ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಕರ್ನಾಟಕದಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಲಿಂಗಾನುಪಾತದ ಸಮತೋಲನವನ್ನು ಕಾಪಾಡುವುದು ‘ಭ್ರೂಣ ಹತ್ಯೆ ನಿಷೇಧ’ ಕಾಯ್ದೆಯ ಮೂಲ ಉದ್ದೇಶ. ಆದರೂ, ರಾಜ್ಯದ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿ ಹತ್ಯೆ ಮಾಡುವ ಗ್ಯಾಂಗ್‌ವೊಂದು ಸಕ್ರಿಯವಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಈಗಾಗಲೇ 11 ಜನರನ್ನು ಬಂಧಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರಿಂದ ತೀವ್ರ ತನಿಖೆ ನಡೆಯುತ್ತಿದೆ. ಇದರ ನಡುವೆ ರಾಜ್ಯದಲ್ಲಿ ಮೊದಲ ಬಾರಿಗೆ ತನಿಖೆ ವೇಳೆ ಹತ್ಯೆ ಮಾಡಲಾದ ಭ್ರೂಣ ಪತ್ತೆಯಾಗಿದೆ.
ರಾಜ್ಯ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ರಾಜ್ಯಾದ್ಯಂತ ಭ್ರೂಣ ಹತ್ಯೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ದೇವನಹಳ್ಳಿಯ ನಾನಾ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ತನಿಖೆ ವೇಳೆ, ಬೆಂಗಳೂರಿನ ಹೊಸಕೋಟೆಯ ತಿರುಮಲಶೆಟ್ಟಿಹಳ್ಳಿ ಕ್ರಾಸ್ ಬಳಿಯ ಎಸ್ಪಿಜಿ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ 14 ರಿಂದ 16 ವಾರಗಳ ಭ್ರೂಣ ಸಿಕ್ಕಿದೆ. ಇದು ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರೂಣ ಪತ್ತೆಯಾದ ಮೊದಲ ಕೇಸ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ವಾರ ಈ ಆಸ್ಪತೆಯ ದಾಖಲೆಗಳನ್ನು ಪರಿಶೀಲಿಸಿದ್ದ ಅಧಿಕಾರಿಗಳು ಖಾಸಗಿ ಕ್ಲಿನಿಕ್ನಲ್ಲಿ ಅಕ್ರಮ ಸ್ಕ್ಯಾನಿಂಗ್ ಮಿಷನ್ ಪತ್ತೆ ಮಾಡಿದ್ದರು. ರಿಜಿಸ್ಟರ್ ಮಾಡಿಸದೆ ಅಕ್ರಮವಾಗಿ ಸ್ಕ್ಯಾನಿಂಗ್ ಮಿಷನ್ ಇಟ್ಟುಕೊಂಡಿದ್ದರು. ಮತ್ತೆ ಮರುಪರಿಶೀಲನೆಗೆಂದು ಆಸ್ಪತ್ರೆಗೆ ಬಂದಾಗ ಮಹಿಳೆಯೊಬ್ಬರು ಗರ್ಭಪಾತ ಮಾಡಿಸಿಕೊಂಡಿರುವ ಅನುಮಾನ ಉಂಟಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಪರಿಶೀಲನೆ ನಡೆಸಿದಾಗ ಆಪರೇಷನ್ ಥಿಯೇಟರ್ನಲ್ಲಿ ಐದು ತಿಂಗಳ ಗರ್ಭಿಣಿಯ ಭ್ರೂಣ ಹತ್ಯೆ ಮಾಡಿದ್ದಾಗಿ ತಿಳಿದುಬಂದಿದೆ. ಸ್ಥಳದಲ್ಲಿಯೇ 16 ವಾರಗಳ ಹೆಣ್ಣು ಭ್ರೂಣ ಪತ್ತೆಯಾಗಿದೆ.
ಈ ಘಟನೆ ಸಂಭವಿಸಿದ ಕೂಡಲೇ ಆಸ್ಪತ್ರೆಯ ಮಾಲೀಕ ವೈದ್ಯ ಶ್ರೀನಿವಾಸ್ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಕ್ಕಳಿಲ್ಲದಕ್ಕೆ ಅಪಹರಣ ಮಾಡಿ ಸಾಕಲು ಮುಂದಾದ ಬಿಹಾರ ದಂಪತಿ: ಬಂಧನ
ಬೆಳಗ್ಗೆಯಷ್ಟೇ ಭ್ರೂಣಹತ್ಯೆ ಮಾಡಿ ಕವರನಲ್ಲಿ ಸುತ್ತಿಟ್ಟಿದ್ದರು. ಹೀಗಾಗಿ, ಭ್ರೂಣವನ್ನ ವಶಪಡಿಸಿಕೊಂಡು ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ. ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಿಂದ ದೂರು ನೀಡಲಾಗಿದೆ.
ಭ್ರೂಣ ಹತ್ಯೆ ಹಿನ್ನೆಲೆ ಎಸ್ಪಿಜಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆಸ್ಪತ್ರೆ ಸೀಜ್ ಮಾಡಲು ತಯಾರಿ ಮಾಡಲಾಗುತ್ತಿದೆ.