ಹಬ್ಬ, ಜಾತ್ರೆ, ಚುನಾವಣೆ ಮುಂತಾದ ಪ್ರಮುಖ ಕಾರ್ಯಕ್ರಮಗಳು, ಪ್ರಾಕೃತಿಕ ವಿಕೋಪ ಹೀಗೆ ಹಲವು ತುರ್ತು ಸಂದರ್ಭಗಳಲ್ಲಿ ಪೊಲೀಸರ ಜತೆ ಕೈಜೋಡಿಸಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕ ದಳದ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದು ಕೊಡಗಿನ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಹೇಳಿದ್ದಾರೆ.
ಗೃಹರಕ್ಷಕ ದಳದಿಂದ ಕೊಡಗು ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ಶನಿವಾರ (ಡಿ.16) ನಡೆದ ʼಗೃಹ ರಕ್ಷಕ ದಳ ದಿನಾಚರಣೆʼ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಮೆಚ್ಚಬೇಕಿದೆ. ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಗೃಹ ರಕ್ಷಕರು ಪೊಲೀಸರ ಜೊತೆ ಸೇರಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಮಾತನಾಡಿ, ಜಿಲ್ಲೆಗೆ ಆಗಿರುವ 500 ಗೃಹರಕ್ಷಕರ ಮಂಜೂರಾತಿಯಲ್ಲಿ, 250 ಗೃಹ ರಕ್ಷಕರಿಗೆ ಅವಕಾಶವಿದ್ದು, 150 ಮಂದಿ ಪೊಲೀಸರ ಜತೆ ಸರಿಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಗೃಹರಕ್ಷಕರು ಮಳೆ, ಗಾಳಿ, ಚಳಿ ಎನ್ನದೇ ಜಿಲ್ಲೆಯಲ್ಲಿ ಪೊಲೀಸರ ಜೊತೆಗೂಡಿ ಕರ್ತವ್ಯ ನಿರ್ವಹಿಸುತ್ತಾರೆ. ಸಂಚಾರ ನಿಯಂತ್ರಣ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹರಕ್ಷಕರು ಪೊಲೀಸರ ಜೊತೆಗೂಡಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಶಿಸ್ತು ಕಾಪಾಡಿಕೊಂಡು ಹೋಗಬೇಕು. ಆಡಳಿತ ವ್ಯವಸ್ಥೆ ತಮ್ಮ ಜೊತೆ ಇರಲಿದ್ದು, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಾರ್ವಜನಿಕರ ಜೊತೆ ಸಂಯಮ ಮತ್ತು ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದರು.
ಜನ ಹೆಚ್ಚಿನ ಸಂಖ್ಯೆಯಲ್ಲಿ ಗೃಹ ರಕ್ಷಕ ದಳ ವಿಭಾಗಕ್ಕೆ ಸೇರುವಂತಾಗಬೇಕು. ಸರ್ಕಾರ ಮಾನವೀಯ ನೆಲಗಟ್ಟಿನಲ್ಲಿ ಸಾಧ್ಯವಾದಷ್ಟು ಉದ್ಯೋಗ ಕಲ್ಪಿಸಿ, ದುಡಿಮೆಗೆ ತಕ್ಕ ಪ್ರತಿಫಲ ಕಲ್ಪಿಸಲು ಪ್ರಯತ್ನಿಸಿದೆ ಎಂದು ಸುಂದರ್ ರಾಜ್ ಅವರು ವಿವರಿಸಿದರು.
ಡಿವೈಎಸ್‍ಪಿ ಎಂ.ಜಗದೀಶ್ ಅವರು ಮಾತನಾಡಿ, ಪೊಲೀಸರ ಜೊತೆಗೂಡಿ ಗೃಹ ರಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ. ಗೃಹ ರಕ್ಷಕರ ಕಾರ್ಯ ಪೊಲೀಸ್ ಇಲಾಖೆಗೆ ಅಮೂಲ್ಯವಾಗಿದೆ ಎಂದರು.
ಜಿಲ್ಲಾ ಕಾರಾಗೃಹ ಇಲಾಖೆಯ ಅಧೀಕ್ಷಕರಾದ ಸಂಜಯ್ ಜತ್ತಿ ಅವರು ಮಾತನಾಡಿ ಗೃಹ ರಕ್ಷಕರು ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ರೀತಿ ಹೆಮ್ಮೆ. ಆ ನಿಟ್ಟಿನಲ್ಲಿ ವೃತ್ತಿ ಧರ್ಮವನ್ನು ಗೌರವಿಸಿ ಸಮಾಜಮುಖಿಯಾಗಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮೆಚ್ಚುವಂತಹದ್ದು ಎಂದರು.
ಮುಖ್ಯಪೇದೆ ಫಾರುಖ್ ನಿರೂಪಿಸಿದರು. ಗೃಹ ರಕ್ಷಕಿಯರಾದ ಕೆ.ಎಸ್.ಲವಿ ಸ್ವಾಗತಿಸಿದರು, ಲಕ್ಷ್ಮೀ ವಂದಿಸಿದರು.