ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸೇವಾ ಕಾಯಂಮಾತಿ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.23 ರಿಂದ ತರಗತಿಗೆ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ತರಗತಿಗಳು ಇಲ್ಲದಂತಾಗಿ ವಿದ್ಯಾರ್ಥಿಗಳಿಗೆ ಸಂಕಷ್ಟ ಉಂಟಾಗಿದೆ.
ಬೀದರ್ ಜಿಲ್ಲೆಯಲ್ಲಿ ಔರಾದ, ಬೀದರ್, ಭಾಲ್ಕಿ, ಹುಲಸೂರು, ಹುಮನಾಬಾದ್, ಬಸವಕಲ್ಯಾಣ, ಮನ್ನಳಿ, ಚಿಟಗುಪ್ಪಾ ಹಾಗೂ ಘೋಡಂಪಳ್ಳಿ ಸೇರಿದಂತೆ ಒಟ್ಟು 10 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಬಹುತೇಕ ಎಲ್ಲಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಾಗಿದ್ದಾರೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 240 ಕ್ಕಿಂತ ಹೆಚ್ಚು ಉಪನ್ಯಾಸಕರ ಮೇಲೆಯೇ ತರಗತಿಗಳು ಅವಲಂಬಿತವಾಗಿವೆ. ಕೆಲವು ಕಾಲೇಜಿನಲ್ಲಿ ಶೇ. 85-90 ಅತಿಥಿ ಉಪನ್ಯಾಸಕರೇ ಇರುವ ಕಾರಣ ಕಾಯಂ ಉಪನ್ಯಾಸಕರು ಇದ್ದರೂ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
ಔರಾದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಒಟ್ಟು 920 ವಿದ್ಯಾರ್ಥಿಗಳಿದ್ದಾರೆ. ಆದರೆ ಬರೀ 8 ಜನ ಮಾತ್ರ ಖಾಯಂ ಉಪನ್ಯಾಸಕರಿದ್ದರೆ, 30 ಜನ ಅತಿಥಿ ಉಪನ್ಯಾಸಕರಿದ್ದಾರೆ. ಇದರಿಂದ ಗ್ರಾಮೀಣ ಭಾಗದಿಂದ ಬರುವ ನೂರಾರು ವಿದ್ಯಾರ್ಥಿಗಳಿಗೆ ತರಗತಿಗಳಿಲ್ಲದೆ ದಿನಾಲೂ ವಾಪಸ್ ಹೋಗುವ ಪರಿಸ್ಥಿತಿ ಬಂದಿದೆ.
“ನಮ್ಮ ಕಾಲೇಜಿನಲ್ಲಿ ಸುಮಾರು 900 ಕ್ಕಿಂತ ಅಧಿಕ ದಾಖಲಾತಿ ಇದೆ, ಆದರೆ ಹಾಜರಾತಿ ಇರುವುದು 200 ತನಕ ಅಷ್ಟೇ, ಎಲ್ಲರೂ ಅತಿಥಿ ಉಪನ್ಯಾಸಕರೇ ಇದ್ದಾರೆ, ಇರುವ 8 ಅತಿಥಿ ಉಪನ್ಯಾಸಕರು ಒಂದೆರಡು ವಿಷಯ ಪಾಠ ಮಾಡುತ್ತಾರೆ. ಅತಿಥಿ ಊಪನ್ಯಾಸಕರ ಪ್ರತಿಭಟನೆ ಶುರುವಾದ ಕಳೆದ 20 ದಿನಗಳಿಂದ ತರಗತಿಗಳೇ ಇಲ್ಲದಂತಾಗಿವೆ ಎಂದು ಕಲಾ ವಿಭಾಗದ ವಿದ್ಯಾರ್ಥಿಯೊಬ್ಬರು ವಿವರವಾಗಿ ತಿಳಿಸಿದರು.

ಪರೀಕ್ಷೆಯಿಲ್ಲದೇ ಪಾಸು ಮಾಡಿ:
“ಅತಿಥಿ ಉಪನ್ಯಾಸಕರು ತರಗತಿಗಳ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಕಾರಣ ನಮಗೆ ಪಾಠ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪರೀಕ್ಷೆಗಳು ಸಮೀಪಿಸುತ್ತಿವೆ ಹೀಗಾಗಿ ಪಾಠವಿಲ್ಲದೆ ವಿದ್ಯಾರ್ಥಿಗಳಿಗೆ ಆತಂಕ ಕಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೆರಿಸಬೇಕು. ಇಲ್ಲವಾದಲ್ಲಿ ಪರೀಕ್ಷೆ ನಡೆಸದೇ ಪಾಸು ಮಾಡಬೇಕು” ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ರತ್ನದೀಪ ಕಸ್ತೂರೆ ನೇತ್ರತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಔರಾದ ತಹಸೀಲ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮಾಡಿದರು.
ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆಯಲಿ:
“ನಮಗೆ ಯುಜಿಸಿ ನಿಯಮಾನುಸಾರ ಅರ್ಹತೆ ಇದ್ದರೂ ಸಹ ಕಾಯಂ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈಗಾಗಲೇ 15-20 ವರ್ಷ ಸೇವೆ ಸಲ್ಲಿಸಿರುವ ನಮ್ಮನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಜೀವನ ನಿರ್ವಹಣೆ ಸಾಧ್ಯವಾಗದ ಕೆಲವರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಕೆಲವು ಜನರಿಗೆ ನಿವೃತ್ತಿ ಹತ್ತಿರವಾಗಿದೆ. ಯಾವುದೇ ಸೌಲಭ್ಯಗಳನ್ನು ನೀಡಿಲ್ಲದಿರುವುದರಿಂದ ನಮ್ಮೆಲ್ಲರ ಜೀವನವು ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕಾಂಗ್ರೇಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಪ್ರಣಾಣಿಕೆಯಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿತು. ಇದೀಗ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದೆ. ಭರವಸೆ ನೀಡಿದಂತೆ ಸರ್ಕಾರ ನುಡಿದಂತೆ ನಡೆದುʼ ನಮ್ಮ ಸೇವೆ ಪರಿಗಣಿಸಿ ಎಲ್ಲಾ ಬೇಡಿಕೆಗಳು ಈಡೇರಿಸಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡುವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾನಿರತ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಔರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಸೂರ್ಯಕಾಂತ ಚಿದ್ರೆ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ, 8 ಜನ ಖಾಯಂ ಉಪನ್ಯಾಸಕರಿದ್ದಾರೆ. ಅಲ್ಲಿಯವರೆಗೆ ತರಗತಿಗಳು ಹೇಗೆ ನಡೆಸುವುದು ಎಂಬುದು ಗೊತ್ತಾಗುತ್ತಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಸಿ ದೇಶಭಕ್ತಿಯ ಆಕ್ರೋಶದಲ್ಲಿ ಸುಟ್ಟು ಹೋಗದಿರಲಿ ‘ಅತಿಕ್ರಮಣದ’ ಸಂದೇಶ
ಉಪನ್ಯಾಸಕರ ಪ್ರತಿಭಟನೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತೆ ಎಂಬ ಆತಂಕ ಕಾಡುತ್ತಿದೆ ಎಂಬುದು ಪೋಷಕರು ಅಭಿಮತ.