ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದಂತೆ ಹೆಣ್ಣುಮಕ್ಕಳ ಬದುಕನ್ನು ಸಹನೀಯಗೊಳಿಸುವ ಪ್ರಯತ್ನವನ್ನು ಪ್ರಭುತ್ವ ಮಾಡಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ. ಮಹಿಳೆಯರಿಗೆ ತಿಂಗಳಲ್ಲಿ ಎರಡು ದಿನ, ಅದೂ ಅವರು ಬಯಸಿ ಕೇಳಿದರೆ ಮುಟ್ಟಿನ ರಜೆ ಕೊಡುವುದರಿಂದ ದೇಶಕ್ಕೆ ತುಂಬಲಾರದ ನಷ್ಟವೇನೂ ಆಗದು.
“ಮುಟ್ಟು ಅಂಗವೈಕಲ್ಯವಲ್ಲ. ಆ ದಿನಗಳಲ್ಲಿ ಮಹಿಳೆಯರಿಗೆ ವಿಶೇಷ ರಜೆ ಸೌಲಭ್ಯ ನೀಡುವ ಅಗತ್ಯವಿಲ್ಲ“. ಮುಟ್ಟಿನ ನೈರ್ಮಲ್ಯ ನೀತಿ ಜಾರಿ ಕುರಿತು ನಿನ್ನೆ ರಾಜ್ಯಸಭೆಯಲ್ಲಿ ಮನೋಜ್ ಕುಮಾರ್ ಝಾ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಕೊಟ್ಟ ಉತ್ತರವಿದು!
ಅಂಗವೈಕಲ್ಯ ಇರುವವರನ್ನು ನಮ್ಮ ಸರ್ಕಾರಗಳು ವಿಶೇಷ ಕಾಳಜಿ ವಹಿಸಿ ಹೊತ್ತು ಮೆರೆಸುತ್ತಿವೆಯೇ? ಅಥವಾ ಮುಟ್ಟಿನ ನೋವಿನ ಕಾರಣಕ್ಕೆ ಅಂತಹ ದಿನಗಳಲ್ಲಿ ಕಡಿಮೆ ಅವಧಿ ದುಡಿಸಿಕೊಳ್ಳುವ ಅಥವಾ ದುಡಿಯುವ ಸ್ಥಳದಲ್ಲಿಯೇ ಕನಿಷ್ಠ ಒಂದರ್ಧ ಗಂಟೆ ವಿರಾಮ ಪಡೆಯುವ ವ್ಯವಸ್ಥೆ ನಮ್ಮಲ್ಲಿ ಇದೆಯೇ ?
ಮುಟ್ಟಿನ ರಜೆಯ ಚರ್ಚೆ ಸಂಸತ್ತಿನವರೆಗೆ ಹೋಗಲು ಕಾರಣವಾಗಿದ್ದು ಕೇರಳದ ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಐತಿಹಾಸಿಕ ತೀರ್ಮಾನ. ಕೆಲವು ತಿಂಗಳ ಹಿಂದೆ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಕೊಡುವ ತೀರ್ಮಾನವನ್ನು ಕೊಚ್ಚಿ ವಿವಿ ಕೈಗೊಂಡಿತ್ತು. ಕೇರಳದ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸೇರಿದಂತೆ ವಿದ್ಯಾರ್ಥಿಗಳ ಒಕ್ಕೂಟದ ಒತ್ತಾಯದ ಮೇರೆಗೆ ಕೊಚ್ಚಿ ವಿವಿ ತೆಗೆದುಕೊಂಡ ಈ ತೀರ್ಮಾನವನ್ನು ಕೇರಳ ಸರ್ಕಾರ ರಾಜ್ಯದ ಎಲ್ಲ ವಿವಿಗಳಿಗೆ ವಿಸ್ತರಿಸಿತ್ತು. ವಿವಿ ನಿಯಮದ ಪ್ರಕಾರ ಕಡಿಮೆ ಹಾಜರಾತಿ ಹೊಂದಿರುವ ಸಂದರ್ಭದಲ್ಲಿ ಒಂದು ಸೆಮಿಸ್ಟರ್‌ನ ಶೇ. 2ರಷ್ಟು ರಜೆಯನ್ನು ವಿದ್ಯಾರ್ಥಿನಿಯರು ಮುಟ್ಟಿನ ರಜೆಯೆಂದು ಬದಲಾಯಿಸಿಕೊಳ್ಳಬಹುದಾಗಿದೆ. ಆ ನಂತರ ಈ ನಿಯಮವನ್ನು ದೇಶಕ್ಕೆ ಅನ್ವಯಿಸುವ ಸಂಬಂಧ ಚರ್ಚೆಗಳು ಶುರುವಾಗಿದ್ದವು.
ಅಂಗವಿಕಲತೆ ಅಲ್ಲದ, ಆದರೆ ಮುಟ್ಟಿನ ದಿನಗಳಲ್ಲಿ ಕಾಡುವ ಹಲವು ಬಗೆಯ ಆರೋಗ್ಯ ಸಮಸ್ಯೆಗಳ ನಡುವೆಯೇ ಮಹಿಳೆಯರು ದುಡಿಯುತ್ತಿದ್ದಾರೆ. ಮನೆಯ ಒಳಗೂ– ಹೊರಗೂ ದುಡಿಯುತ್ತಾರೆ ಹೆಣ್ಣುಮಕ್ಕಳು. ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಅವರದು ಬಹುದೊಡ್ಡ ಪಾಲು. ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ, ಬೆನ್ನು, ಸೊಂಟ ನೋವು, ಸುಸ್ತು, ಖಿನ್ನತೆಯ ನಡುವೆಯೂ ಕಾರ್ಖಾನೆಗಳಲ್ಲಿ ಯಂತ್ರಗಳ ಮುಂದೆಯೂ ದುಡಿಯುತ್ತಿದ್ದಾರೆ. ಗಾರ್ಮೆಂಟ್ಸ್‌ಗಳಲ್ಲಿ ಏಳೆಂಟು ಗಂಟೆ ಹೊಲಿಗೆ ಯಂತ್ರ ತುಳಿಯುತ್ತಾರೆ. ಶಾಲೆ, ಕಾಲೇಜುಗಳಲ್ಲಿ ನಾಲ್ಕಾರು ಗಂಟೆಗಳ ಕಾಲ ನಿಂತೇ ಪಾಠ ಮಾಡುತ್ತಿದ್ದಾರೆ. ಬಸ್ ಕಂಡಕ್ಟರ್ ವೃತ್ತಿಯನ್ನೂ ಮಾಡುತ್ತಿದ್ದಾರೆ. ಬಹುತೇಕ ದುಡಿಯುವ ಮಹಿಳೆಯರು ಸರ್ಕಾರಿ ಬಸ್, ಮೆಟ್ರೋ, ಆಟೋ, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು. ಆ ದಿನಗಳಲ್ಲಿ ಅವರು ಅನುಭವಿಸುವ ನೋವು, ಸಂಕಟ ಅವರಿಗಷ್ಟೇ ಗೊತ್ತು. ಸಚಿವೆ ಸ್ಮೃತಿ ಇರಾನಿಯವರೂ ಈ ಸಹಜ ಹೆಣ್ಣಿನ ಸಂಕಟಗಳನ್ನು ಹಾದು ಬಂದಿರಲೇಬೇಕು. ಹಾಗಿದ್ದೂ ದೇಶದ ಹೆಣ್ಣುಮಕ್ಕಳ ಪರ ನಿಲ್ಲದೇ ಕಡುನಿಷ್ಠುರದ ಮಾತುಗಳನ್ನಾಡಿ ಅವರು ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ?
ಮುಟ್ಟಿನಿಂದಾಗಿ ಅವರ ಕೆಲಸಕ್ಕೆ ತೊಂದರೆ ಆಗುತ್ತಿಲ್ಲ ಎಂದು ಸಚಿವೆ ಹೇಳಿದ್ದಾರೆ. ಹೆಣ್ಣೆಂಬ ಕಾರಣಕ್ಕೆ ತನ್ನನ್ನು ತುಳಿದಿಟ್ಟಿರುವ ಮತ್ತು ತಾರತಮ್ಯ ಮಾಡುವ ವ್ಯವಸ್ಥೆಯಲ್ಲಿ ಸಿಕ್ಕಿ ಸೆಣೆಸುತ್ತಿದ್ದಾಳೆ ಮಹಿಳೆ. ತನ್ನ ಕರ್ತವ್ಯನಿಷ್ಠೆ, ಧಾರಣ ಶಕ್ತಿಯಿಂದ ನೋವನ್ನು ಸಹಿಸಿದ್ದಾಳೆ. ತನ್ನ ನೋವುಗಳನ್ನು ಕೆಲಸಕಾರ್ಯಗಳಲ್ಲಿ ತೋರಿಸಿಲ್ಲ ಎಂದ ಮಾತ್ರಕ್ಕೆ ತೊಂದರೆಯೇ ಇಲ್ಲ ಎಂದು ಅರ್ಥವೇ?
ಸ್ಮೃತಿ ಇರಾನಿ ಮಾತ್ರವಲ್ಲ, ಮೋದಿ ಸರ್ಕಾರದಲ್ಲಿ ಮಹಿಳಾಪರ ಸೂಕ್ಷ್ಮ ಸಂವೇದನೆ ಇರುವ ಒಬ್ಬ ಮಂತ್ರಿಯೂ ಇಲ್ಲ. ಅವರ ನಿಲುವುಗಳು ಸೂತ್ರಧಾರರು ಕುಣಿಸಿದಂತೆ ಕುಣಿಯುವ ಕೀಲು ಕುದುರೆಗಳಂತೆ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ, ಅಸಮಾನತೆಯ ಬಗ್ಗೆ ಮಹಿಳಾ ಪ್ರತಿನಿಧಿಗಳು ಅಧಿಕಾರ ಸ್ಥಾನದಲ್ಲಿದ್ದರೂ ಧ್ವನಿ ಎತ್ತುತ್ತಿಲ್ಲ. ಸಂಸತ್ತಿನಲ್ಲಿ ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರದ ಬಗ್ಗೆ ಚರ್ಚೆ ನಡೆಯುವಾಗ ಇದೇ ಸಚಿವೆ ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರವನ್ನು ಮುಕ್ತವಾಗಿ ಖಂಡಿಸಲೂ ಮೋದಿ ಸರ್ಕಾರದಲ್ಲಿ ಸ್ವಾತಂತ್ರ್ಯವಿಲ್ಲವೇನೋ, ಅಥವಾ ಇವರು ಇರುವುದೇ ಹೀಗೇಯೇನೋ ಎಂಬ ಅನುಮಾನ ಬರುತ್ತದೆ.
1990ರ ದಶಕದಲ್ಲೇ ಬಿಹಾರ ಸರ್ಕಾರ ದುಡಿಯುವ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಜಾರಿಗೊಳಿಸಿತ್ತು. ಬಳಿಕ, ಕೇರಳ ಈ ಕ್ರಮ ಕೈಗೊಂಡಿದೆ. ಕಳೆದ ವಾರವಷ್ಟೇ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದ ಪ್ರಶ್ನೆಗೆ ಉತ್ತರಿಸಿ, ಎಲ್ಲ ಕಾರ್ಯವಲಯಗಳಲ್ಲೂ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ಸರ್ಕಾರದ ಎದುರು ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದರು. ಈಗ ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರಷ್ಟೇ. ಈ ಕಲ್ಲುಹೃದಯ ಅನಿರೀಕ್ಷಿತವೇನೂ ಅಲ್ಲ.
ಋತುಚಕ್ರದ ವೇಳೆ ಮಹಿಳೆಯರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು, ಬೆನ್ನು – ಕಾಲು ನೋವಿನ ಜೊತೆ ತಲೆನೋವು, ವಾಂತಿ, ವಾಕರಿಕೆಯೂ ಬರುತ್ತದೆ. ಇದು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಕಿರಿಕಿರಿ ಉಂಟುಮಾಡುತ್ತದೆ. ಈ ಸಮಯದಲ್ಲಿ ಅವರಿಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ಇಂತಹ ಸಂದರ್ಭಗಳಲ್ಲಿಯೂ ವಿದ್ಯಾರ್ಥಿನಿಯರು, ದುಡಿಯುವ ಮಹಿಳೆಯರು ಅನಿವಾರ್ಯವಾಗಿ ಕಾಲೇಜು, ಕಚೇರಿಗಳಿಗೆ ಹೋಗಬೇಕಾಗುತ್ತದೆ. ಮನೆಗೆಲಸಗಳನ್ನೂ ನಿರ್ವಹಿಸಬೇಕಾಗುತ್ತದೆ. ಅವೆಲ್ಲವನ್ನೂ ಮಾಡುತ್ತಲೇ ಬಂದಿದ್ದಾರೆ. ಮುಂದೆಯೂ ಮಾಡುತ್ತಾರೆ.
ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದಂತೆ ಪ್ರಭುತ್ವವು ಹೆಣ್ಣುಮಕ್ಕಳ ಬದುಕನ್ನು ಸಹನೀಯಗೊಳಿಸುವ ಪ್ರಯತ್ನ ಮಾಡಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ. ಮಹಿಳೆಯರಿಗೆ ತಿಂಗಳಲ್ಲಿ ಎರಡು ದಿನ ಅದೂ ಅವರು ಬಯಸಿ ಕೇಳಿದರೆ ಮುಟ್ಟಿನ ರಜೆ ಕೊಡುವುದರಿಂದ ದೇಶಕ್ಕೆ ನಷ್ಟವೇನೂ ಆಗದು.
