಸಿಗದೇ ಉಳಿದಿರುವ ರೇವಣ್ಣ
- ಅಪ್ಪನ ನಿರ್ಧಾರಕ್ಕೆ ಒಪ್ಪಿಗೆ ನೀಡುತ್ತಾರೆಯೇ ಕುಮಾರಸ್ವಾಮಿ?
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿರುವ ನಾಟಕ ಹೊಸ ರಾಜಕೀಯ ಲೆಕ್ಕಾಚಾರವನ್ನೇ ಹುಟ್ಟು ಹಾಕಿದೆ.
ಕೊಟ್ಟಮಾತಿಗೆ ತಪ್ಪದಂತೆ ನಡೆಯುವ ಸಲುವಾಗಿ ಕುಮಾರಸ್ವಾಮಿ, ಕುಟುಂಬವನ್ನೇ ಎದುರು ಹಾಕಿಕೊಳ್ಳುವ ಸಾಹಸಕ್ಕೆ ಮುಂದಾದರೆ, ಪತ್ನಿ ಬೇಡಿಕೆ ಈಡೇರಿಸುವುದರ ಜೊತೆಗೆ ಅಪ್ಪನ ಆಜ್ಞೆ ಪಾಲನೆ ಮಾಡುತ್ತಾ ಸೋದರನ ನಿರ್ಧಾರಕ್ಕೂ ಪರೋಕ್ಷ ಸೆಡ್ಡು ಹೊಡೆಯುವ ಹೊಸ ಪ್ರಯತ್ನವನ್ನು ರೇವಣ್ಣ ಮಾಡಿದ್ದಾರೆ.
ಇದರ ಫಲವಾಗಿ ಹಾಸನದ ಟಿಕೆಟ್ ಘೋಷಣೆ ದೊಡ್ಡಗೌಡರ ಪಾಲಿಗೆ ಪಕ್ಷ ಹಾಗೂ ಕುಟುಂಬದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದತ್ತ ರಾಜ್ಯರಾಜಕಾರಣದ ಚಿತ್ತ ನೆಟ್ಟಿದೆ.
ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ಟಿಕೆಟ್ ವಿಚಾರವಾಗಿ ಮಾತನಾಡಿರುವ ಎಚ್ಡಿಕೆ, ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತದೆ. ಈ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ತಮ್ಮ ಸ್ಪಷ್ಟ ನಿರ್ಧಾರವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ನಮ್ಮ ಪಕ್ಷ ಹಾಗೂ ಕುಟುಂಬವನ್ನು ಹಾಳು ಮಾಡುವ ಶಕುನಿಗಳು ಹಾಸನ ಟಿಕೆಟ್ ವಿಚಾರವಾಗಿ ರೇವಣ್ಣನ ತಲೆಕೆಡಿಸಿದ್ದಾರೆ. ಅಂದು ಶಕುನಿ ತಲೆಕೆಡಿಸಿದ್ದಕ್ಕೆ ತಾನೇ ಕುರುಕ್ಷೇತ್ರ ನಡೆದಿದ್ದು ಎನ್ನುವ ಮೂಲಕ ಕುಟುಂಬ ರಾಜಕಾರಣದೊಳಗಿನ ರಾಜಕೀಯ ಪಲ್ಲಟ, ಮೇಲಾಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆದರೆ ರೇವಣ್ಣನವರ ಕುಟುಂಬ ಈ ವಿಚಾರಕ್ಕೆ ಈಗಲೂ ಸುತಾರಾಂ ಒಪ್ಪದೆ ತನ್ನದೇ ಆದ ರಣತಂತ್ರ ಹೆಣೆಯುವ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಹಾದಿಯಲ್ಲಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಸಹೋದರ ಕುಮಾರಸ್ವಾಮಿ ಹೇಳಿಕೆಗೆ ಎಲ್ಲೂ ಪ್ರತಿಕ್ರಿಯೆ ನೀಡದ ರೇವಣ್ಣ, ಅವರ ಜೊತೆ ಮಾತುಕತೆಯನ್ನೂ ನಡೆಸದೆ ಕೇವಲ ದೊಡ್ಡಗೌಡರಿಗಷ್ಟೇ ತಮ್ಮ ರಾಜಕೀಯ ನಡೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎನ್ನುವುದು ಅವರ ಆಪ್ತರು ನೀಡಿರುವ ಮಾಹಿತಿ.
ನೇರಾನೇರ ಮಾತುಕತೆಗೆ ನಿಂತಲ್ಲಿ ಕುಮಾರಸ್ವಾಮಿ ಎದುರು ಸಮರ್ಥನೆ ಮಾಡುವುದು ಕಷ್ಟ ಎನ್ನುವುದನ್ನು ಅರಿತಿರುವ ರೇವಣ್ಣ ಅದರ ಬದಲು ದೇವೇಗೌಡರೆದರು ಟಿಕೆಟ್ ವಿಚಾರದ ಬಗ್ಗೆ ಭಾವನಾತ್ಮಕ ದಾಳ ಉರುಳಿಸಿದ್ದಾರೆ.
ಅದಕ್ಕಾಗಿ ಹೊಸ ಬೇಡಿಕೆ ಮುಂದಿಟ್ಟಿರುವ ರೇವಣ್ಣ ಕುಟುಂಬದ ಮರ್ಯಾದೆೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವ ಪ್ರೀತಂಗೌಡ ಎದುರು ನಾನೇ ಸ್ಪರ್ಧಿಸುತ್ತೇನೆ. ಭವಾನಿ ಬದಲಿಗೆ ನನಗೆ ಅಲ್ಲಿ ಟಿಕೆಟ್ ನೀಡಿ. ಹೊಳೆನರಸೀಪುರ-ಹಾಸನ ಕ್ಷೇತ್ರ ಎರಡರಿಂದಲೂ ಸ್ಪರ್ಧಿಸುತ್ತೇನೆ ಎಂದು ಹೇಳಿಕೊಂಡಿದ್ದಾರಂತೆ.
ಆ ಮೂಲಕ ಕುಮಾರಸ್ವಾಮಿ ನಿರ್ಧಾರಕ್ಕೆ ಚೆಕ್ಮೇಟ್ ನೀಡಿರುವ ಅವರು ಎರಡು ಕ್ಷೇತ್ರದ ಸ್ಪರ್ಧೆ ವಿಚಾರ ಮುಂದಿಟ್ಟು, ಭವಾನಿಯವರನ್ನು ಕಣದಿಂದ ದೂರ ಉಳಿಯುವಂತೆ ಮಾಡಿ ಎಚ್ಡಿಕೆ ಸಿಟ್ಟು ಶಮನ ಮಾಡುವುದು. ಹಾಗೆಯೇ ತಾವೇ ಕಣಕ್ಕಿಳಿಯುವ ಮೂಲಕ ಜಿಲ್ಲಾ ಕಾರ್ಯಕರ್ತರ ಪಡೆಯನ್ನು ತಮ್ಮತ್ತ ತಿರುಗಿಸಿಕೊಂಡು ಎಚ್ ಪಿ ಸ್ವರೂಪ್ ಅವರನ್ನೂ ಸೆಳೆದುಕೊಂಡು ಜನಾಭಿಪ್ರಾಯ ರೂಪಿಸಿಕೊಳ್ಳುವುದು ರೇವಣ್ಣ ಯೋಚನೆ. ಇದಕ್ಕೆ ದೊಡ್ಡಗೌಡರು ಇಲ್ಲ ಎನ್ನುವುದಿಲ್ಲ ಎನ್ನುವ ವಿಶ್ವಾಸ ಇರುವ ಕಾರಣ ಈ ಪ್ರಯೋಗಕ್ಕೆ ಮುಂದಾಗಲು ರೇವಣ್ಣ ಸಿದ್ಧರಾಗಿದ್ದಾರಂತೆ.
ರೇವಣ್ಣ ಚಿಂತನೆಯ ಹಿಂದಿನ ಲೆಕ್ಕಾಚಾರವೇನು?
ಹೀಗೆ ಎರಡೂ ಕ್ಷೇತ್ರಗಳ ಟಿಕೆಟ್ ಕೇಳಿರುವ ರೇವಣ್ಣ, ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದರೆ, ಹೊಳೆನರಸೀಪುರ ಕ್ಷೇತ್ರಕ್ಕೆ ಉಪಚುನಾವಣೆ ಆಗುವಂತೆ ನೋಡಿಕೊಳ್ಳುವುದು ಹಾಗೂ ಅಲ್ಲಿಂದ ಪತ್ನಿಯನ್ನು ಕಣಕ್ಕಿಳಿಸಿ ಗೆಲುವು ಪಡೆಯುವುದು ಅವರ ಲೆಕ್ಕಾಚಾರ.
ಅಂದರೆ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುವಂತಹ ರಾಜಕೀಯ ದಾಳ ಪ್ರಯೋಗ. ಹೀಗಾದಲ್ಲಿ ದೇವೇಗೌಡರ ಪಕ್ಷ ಪ್ರೇಮಕ್ಕೂ, ಕುಮಾರಸ್ವಾಮಿಯವರ ಕಾರ್ಯಕರ್ತರ ಪ್ರೀತಿಗೂ, ಮತ್ತು ತಮ್ಮ ಪತ್ನಿಯ ರಾಜಕೀಯದ ಎಂಟ್ರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು. ಆ ಮೂಲಕ ಕುಟುಂಬ ರಾಜಕಾರಣಕ್ಕೆ ಧಕ್ಕೆಯಾಗದಂತೆ ರಾಜಕೀಯ ಮುಂದುವರೆಸುವುದು ಅವರ ಚಿಂತನೆ.
ಈ ಕಾರಣದಿಂದಲೇ ಕುಮಾರಸ್ವಾಮಿ ಎದುರು ಮಾತಿಗೂ ನಿಲ್ಲದೆ, ಸಂಪರ್ಕಕ್ಕೂ ಸಿಗದೆ ದೂರ ಉಳಿದಿರುವ ರೇವಣ್ಣ ತಮ್ಮ ಬೇಡಿಕೆಗೆ ಅಪ್ಪನ ಆಶೀರ್ವಾದ ಪಡೆಯಲು ಕಾದು ನಿಂತಿದ್ದಾರೆ. ದೊಡ್ಡಗೌಡರ ಆಡಳಿತ ನಿಪುಣ ಪುತ್ರನ ರಣತಂತ್ರಕ್ಕೆ ಮಾಜಿ ಪಿಎಂ ಏನೆನ್ನೆನ್ನುತ್ತಾರೆ ಎನ್ನುವುದರ ಮೇಲೆ ಹಾಸನ ಟಿಕೆಟ್ ಭವಿಷ್ಯ ನಿರ್ಧಾರವಾಗಲಿದೆ.