ಮನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಮೂರ್ನಾಲ್ಕು ತಿಂಗಳಿಂದ ಕೂಲಿ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮನರೇಗಾ ಕಾರ್ಮಿಕರು ಪ್ರಧಾನಿ ನರೇಂದ್ರ ಮೋದಿ ಅಂಚೆ ಪತ್ರ ಬರೆದಿದ್ದಾರೆ.
ಮನರೇಗಾ ಕಾರ್ಮಿಕರು ಪ್ರಧಾನಿ ಪತ್ರ ಬರೆಯುವ ಮೂಲಕ ರಾಜ್ಯಾದ್ಯಂತ ಪತ್ರ ಚಳುವಳಿ ನಡೆಸಿದ್ದಾರೆ. ಅಂತೆಯೇ, ಚಿತ್ರದುರ್ಗ ತಾಲೂಕಿನ ಐನಳ್ಳಿ, ಕೋಗುಂಡೆ, ಪಂಜಯ್ಯನಹಟ್ಟಿ ಸೇರಿದಂತೆ ಹಲವಾರು ಗ್ರಾಮಗಳ ಮನರೇಗಾ ಕಾರ್ಮಿಕರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
“ಮೂರು ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮಾಡಿದ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು. ತಾಲೂಕುಗಳಲ್ಲಿ ಬರಗಾಲವೆಂದು ಘೋಷಣೆ ಮಾಡಲಾಗಿದೆ. ಹೀಗಾಗಿ, ಮನರೇಗಾ ಅಡಿಯಲ್ಲಿ ಹೆಚ್ಚುವರಿಯಾಗಿ 50 ಮಾನವ ದಿನಗಳ ಕೆಲಸ ಘೋಷಿಸಬೇಕು” ಎಂದು ಗ್ರಾಮೀಣ ಕೂಲಿ ಕಾರರ ಸಂಘದ ತಾಲೂಕು ಕಾರ್ಯದರ್ಶಿ ತೇಜೇಶ್ವರಿ ಒತ್ತಾಯಿಸಿದ್ದಾರೆ.
“ಇಡೀ ರಾಜ್ಯದಲ್ಲಿ ಮಳೆ ಇಲ್ಲದೆ ಬರೀ ಆವರಿಸಿ ಜನರು ಕಂಗಾಲಾಗಿದ್ದಾರೆ. ಜನರು ಜೀವನ ಮಾಡುವುದೇ ಕಷ್ಟಕರವಾಗಿದೆ. ಸರ್ಕಾರಗಳು ಕೂಡಲೇ ಹಣ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಐನಳ್ಳಿ,ಕೋಗುಂಡೆ, ಪಂಜಯ್ಯನಹಟ್ಟಿಯ ಮತ್ತು ಇತರ ಗ್ರಾಮಗಳ ಗ್ರಾಮೀಣ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.