ಸಂಸತ್ತಿನಲ್ಲಿ ನಡೆದ ಘಟನೆಯ ಆರೋಪಿ ಮನೋರಂಜನ್ ಎಂಬಾತ ಎಸ್‌ಎಫ್‌ಐ ಸಂಘಟನೆಯ ಮುಖಂಡನೆಂದು ಸುಳ್ಳು ಹರಡಲಾಗುತ್ತಿದೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ ಮುಖಂಡರು ಗದಗ ಅಪರ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ದೇಶದ ಪ್ರಜೆಗಳನ್ನು ಪ್ರತಿನಿಧಿಸುವ ಪವಿತ್ರ ಸ್ಥಳವಾದ ಲೋಕಸಭೆಯಲ್ಲಿ ಕೆಲವರು ನುಗ್ಗಿ ಬಣ್ಣದ ಅನಿಲ ಸಿಂಪಡಿಸಿದ್ದು, ಭದ್ರತಾ ಲೋಪವನ್ನು ಎಸಗಿದ್ದಾರೆ. ಇದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ ಎಂದು ಎಸ್‌ಎಫ್‌ಐ ಮುಖಂಡ ಗಣೇಶ ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದರು.
“ಪ್ರಕರಣದಲ್ಲಿ ವಿನಾಕಾರಣ ಎಸ್ಎಫ್ಐ ಮೈಸೂರು ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್ ಅವರ ಪೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ವಿಜಯ್ ಕುಮಾರ್ ಅವರನ್ನು ಮನೋರಂಜನ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿಗರು ಸೋಶಿಯಲ್ ಮೀಡಿಯಾದಲ್ಲಿ ಅಪ್ರಚಾರ ಮಾಡುತ್ತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ಈ ಕೃತ್ಯ ಎಸಗಿದವರನ್ನು ಈಗಾಗಲೇ ಬಂಧಿಸಿಲಾಗಿದೆ. ಅವರನ್ನು ಸೂಕ್ತ ವಿಚಾರಣೆ ಒಳಪಡಿಸಿ ಕಾನೂನಿನ ಕ್ರಮಕ್ಕೆ ಮುಂದಾಗಬೇಕೆಂದು ಎಸ್ಎಫ್ಐ ಸಂಘಟನೆ ಒತ್ತಾಯಿಸುತ್ತದೆ. ಕೃತ್ಯ ಎಸಗಿದವರ ಪೈಕಿ ಒಬ್ಬ ಕರ್ನಾಟಕ, ಒಬ್ಬರು ಹರಿಯಾಣ ಮತ್ತೋರ್ವರು ಮಹಾರಾಷ್ಟ್ರ ಮೂಲದವರೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇವರೆಲ್ಲ ಲೋಕಸಭೆ ಪ್ರವೇಶ ಮಾಡಲು ಇವರಿಗೆ ಪಾಸ್ ನೀಡಿದವರು ಯಾರು? ಇವರ ಹಿಂದೆ ಯಾರೆಲ್ಲಾ ಇದ್ದಾರೆ, ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು? ಮತ್ತು ಇವರ ಉದ್ದೇಶ ಏನಾಗಿತ್ತು ಎಂಬುದರ ಕುರಿತು ಸಮಗ್ರ ತನಿಖೆ ನಡೆಯಲಿ” ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹೇಳಿದ್ದಾರೆ.
ಈ ವೇಳೆ ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಚಂದ್ರು ರಾಠೋಡ್, ಪ್ರದೀಪ್ ಎಂ, ಶರಣು ಎಂ ಮತ್ತು ಇತರರು ಇದ್ದರು.