ಜಾತಿ ಗಣತಿ ವರದಿಯನ್ನು ತಿರಸ್ಕರಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಸಲ್ಲಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಮನವಿಗೆ ಕರ್ನಾಟಕದ ಕನಿಷ್ಠ ಮೂವರು ಸಚಿವರು ಮತ್ತು ಸರ್ಕಾರದ ಮುಖ್ಯ ಸಚೇತಕರು ಸಹಿ ಹಾಕಿದ್ದಾರೆ.
ಬೆಳಗಾವಿ ವಿಧಾನಮಂಡಲದ ಅಧಿವೇಶನದ ಹೊರತಾಗಿ ಈ ಬೆಳವಣಿಗೆ ನಡೆದಿದೆ. ಇದೇ ರೀತಿಯ ಮನವಿ ಕಾಂಗ್ರೆಸ್ ಒಕ್ಕಲಿಗರ ಶಾಸಕ, ಸಚಿವರಿಂದ ನಡೆದಿತ್ತು. ಡಿಸಿಎಂ ಡಿ ಕೆ ಶಿವಕುಮಾರ್ ಒಕ್ಕಲಿಗರ ಸಂಘದ ಮನವಿಗೆ ಸಹಿ ಮಾಡಿದ್ದರು.
ವೀರಶೈವ ಮಹಾಸಭಾದ ಮನವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಸಹಿ ಹಾಕಿದ್ದಾರೆ.
ಕಾಂಗ್ರೆಸ್ ಸಹಿ ಮಾಡಿದವರಲ್ಲಿ ಸಚಿವರಾದ ಎಂ ಬಿ ಪಾಟೀಲ್, ಈಶ್ವರ ಖಂಡ್ರೆ , ಶಿವಾನಂದ ಪಾಟೀಲ್ ಮತ್ತು ಮುಖ್ಯ ಸಚೇತಕ ಅಶೋಕ್ ಪಟ್ಟಣ ಸೇರಿದ್ದಾರೆ. ಒಟ್ಟು 32 ಶಾಸಕರು ಮನವಿಗೆ ಸಹಿ ಹಾಕಿದ್ದಾರೆ.
ಮಹಾಸಭಾದ ಪ್ರಮುಖ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಉತ್ತರದಲ್ಲಿ ನಡೆದ ಅಧಿವೇಶನದಲ್ಲಿ ಸಿಕ್ಕ ಉತ್ತರವೇನು?
2015ರಲ್ಲಿ ಮಾಡಿದ ಸಮೀಕ್ಷೆಯು ದೋಷಪೂರಿತವಾಗಿದೆ ಎಂದು ತೋರಿಸಿರುವ ಮಹಾಸಭಾ ಹೊಸ ಸಮೀಕ್ಷೆಯನ್ನು ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಜಾತಿ ಗಣತಿ ಈಗಾಗಲೇ ಎಂಟು ವರ್ಷ ಹಳೆಯದಾಗಿದೆ ಎಂದು ಲಿಂಗಾಯತ ಸಂಸ್ಥೆ ಹೇಳಿದೆ.
ಮನೆ-ಮನೆಗೆ ತೆರಳಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ಮಹಾಸಭಾ ತನ್ನ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಸಮೀಕ್ಷೆಗೆ ಒಳಗಾದವರಲ್ಲಿ, ಮೀಸಲಾತಿ ಪ್ರಯೋಜನಗಳನ್ನು ಕಳೆದುಕೊಳ್ಳುವ ಭಯದಿಂದ ಅನೇಕ ವೀರಶೈವ-ಲಿಂಗಾಯತರು ತಮ್ಮಉಪಜಾತಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
“ಇದಲ್ಲದೆ, ರಾಜ್ಯದಲ್ಲಿ ಅನೇಕ ಜನರು ತಾವು ಸೇರಿರುವ ಜಾತಿಯ ಬಗ್ಗೆ ಸ್ವಯಂಘೋಷಣೆಗಳನ್ನು ಮಾಡಿದ್ದಾರೆ. ಆದರೆ ಅವರು ನಿಜವಾಗಿಯೂ ಆ ಸಮುದಾಯಕ್ಕೆ ಸೇರಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಯಾವುದೇ ಪರಿಶೀಲನೆ ನಡೆದಿಲ್ಲ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಸರಕಾರ ಜಾತಿ ಗಣತಿ ಜಾರಿಗೊಳಿಸಲು ಹೊರಟರೆ ಲೋಕಸಭೆ ಚುನಾವಣೆ ವೇಳೆ ಪಕ್ಷಕ್ಕೆ ಹೊಡೆತ ಬೀಳಬಹುದು ಎಂದು ಎಚ್ಚರಿಸಲಾಗಿದೆ.
2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಮೊದಲ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಜಾತಿ ಗಣತಿ ವಿರುದ್ಧ ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರ ಸಂಘಟನೆಗಳು ಸಹಿ ಹಾಕಿವೆ.
ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಲು ಜನವರಿ 31, 2024 ರವರೆಗೆ ಕಾಲಾವಕಾಶ ನೀಡಿದ್ದಾರೆ.