ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- 15; ರಾಜ್ಯ ಸರ್ಕಾರದ ನಿರಾಸಕ್ತಿ

Date:

Advertisements

ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಗಳಿಗೆ ಅಧ್ಯಕ್ಷರು ನೇಮಕವಾಗಿಲ್ಲ

ಚಲನ ಚಿತ್ರೋತ್ಸವಗಳೆಂದರೆ ಸಿನಿಮಾಸಕ್ತರಿಗೆ ಹಬ್ಬವಿದ್ದಂತೆ. ಭಾರತದಾದ್ಯಂತ ಹಲವು ನಗರಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುತ್ತವೆ.

ಈ ಹೊತ್ತಿಗೆ – ಜಿಯೊ ಮಾಮಿ ಮುಂಬೈ ಫಿಲಮ್ ಫೆಸ್ಟಿವಲ್ (MAMI) ಮತ್ತು ಗೋವಾದ ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ (IFFI) ಮುಗಿದಿದೆ. ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ ಆಫ್ ಕೇರಳ (IFFK) ಮತ್ತು ಕೊಲ್ಕತ್ತಾ ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ (KIFF) ನಡೆಯುತ್ತಿದೆ. ಮುಂದೆ ಜನವರಿಯಲ್ಲಿ ಪುಣೆ ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ (PIFF) ನಡೆಯಲಿದೆ. ಮಾರ್ಚ್‌‌ನಲ್ಲಿ ಜರುಗುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಚುಟುಕಾಗಿ Biffes (ಬಿಫೆಸ್) ಎಂದು ಕರೆಯುತ್ತಾರೆ.

Advertisements

ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಡಿಸೆಂಬರ್ 2006ರಲ್ಲಿ ಸುಚಿತ್ರ ಫಿಲಮ್ ಸೊಸೈಟಿ ಆಯೋಜಿಸಿತು. ನಂತರ 2008, 2009ರಲ್ಲಿ ನಡೆದ ಎರಡನೇ ಮತ್ತು ಮೂರನೇ ಚಲನಚಿತ್ರೋತ್ಸವ ಕೂಡ ಸುಚಿತ್ರ ಫಿಲಮ್ ಸೊಸೈಟಿಯ ಉಸ್ತುವಾರಿಯಲ್ಲೇ ಮುಂದುವರೆಯಿತು. ಮುಂದೆ 4ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡು ಡಿಸೆಂಬರ್ 2011ರಲ್ಲಿ ನಡೆಸಿತು. ಅಲ್ಲಿಂದ ಮುಂದೆ ಒಂದೆರೆಡು ತಿಂಗಳು ವ್ಯತ್ಯಾಸವಾದರೂ ಪ್ರತಿ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಕರ್ನಾಟಕ ಸರ್ಕಾರವೇ ಕರ್ನಾಟಕ ಚಲನಚಿತ್ರ ಅಕಾಡೆಮಿಯೊಂದಿಗೆ ನಡೆಸಿಕೊಂಡು ಬಂದಿದೆ. ಈ ವರ್ಷ 2023 ಮಾರ್ಚ್‌ನಲ್ಲಿ ನಡೆದದ್ದು 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.

ಮುಂದಿನ ವರ್ಷ 2024ರಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಬೇಕಿದೆ. ಆದರೆ, ಕರ್ನಾಟಕದಲ್ಲಿ ಬಹುಮತದಿಂದ ಗೆದ್ದು ಬೀಗಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಯಾವ ಮಂಕು ಬಡಿದಿದೆ ತಿಳಿಯುತ್ತಿಲ್ಲ. ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಗಳಿಗೆ ಅಧ್ಯಕ್ಷರು ನೇಮಕವಾಗಿಲ್ಲ. ಹಾಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೂ ಅಧ್ಯಕ್ಷರು ನೇಮಕಗೊಂಡಿಲ್ಲ. ಹೊಸ ಸಮಿತಿಯಾಗಲಿ ರಚನೆಯಾಗಿಲ್ಲ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲು ಕನಿಷ್ಟ ಆರು ತಿಂಗಳಾದರೂ ಪೂರ್ವ ತಯಾರಿ ಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್‌ನಲ್ಲಿ ನಡೆಯಬೇಕಾದ ಚಿತ್ರೋತ್ಸವಕ್ಕೆ ಕೆಲವೇ ತಿಂಗಳುಗಳು ಉಳಿದಿರುವಾಗ ಸರ್ಕಾರ ಹೇಗೆ ತಯಾರಿ ನಡೆಸಿದೆಯೆಂಬ ಯಾವ ಮಾಹಿತಿಯೂ ಸಾರ್ವಜನಿಕವಾಗಿ ಲಭ್ಯವಿಲ್ಲ.

ಕಳೆದ ವರುಷಗಳಲ್ಲಿ ನಡೆದ ಚಿತ್ರೋತ್ಸವಗಳೂ ಬಹು ಶಿಸ್ತಿನಿಂದ ಕೂಡಿರದೆ ಆತುರಾತುರದಲ್ಲೇ ನಡೆದವು. ಚಿತ್ರೋತ್ಸವ ಪ್ರಾರಂಭವಾದರೂ ಡೆಲಿಕೆಟ್ ಪಾಸ್, ಪ್ರದರ್ಶನದ ಸಿನಿಮಾಗಳ ಪಟ್ಟಿ ವಿತರಣೆಯು ಸರಿಯಾದ ಸಮಯಕ್ಕೆ ಸಿನಿಮಾಸಕ್ತರಿಗೆ ಸಿಗದೆ ಪರದಾಡುವುದು ಸಾಮಾನ್ಯ ದೃಶ್ಯವಾಗಿತ್ತು. ಅದರಲ್ಲೂ ಕಳೆದೆರೆಡು ವರ್ಷ ನಡೆದ ಚಿತ್ರೋತ್ಸವದಲ್ಲಿ ಬಿಜೆಪಿ ಸರ್ಕಾರ ಸಿನಿಮಾಗಳ ಆಯ್ಕೆಯಲ್ಲಿ ತನ್ನ ಅಜೆಂಡಾ, ಪೂರ್ವಗ್ರಹಗಳನ್ನು ಹೇರಿ ಹೆಸರು ಕೆಡಿಸಿಕೊಂಡಿತ್ತು. ಇಷ್ಟೆಲ್ಲಾ ಅಪಸವ್ಯಗಳ ನಡುವೆ ಚಿತ್ರೋತ್ಸವಗಳು ನಡೆದರೂ, ಜನರಿಗೆ ಒಂದಷ್ಟು ಒಳ್ಳೆಯ ಗುಣಮಟ್ಟದ ಜಾಗತಿಕ ಸಿನಿಮಾಗಳು ಇದ್ದದ್ದು ಸಮಾಧಾನದ ಸಂಗತಿಯಾಗಿತ್ತು. ಆದರೆ, ಈ ಬಾರಿ ಸರ್ಕಾರದ ನಿರಾಸಕ್ತಿಯನ್ನು ಗಮನಿಸಿದರೆ ಚಿತ್ರೋತ್ಸವ ನಡೆಯುವುದೇ ಸಂಶಯವಾಗಿದೆ.

ಚಲನಚಿತ್ರೋತ್ಸವಗಳು ಜಗತ್ತಿಗೆ ತೆರೆದ ಕಿಟಕಿಯಿದ್ದಂತೆ. ಸಾಮಾನ್ಯರಿಗೆ ಜಾಗತಿಕ ಸಿನಿಮಾಗಳು ಹಲವು ಭಾಷೆ, ಸಂಸ್ಕೃತಿ, ಸಾಮಾಜಿಕ, ರಾಜಕೀಯ ಮುಖಗಳನ್ನು ಪರಿಚಯ ಮಾಡಿದರೆ, ಸಿನಿಮಾ ಕುತೂಹಲಿಗಳಿಗೆ, ಸಿನಿಮಾ ಆಸ್ತಕರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಸಿನಿಮಾಗಳನ್ನು ನೋಡಿ ಅದರ ವ್ಯಾಕರಣವನ್ನು ಅರಿಯುವ ವೇದಿಕೆಯಾಗುತ್ತವೆ. ಚಲನ ಚಿತ್ರೋತ್ಸವಗಳಲ್ಲಿ ಸತತವಾಗಿ ಭಾಗಿಯಾಗಿ, ಸ್ಫೂರ್ತಿಗೊಂಡು, ಕಲಿತು ತಾವೇ ಸಿನಿಮಾ ನಿರ್ಮಾಣ ಮಾಡಿದ ಹಲವು ಪ್ರಸಿದ್ಧ ನಿರ್ದೇಶಕರು ಕನ್ನಡದಲ್ಲೇ ಇದ್ದಾರೆ. ಸಾಹಿತ್ಯ, ನಾಟಕ, ಸಂಗೀತ, ಚಿತ್ರಕಲೆ, ಶಿಲ್ಪಕಲೆಯನ್ನು ಸಂಸ್ಕೃತಿಯ ಭಾಗವಾಗಿ ಕಾಣುವ ಭಾರತದಲ್ಲಿ ಸಿನಿಮಾವನ್ನು ಪಾಶ್ಚಿಮಾತ್ಯ ದೇಶಗಳಂತೆ ಸಂಸ್ಕೃತಿಯೆಂದು ಪರಿಗಣಿಸದೆ ಕೇವಲ ಮನರಂಜನೆಯ ಮಾಧ್ಯಮವಾಗಿ ನೋಡುತ್ತಿರುವುದು ವಿಷಾದಕರ.

ಸಾಹಿತ್ಯ, ನಾಟಕ, ಕಲೆಯ ಬಗ್ಗೆ ಸಂವೇದನೆ ಉಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಲನಚಿತ್ರೋತ್ಸವದ ತಯಾರಿಗೆ ಚಾಲನೆ ನೀಡಿ, ಒಂದಷ್ಟು ದಿನಗಳು ತಡವಾದರೂ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ತಪ್ಪದೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಸಿನಿಮಾರಂಗದಲ್ಲಿರುವವರು ಈ ವಿಚಾರವಾಗಿ ಸರ್ಕಾರದ ಗಮನ ಸೆಳೆಯುತ್ತಾರೆಂದು ಆಶಿಸೋಣ.

chandraprabha ೧
ಚಂದ್ರಪ್ರಭ ಕಠಾರಿ
+ posts

ಸಿನಿಮಾಸಕ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ
ಸಿನಿಮಾಸಕ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಣಮ್ ದೇವರಾಜ್ ಅಭಿನಯದ ‘S/O ಮುತ್ತಣ್ಣ’ ಸೆ.12ಕ್ಕೆ ತೆರೆಗೆ

ಪುರಾತನ ಫಿಲಂಸ್ ನಿರ್ಮಾಣದ ಶ್ರೀಕಾಂತ್ ಹುಣಸೂರು ನಿರ್ದೇಶನದ ಡೈನಮಿಕ್ ಹೀರೊ ದೇವರಾಜ್...

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ನಿಧನ

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ಅವರು ಆಗಸ್ಟ್...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

Download Eedina App Android / iOS

X