ಕರ್ನಾಟಕದಲ್ಲಿ ಬರಗಾಲದ ಕಾರಣಕ್ಕೆ ಹೆಚ್ಚುವರಿ 50 ಮಾನವ ದಿನಗಳನ್ನು ಘೋಷಣೆ ಮಾಡುವುದು ಹಾಗೂ ಮನರೇಗಾ ಅಡಿಯಲ್ಲಿ 3 ತಿಂಗಳಿನಿಂದ ಸ್ಥಗಿತಗೊಂಡಿರುವ ಕೂಲಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಗ್ರಾಕೂಸ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡೆ ತಾಲೂಕಿನ ಗ್ರಾಕೂಸ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, “ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಡಿ ದುಡಿದ ಕಾರ್ಮಿಕರಿಗೆ ಮೂರು ತಿಂಗಳುಗಳಿಂದ ಕೂಲಿ ಹಣ ಬಂದಿಲ್ಲ. ಆ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಜತೆಗೆ ಮೂರು ತಿಂಗಳ ಹಣಕ್ಕೆ ಬಡ್ಡಿಯನ್ನೂ ಸೇರಿಸಿ ಕೂಲಿ ಹಣ ನೀಡಬೇಕು” ಎಂದು ಒತ್ತಾಯಿಸಿದರು.
“ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಭಯಂಕರ ಬರಗಾಲ ಬಂದಿದೆ. ರಾಜ್ಯ ಸರ್ಕಾರ ಈಗಾಗಲೇ ಬರಗಾಲ ಘೋಷಣೆ ಮಾಡಿದೆ. ಕೇಂದ್ರ ಸರ್ಕಾವೂ ಬರಗಾಲ ಘೋಷಿಸಿ ಕೂಲಿ ಕಾರ್ಮಿಕರಿಗೆ ಮನರೇಗಾದಲ್ಲಿ ಹೆಚ್ಚುವರಿ 50 ಮಾನವ ದಿನಗಳ ಕೆಲಸ ಕೊಡುವುದಾಗಿ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಡಿ.28ಕ್ಕೆ ದೇವದಾಸಿ ಮಹಿಳೆಯರ ಬೇಡಿಕೆ ಈಡೇರಿಕೆಗಾಗಿ ‘ಬೆಂಗಳೂರು ಚಲೋ’
ತಾವು ಈ ವಿಷಯಗಳ ಮೇಲೆ ಕೂಡಲೇ ನಿರ್ಧಾರ ತೆಗೆದುಕೊಳ್ಳುತ್ತೀರೆಂದು ಕರ್ನಾಟಕದ ಲಕ್ಷಾಂತರ ಕೂಲಿ ಕಾರ್ಮಿಕರು ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಕೂಡಲೇ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು” ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.