ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮ ಪಂಚಾಯತಿಯಲ್ಲಿನ ಸದಸ್ಯರು ಮತ್ತು ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಕರ್ತವ್ಯ ನಿರ್ವಹಿಸವಲ್ಲಿ ಪಂಚಾಯತಿ ಅಸಮರ್ಥವಾಗಿದೆ. ಕೂಡಲೇ ಪರಿಶೀಲಿಸಿ ಪಂಚಾಯತ್ ರಾಜ್ ಅಧಿನಿಯಮ ಅನ್ವಯ ಸದರಿ ಗ್ರಾಮ ಪಂಚಾಯತಿಯನ್ನು ವಿಸರ್ಜನೆ ಮಾಡಬೇಕೆಂದು ಪ್ರಜಾ ಪ್ರಭುತ್ವ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಸಂಬಂಧ ಸಮಿತಿಯ ಪ್ರಮುಖರು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕು ಪಂಚಾಯತ್ ಕಾರ್ಯನಿವಾರ್ಹಕ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಆಡಳಿತದಲ್ಲಿ ಪಾರದರ್ಶಕತೆ ತರಲು ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ನೇರವಾಗಿ ಜನರ ಸಹಭಾಗಿತ್ವದಲ್ಲಿ ಪರಿಶೀಲನೆಗಾಗಿ ಸರಕಾರ ಜಮಾಬಂದಿ ಕಾರ್ಯಕ್ರಮ ಜಾರಿಗೆ ತಂದಿದೆ. ಆದರೆ ಸದರಿ ಗ್ರಾಮ ಪಂಚಾಯಿತಿಯಲ್ಲಿ 2021ರಿಂದ ಇಲ್ಲಿಯವರೆಗೆ ಜಮಾಬಂದಿ ಕಾರ್ಯಕ್ರಮ ಆಯೋಜಿಸದೇ ವಿಫಲವಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯಿತಿಗೆ ತೆರಳಿದರೆ ಅಧಿಕಾರಿಗಳು ಗೈರಾಗಿದ್ದರು, ನಂತರ ತಾಲೂಕು ಪಂಚಾಯಿತಿ ಮುಖಾಂತರ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಮಾಹಿತಿ ನೀಡಲು ವಿಳಂಬ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಗ್ರಾಮ ಪಂಚಾಯಿತಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೆ ಮೀಸಲಿರಿಸಿದ ಅನುದಾನ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಬಳಕೆ ಮಾಡಬೇಕಾದ ಅನುದಾನವನ್ನು ಸಮಪರ್ಕವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ” ಎಂದು ದೂರಿದರು.
ಮೋರಖಂಡಿ ಗ್ರಾಮ ಪಂಚಾಯಿತಿನಲ್ಲಿ ಸಾರ್ವಜನಿಕರ ಕುಂದು ಕೊರತೆ ಪರಿಹಾರ, ಜವಾಬ್ದಾರಿ ಜಾರಿ, ಮತ್ತು ಸ್ಪಂದನಾಶೀಲ ಆಡಳಿತವನ್ನು ಪ್ರೋತ್ಸಾಹಿಸುವ ಉದ್ದೇಶಕ್ಕಾಗಿ ಯಾವುದೇ ಕರ್ತವ್ಯಗಳು ಕ್ರಮಕೈಗೊಂಡಿಲ್ಲ. ಸುಮಾರು 2 ವರ್ಷ 11 ತಿಂಗಳುಗಳಿಂದ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾಗಿರುವುದು ಕಂಡು ಬಂದಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಅನ್ವಯ ಸದರಿ ಗ್ರಾಮ ಪಂಚಾಯತ್ ಕೂಡಲೇ ವಿಸರ್ಜನೆ ಮಾಡುವಂತೆ” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಈ ಸಂದರ್ಭದಲ್ಲಿ ಪ್ರಜಾ ಪ್ರಭುತ್ವ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗಗನ ಫುಲೆ, ಪ್ರಧಾನ ಕಾರ್ಯದರ್ಶಿ ಜೈಪ್ರಕಾಶ ಶಿಂಧೆ, ಉಪಾಧ್ಯಕ್ಷ ಶಿವಕುಮಾರ ಜಾಧವ್ ಇದ್ದರು.