ಸಂಸತ್ತಿನಲ್ಲಿ ನಡೆದ ಘಟನೆಯ ಮನೋರಂಜನ ಎಂಬ ವ್ಯಕ್ತಿಯು ಎಸ್‌ಎಫ್‌ಐ ಸಂಘಟನೆಯವರು ಎಂದು ಸುಳ್ಳು ಸುದ್ದಿ ಹಂಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಲಬುರಗಿ ಜಿಲ್ಲಾಧಿಕಾರಿ ಮುಖಾಂತರ ಗೃಹಮಂತ್ರಿಗಳಿಗೆ ಎಸ್‌ಎಫ್‌ಐ ಮನವಿ ಪತ್ರ ಸಲ್ಲಿಸಿತು.
ಎಸ್‌ಎಫ್‌ಐ ಜಿಲ್ಲಾ ಸಂಚಾಲಕಿ ಸುಜಾತಾ ಮಾತನಾಡಿ, ಈ ದೇಶದ ಪ್ರಜೆಗಳನ್ನು ಪ್ರತಿನಿಧಿಸುವ ಪವಿತ್ರ ಸ್ಥಳವಾದ ಲೋಕಸಭೆಯಲ್ಲಿ ಇಂದು ಕೆಲವು ಕಿಡಿಗೆಡಿಗಳು ನುಗ್ಗಿ ಕಲರ್ ಗ್ಯಾಸ್ ಸಿಂಪಡಿಸುವ ಮೂಲಕ ಭಾರಿ ಭದ್ರತಾ ಲೋಪವನ್ನು ಎಸಗಿದ್ದಾರೆ. ಇದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದರೂ.
ಈ ಕೃತ್ಯ ಎಸಗಿದವರನ್ನು ಈಗಾಗಲೇ ಬಂಧಿಸಿಲಾಗಿದೆ. ಅವರನ್ನು ಸೂಕ್ತ ವಿಚಾರಣೆ ಒಳಪಡಿಸಿ ಕಾನೂನಿನ ಕ್ರಮಕ್ಕೆ ಮುಂದಾಗಬೇಕೆಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ಕೃತ್ಯ ಎಸಗಿದವರ ಪೈಕಿ ಇಬ್ಬರೂ ಕರ್ನಾಟಕ, ಒಬ್ಬರು ಹರಿಯಾಣ ಮತ್ತೋರ್ವರು ಮಹಾರಾಷ್ಟ್ರ ಮೂಲದವರೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇವರೆಲ್ಲ ಲೋಕಸಭೆ ಪ್ರವೇಶ ಮಾಡಲು ಇವರಿಗೆ ಪಾಸ್ ನೀಡಿದವರು ಯಾರು? ಇವರ ಹಿಂದೆ ಯಾರೆಲ್ಲಾ ಇದ್ದಾರೆ, ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು? ಮತ್ತು ಇವರ ಉದ್ದೇಶ ಏನಾಗಿತ್ತು ಎಂಬುದರ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಅವರು ಆಗ್ರಹಿಸಿದರು.
ಎಸ್ಎಫ್ಐ ಸಂಘಟನೆ ತ್ಯಾಗ ಬದ್ಧತೆ ಮತ್ತು ಸಿದ್ದಾಂತವನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ, ಶಿಕ್ಷಣದ ಮತ್ತು ಸಮಾಜದ ಪ್ರಗತಿಗಾಗಿ ಹಾಗೂ ಸೌಹಾರ್ದ, ಸಾಮರಸ್ಯದ ಘನತೆಯ ಬದುಕಿಗಾಗಿ ದಶಕಗಳಿಂದ ವಿದ್ಯಾರ್ಥಿ ಸಮುದಾಯದ ಪರವಾಗಿ ದೇಶಾದ್ಯಂತ ಹೋರಾಟ ಮಾಡುತ್ತಾ ಬರುತ್ತಿದೆ. ಇದನ್ನು ಸಹಿಸದ ಈ ದೇಶದ ಕೋಮುವಾದಿ ಪಕ್ಷದ ಕಾರ್ಯಕರ್ತರು ಸೈದ್ದಾಂತಿಕವಾಗಿ ಸಂಘಟನೆಯನ್ನು ಎದುರಿಸಲಾಗದೆ, ಈ ಪ್ರಕರಣದಲ್ಲಿ ವಿನಾಕಾರಣ ಎಸ್ಎಫ್ಐ ಮೈಸೂರು ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಇವರ ಪೋಟೋವನ್ನು ದುರ್ಬಳಕೆ ಮಾಡಿಕೊಂಡು, ಇವನೆ ಮನೋರಂಜನ ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯವರು ಸೋಶಿಯಲ್ ಮೀಡಿಯಾದಲ್ಲಿ ಅಪ್ರಚಾರ ಮಾಡುತ್ತಾ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಗಳ ಬಂಧನವಾದರೂ ದುರುದ್ದೇಶದಿಂದ ಇಂತಹ ಕೆಲಸ ಮಾಡುತ್ತಿರುವ ಬಿಜೆಪಿಯ ಐಟಿ ಸೆಲ್‌ಗಳು ಹಾಗೂ ಅದನ್ನು ನಿರ್ವಹಿಸುವ ಅಡ್ಮಿನ್‌ಗಳನ್ನು ಮತ್ತು ಸುಳ್ಳು ಸುದ್ದಿಯನ್ನು ಶೇರ್ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು ಹಾಗೂ ಗುಂಪುಗಳ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಎಸ್‌ಎಫ್‌ಐ ಮನವಿ ಪತ್ರದಲ್ಲಿ ಆಗ್ರಹಿಸಿದೆ.