ಚುನಾವಣೆ 2023 | ಕುದುರೆಯಲ್ಲ, ಕತ್ತೆಯೂ ಗೆಲ್ಲಬಹುದು! ಎಚ್ಚರ ಮತದಾರ

Date:

Advertisements
ತತ್ವ ಸಿದ್ಧಾಂತಗಳನ್ನು ಮುಂದು ಮಾಡುವ, ಪಕ್ಷಕ್ಕೆ ಬರುವವರ ಪೂರ್ವಾಪರ, ನಿಲುವು ನೋಟಗಳನ್ನು ಗಮನಿಸಿ ಪ್ರವೇಶ ನೀಡುವ ರಾಜಕಾರಣವೇ ಕಣ್ಮರೆಯಾಯಿತಾ? ಗೆಲ್ಲುವ ಕುದುರೆಯನ್ನು ತಂದು ನಿಲ್ಲಿಸುವುದೇ ಎಲ್ಲರ ಗುರಿಯಾಗಿರುವಾಗ, ನಿಜಕ್ಕೂ ತಾವು ಹುಡುಕುತ್ತಿರುವುದು ಮತ್ತು ನಂಬಿರುವುದು ಕತ್ತೆಯೊ, ಕುದುರೆಯೊ ಎಂಬ ಪ್ರಶ್ನೆ ಯಾರನ್ನೂ ಕಾಡಿದಂತಿಲ್ಲ

ಬಿರುಬೇಸಿಗೆಯಲ್ಲಿ ಕಾದ ನೆಲಕ್ಕೆ ನಾಲ್ಕು ಹನಿ ನೀರಿನ ಸಿಂಚನವಾದಂತೆ ಚುನಾವಣೆಯ ಘೋಷಣೆಯೇ ಹುಮ್ಮಸ್ಸನ್ನು ಗರಿಗೆದರಿಸಿದೆ. ರಾಜಕೀಯ ಪಕ್ಷಗಳು, ಹುರಿಯಾಳುಗಳು, ಕಾರ್ಯಕರ್ತರು, ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದವರು ಹೀಗೆ ಎಲ್ಲರೂ ಒಮ್ಮೆಗೇ ಎದ್ದು ಮನಬಂದತ್ತ ಓಡಾಡತೊಡಗಿದ್ದಾರೆ. ಅದೇನು ನಿರೀಕ್ಷೆಯೋ ಏನೊ ಜನ ಕೂಡಾ ಮಂಪರು ನಿದ್ದೆಯನ್ನು ಒದ್ದು ಮೇಲೆದ್ದು ಒಲ್ಲಿ ಕೊಡವುತ್ತಿದ್ದಾರೆ.

ರಾಜಕೀಯ ನಾಯಕರು ದಿನಬೆಳಗಾದರೆ ದಿಲ್ಲಿಗೆ ಓಡುತ್ತಾರೆ. ಮತ್ತೆ ಬೆಂಗಳೂರಿಗೆ ಬರುತ್ತಾರೆ; ಮತ್ತೆ ಓಡುತ್ತಾರೆ, ಮರಳಿ ಬರುತ್ತಾರೆ. ಮೂಲೆ ಮುಂಗಟ್ಟುಗಳಲ್ಲಿದ್ದ ಮರಿ ನಾಯಕರು ಬೆಂಗಳೂರಿಗೆ ಓಡಿ ಬರುತ್ತಾರೆ. ಮತ್ತೆ ತಮ್ಮ ಮತಕ್ಷೇತ್ರಗಳಿಗೆ ಓಡುತ್ತಾರೆ.

ಪ್ರಜಾತಂತ್ರ ವ್ಯವಸ್ಥೆಯೇ ಮುಗಿಯಿತೇನೋ, ಚುನಾವಣೆಗಳೇ ಇನ್ನು ಮುಂದೆ ಇಲ್ಲವೇನೋ ಎಂದು ಭಾವಿಸುತ್ತಿದ್ದ ಹಲವರಿಗೆ ಈ ಚುನಾವಣೆಯ ಘೋಷಣೆ ಹೊಸ ಭರವಸೆಯನ್ನು ಮೂಡಿಸಿದೆ. ನೆಲಕ್ಕೆ ಬಿದ್ದ ಬೀಜ ಮೊಳಕೆಯೊಡೆದು ಫಸಲು ತಲೆಎತ್ತಬಹುದೆಂಬ ಆಶಾ ಭಾವನೆಯನ್ನೂ ಮೂಡಿಸಿದೆ.

Advertisements

ಕಳೆದ ಕೆಲವಾರು ವರ್ಷಗಳಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ಎಂಥ ವಿರೂಪವನ್ನು ಪಡೆದುಕೊಂಡಿತು! ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿ, ಜನತಂತ್ರವನ್ನು ಮನಬಂದಂತೆ ಹಿಡಿದಾಡಿ, ಸರ್ವಾಧಿಕಾರಿವನ್ನೇ ಮೆರೆಸುತ್ತಿದ್ದ ಪಕ್ಷ, ಸಂಸ್ಥೆಗಳು ಈ ದೇಶದಲ್ಲಿ ಇನ್ನು ಮುಂದೆ ಪ್ರಜಾಪ್ರಭುತ್ವವೇ ಇರುವುದಿಲ್ಲವೇನೋ ಎಂಬಂಥ ಭಾವನೆಯನ್ನು ಮೂಡಿಸಿದ್ದವು.

ಸರ್ಕಾರ ರಚಿಸುವುದೆಂದರೆ ಜನಪ್ರತಿನಿಧಿಗಳನ್ನು ಕೊಳ್ಳುವುದು, ಮಾರುವುದು, ಮನುಷ್ಯ ಮುಖಗಳನ್ನು ಸಂಖ್ಯೆಗಳಾಗಿ ಬದಲಿಸಿ, ಬಹುಮತವನ್ನು ತೋರಿಸುವುದು, ಸರ್ಕಾರ ರಚಿಸುವುದು. ಸರ್ಕಾರವೆಂದರೆ ವಿರೋಧದ ದನಿಗಳನ್ನು ಹುಟ್ಟಡಗಿಸಲು ಎಲ್ಲ ದಾರಿಗಳನ್ನು ಎಗ್ಗಿಲ್ಲದೆ ಬಳಸುವುದು. ಜನತೆಯ ಒಳಿತಿಗಾಗಿ ಕೆಲಸ ಮಾಡಬೇಕಾದ ಸರ್ಕಾರಿ ಸಂಸ್ಥೆಗಳು, ತಮ್ಮ ಬೆನ್ನೆಲುಬು ಕಳೆದುಕೊಂಡು, ಸರ್ಕಾರದ ಆಜ್ಞೆಯನ್ನು ಶಿರಸಾವಹಿಸಿ ವಿರೋಧ ಪಕ್ಷಗಳ ನಾಯಕರನ್ನು ಬಗ್ಗು ಬಡಿಯಲು ನೋಡುವುದು-ಇಂಥ ಕೆಲಸಗಳಲ್ಲೇ ಮುಳುಗೆದ್ದವು.

ಇದನ್ನೂ ಓದಿ ನನ್ನ ಮತ | ಅಧಿಕಾರ ವಂಚಿತರಿಗೆ ರಾಜಕೀಯ ಸ್ಥಾನಮಾನ ನೀಡುವಂಥ ಸರ್ಕಾರ ಬರಬೇಕು

ವಿರೋಧ ಪಕ್ಷದಂತೆ ಕೆಲಸ ಮಾಡಬೇಕಾದ ಮಾಧ್ಯಮಗಳು ಬಹುಪಾಲು ಸರ್ಕಾರದ ಅಡಿಯಾಳಾಗಿ, ಅಥವಾ ಸರ್ಕಾರದ ಬೆಂಬಲಕ್ಕೆ ನಿಂತ ಕಾರ್ಪೊರೇಟ್‌ ಸಂಸ್ಥೆಗಳ ಹಿಡಿತದಲ್ಲಿ ತಮ್ಮ ಧ್ವನಿಯನ್ನೇ ಕಳೆದುಕೊಂಡದ್ದು ಬಹುದೊಡ್ಡ ದುರಂತ. ನ್ಯಾಯಾಂಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಕೆಲವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಮಾಡಿದ್ದಂತೂ ಪ್ರಜಾಪ್ರಭುತ್ವದ ಗೋರಿಯನ್ನು ನಿರ್ಮಿಸಿದಂತೆ ಕಾಣಿಸುತ್ತಿತ್ತು.

ಈ ರಾಜಕೀಯ ದೇಶದ ಸಾಂಸ್ಕೃತಿಕ ಚಹರೆಯನ್ನೇ ಬದಲಾಯಿಸುತ್ತದೇನೋ ಎನ್ನಿಸುವ ಬೆಳವಣಿಗೆಗಳಿಗೆ ಕಾರಣವಾಯಿತು. ಬಹುಭಾಷೆ, ಬಹುಮುಖೀ ಸಂಸ್ಕೃತಿ, ಸಹಬಾಳ್ವೆ, ಸೋದರತ್ವ ಇವು ಎಲ್ಲವೂ ನಾಶವಾಗುವ ಭಯವನ್ನೂ ಸದ್ಯದ ರಾಜಕಾರಣ ಬಿತ್ತಿ ಬೆಳೆಯಿತು. ಸ್ವಾತಂತ್ರದ ಅರ್ಥವೇ ವಿರೂಪವಾಯಿತು. ಇದೊಂದು ಭೀಕರ ಸ್ಥಿತಿ. ತಲ್ಲಣದ ಸ್ಥಿತಿ.

ಇಂಥ ಹೊತ್ತಿನಲ್ಲಿ ಒಂದು ಸಣ್ಣ ಆಶಾ ಕಿರಣದಂತೆ ಕರ್ನಾಟಕದ ವಿಧಾನ ಸಭೆಗೆ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಈ ಚುನಾವಣೆಗೆ ಎಲ್ಲಿಲ್ಲದ ಮಹತ್ವ ಬಂದಿದೆ.

ಆದರೆ ವಸ್ತುಸ್ಥಿತಿ ಹೇಗಿದೆ ನೋಡಿ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮಸಿದ್ಧಾಂತವನ್ನೇ ಗಾಳಿಗೆ ತೂರಿದಂತೆ ನಡೆದುಕೊಳ್ಳುತ್ತಿವೆ. ಪಕ್ಷಾಂತರಿಗಳ ಪರ್ವವೇ ಆರಂಭವಾಗಿದೆ. ಯಾರು ಯಾವ ಪಕ್ಷಕ್ಕೂ ಹಾರಬಹುದು. ಇಲ್ಲಿ ಟಿಕೆಟ್‌ ಸಿಕ್ಕದಿದ್ದರೆ ಇನ್ನೊಂದು ಕಡೆಗೆ ಹಾರಬಹುದು. ಯಾವ ತತ್ವ ಸಿದ್ಧಾಂತಗಳೂ ಬೇಕಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದೇ ಒಂದು ಮಹಾನ್‌ ಕಾರ್ಯದಂತೆ. ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಬಂಡಾಯಗಾರರು ಭುಗಿಲೇಳುತ್ತಾರೆ. ಬಿಳಿಯೊ, ಕೇಸರಿಯೋ, ಕೆಂಪೊ ಬಣ್ಣ ಯಾವುದಾದರೇನು, ಜನರ ಬಳಿಗೆ ಹೋಗಲು ತಮಗೊಂದು ಬಾವುಟ ಬೇಕು ಎಂದು ಬಡಿದಾಡುವ ಅಭ್ಯರ್ಥಿಗಳು. ಮಾಡಿದ ಕೆಲಸಗಳನ್ನು ಹೇಳಿ ಜನರ ಬಳಿ ಮತ ಕೇಳುವ ಛಾತಿಯೇ ಇಲ್ಲದ ಮುಖಹೀನರೇ ಬಹಳ ಮಂದಿ. ಪಕ್ಷದ ಬಲ, ಲಾಂಛನದ ಬಲ, ಧರ್ಮ-ಜಾತಿಗಳ ಬಲ, ಹಣದ ಬಲ, ಮತದಾರರನ್ನು ಸೆಳೆಯುವ ಕಳ್ಳದಾರಿಗಳ ಬಲ- ಇದು ಎಂಥ ಪ್ರಜಾಪ್ರಭುತ್ವ, ಎಂಥ ಚುನಾವಣೆ?

ತತ್ವ ಸಿದ್ಧಾಂತಗಳನ್ನು ನಂಬಿ ಯಾರೂ ಯಾವ ಪಕ್ಷವನ್ನೂ ಸೇರದಂಥ ದುರ್ಗತಿಯನ್ನು ಈಗ ಎಲ್ಲೆಲ್ಲೂ ನೋಡಬಹುದು. ಎಡ ಪಕ್ಷಗಳು ಇದಕ್ಕೆ ಅಪವಾದ. ಆದರೆ ಅವು ಶಕ್ತಿಯನ್ನು ಕಳೆದುಕೊಂಡು ಈ ಚುನಾವಣೆಯಲ್ಲಿ ದೊಡ್ಡ ಪಾತ್ರವನ್ನು ಕಟ್ಟಲಾರವು.

ತತ್ವ ಸಿದ್ಧಾಂತಗಳನ್ನು ಮುಂದು ಮಾಡುವ, ಪಕ್ಷಕ್ಕೆ ಬರುವವರ ಪೂರ್ವಾಪರ, ನಿಲುವು ನೋಟಗಳನ್ನು ಗಮನಿಸಿ ಪ್ರವೇಶ ನೀಡುವ ರಾಜಕಾರಣವೇ ಕಣ್ಮರೆಯಾಯಿತಾ? ಗೆಲ್ಲುವ ಕುದುರೆಯನ್ನು ತಂದು ನಿಲ್ಲಿಸುವುದೇ ಎಲ್ಲರ ಗುರಿಯಾಗಿರುವಾಗ, ನಿಜಕ್ಕೂ ತಾವು ಹುಡುಕುತ್ತಿರುವುದು ಮತ್ತು ನಂಬಿರುವುದು ಕತ್ತೆಯೊ, ಕುದುರೆಯೊ ಎಂಬ ಪ್ರಶ್ನೆ ಯಾರನ್ನೂ ಕಾಡಿದಂತಿಲ್ಲ.

ನಿಜ, ಇವತ್ತಿನ ತುರ್ತು ಪ್ರಜಾಪ್ರಭುತ್ವವನ್ನು ಈ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಮರು ಸ್ಥಾಪಿಸುವುದೇ ಆಗಿದೆ. ಇದರ ಮಹತ್ವವನ್ನು ನಮ್ಮ ರಾಜಕೀಯ ಪಕ್ಷಗಳು ತಿಳಿದು ನಡೆಯಬೇಕಾಗಿತ್ತು. ಭಿನ್ನ ಅಸ್ಮಿತೆಯನ್ನು ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಕೈ ಕೈ ಸೇರಿಸಿ ಪ್ರಸಕ್ತ ಚುನಾವಣೆಯನ್ನು ಎದುರಿಸುವುದು ಹೇಗೆ ಎಂಬುದಕ್ಕೆ ಒತ್ತುಕೊಟ್ಟು ತಮ್ಮ ನಡೆಯನ್ನು ರೂಪಿಸಿಕೊಳ್ಳಬೇಕಾಗಿತ್ತು. ಎಲ್ಲ ವಿರೋಧ ಪಕ್ಷಗಳ ಹೊಂದಾಣಿಕೆಯಿಂದ ಸರ್ವಾಧಿಕಾರಿ ನಡೆಯ ಆಳುವ ಪಕ್ಷವನ್ನು ಮಣಿಸಬೇಕಾಗಿತ್ತು ಮತ್ತು ಆ ಮೂಲಕ ಸರ್ವಾಧಿಕಾರವನ್ನು ಕರ್ನಾಟಕದಲ್ಲಿ ಮೊದಲು ಕೊನೆಗೊಳಿಸಬೇಕಾಗಿತ್ತು. ಆದರೆ ಇಲ್ಲಿ ವಿರೋಧ ಪಕ್ಷಗಳ ನಡುವೆ ಸಂವಾದವೇ ಸಾಧ್ಯವಾಗಿಲ್ಲ.

ಎಲ್ಲ ಪಕ್ಷಗಳಲ್ಲೂ ಬಂಡಾಯ; ಎಲ್ಲ ಪಕ್ಷಗಳಲ್ಲೂ ಪಕ್ಷಾಂತರಿಗಳು. ಹೇಗಾದರೂ ಸರಿ, ಯಾರಾದರೂ ಸರಿ ಚುನಾವಣೆಯನ್ನು ಗೆಲ್ಲಬೇಕು. ಈ ಧೋರಣೆ ನಮ್ಮನ್ನು ಎಲ್ಲಿಗೆ ಕರೆದೊಯ್ಯಬಹುದು?

ಇದನ್ನೂ ಓದಿ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಲು ಮುಂದಾದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ

ಹಣಕ್ಕೆ ಮಾರಿಕೊಂಡು ನಮ್ಮ ಪಕ್ಷವನ್ನು ಬಿಟ್ಟುಹೋದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ದಿಟ್ಟತನವನ್ನು ಯಾವ ಪಕ್ಷವೂ ತೋರಿಸುತ್ತಿಲ್ಲ. ಭ್ರಷ್ರರನ್ನು ನಮ್ಮ ಪಕ್ಷಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಲಾಗದ ಸ್ಥಿತಿ ಎಲ್ಲ ಪಕ್ಷಗಳಲ್ಲೂ ಇದೆ. ನಮ್ಮ ಸಿದ್ಧಾಂತವೇ ಸಿದ್ಧಾಂತ, ನಮ್ಮ ಪಕ್ಷವೇ ಪಕ್ಷ, ನಮ್ಮ ಸರ್ಕಾರವೇ ಸರ್ಕಾರ ಎಂದು ಬೀಗುತ್ತಿದ್ದ ಪಕ್ಷವೂ ಈಗ ಬಂಡಾಯದ, ಪಕ್ಷಾಂತರದ ಭೀತಿಯಲ್ಲಿ ನಡುಗುತ್ತಿದೆ. ಭ್ರಷ್ಟಾಚಾರವನ್ನು ದೊಡ್ಡ ಸಂಗತಿಯಾಗಿ ಪರಿಭಾವಿಸದೆ, ಅಂಥವರನ್ನು ಗೌರವಿಸುವ ಹಂತವನ್ನೂ ಪಕ್ಷ ತಲುಪಿದೆ. ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗಿದೆ.

ಇಂಥ ಹೊತ್ತಿನಲ್ಲಿ ನಮ್ಮ ಮತದಾರರಾದರೂ ಪ್ರಜ್ಞಾವಂತರಾಗಿ ನಡೆಯಬೇಕಾಗಿದೆ. ತಮ್ಮ ಬಳಿ ಮತಯಾಚಿಸಿ ಬರುವ ಅಭ್ಯರ್ಥಿಗಳ ಪೂರ್ವಾಪರಗಳನ್ನು ಪರಿಶೀಲಿಸಬೇಕು. ಭ್ರಷ್ಟರಾಗಿದ್ದರೆ, ಮತಧರ್ಮಗಳ ಮಂಕು ಬೂದಿಯನ್ನು ಎರಚಿ ಜನರನ್ನು ಒಡೆಯುವ ಕೆಲಸದಲ್ಲಿ ತೊಡಗಿದವರಾಗಿದ್ದರೆ ಅಂಥವರ ನೀರಿಳಿಸಬೇಕು. ಅಂಥವರು ಮತ್ತೆ ಮೇಲೇಳದಂತೆ ಸೋಲಿಸಬೇಕು. ಇಂಥ ಒಂದು ಎಚ್ಚರ, ತಿಳಿವಳಿಕೆ ನಮ್ಮ ಮತದಾರರಿಗೆ ಇದೆ. ಅದನ್ನು ಅವರು ತೋರಿಸಿಕೊಟ್ಟಿರುವ ಉದಾಹರಣೆಗಳೂ ನಮ್ಮ ಚುನಾವಣಾ ಇತಿಹಾಸದಲ್ಲಿ ಇವೆ.

ಈಗ ಇದು ಸಕಾಲ. ರಾಜಕೀಯ ಪಕ್ಷಗಳು ಪ್ರಬುದ್ಧ ಪಕ್ಷಗಳಾಗಿ, ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡು ಜನತೆಯ ಮುಂದೆ ಬರಬೇಕು. ಪ್ರಜಾಪ್ರಭುತ್ವದ ಮಹತ್ವವನ್ನು ಬಲ್ಲ ನಮ್ಮ ಮತದಾರರು ವಿವೇಚನೆಯಿಂದ, ಎಚ್ಚರದಿಂದ ಮತ ಚಲಾಯಿಸಿ ಯೋಗ್ಯ ಪ್ರತಿನಿಧಿಗಳನ್ನು ಆರಿಸಬೇಕು. ಇದೇನೂ ಸಾಧ್ಯವಾಗದ ಆದರ್ಶವಲ್ಲ; ಕನಸೂ ಅಲ್ಲ. ಒಂದು ಎಚ್ಚರದ ನಡೆ ಅಷ್ಟೆ.

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X