ಬೆಳಗಾವಿ ತಾಲೂಕಿನ ಹೊಸವಂಟಮೂರಿಯಲ್ಲಿ ಗ್ರಾಮದ ಯುವಕ-ಯುವತಿ ಪ್ರೀತಿಸಿ, ಊರು ತೊರೆದಿದ್ದಕ್ಕೆ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣವನ್ನು ಸಿಐಡಿ ತನಖೆಗೆ ವಹಿಸಲಾಗಿದೆ. ಡಿಐಜಿ ಸುಧೀರಕುಮಾರ್ ರೆಡ್ಡಿ ನೇತೃತ್ವದ ಸಿಐಡಿ ತಂಡ ಸೋಮವಾರ ತನಿಖೆ ಆರಂಭಿಸಿದೆ.
ಬೆಳಗಾವಿಗೆ ತೆರಳಿರುವ ತಂಡ ಸಂತ್ರಸ್ತ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದೆ. ಆಕೆಯ ಸಂಬಂಧಿಗಳಿಂದ ಮಾಹಿತಿ ಪಡೆದುಕೊಂಡಿದೆ.
ಪರಸ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಡಿಸೆಂಬರ್ 10ರ (ಭಾನುವಾರ) ರಾತ್ರಿ ಊರು ಬಿಟ್ಟು ಹೋಗಿದ್ದರು. ಇದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಆತನ ತಾಯಿಯನ್ನು ಮನೆಯಿಂದ ಹೊರಗೆಳೆದು, ಬೆತ್ತಲೆಗೊಳಿಸಿ ಹಲ್ಲೆ ಮಾಡಿತ್ತು. ಘಟನೆ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್, ‘ಇದು ದುಶ್ಯಾಸರ ರಾಜ್ಯ. ಮಹಿಳೆಗೆ ಅಗತ್ಯ ಚಿಕಿತ್ಸೆ ಮತ್ತು ಕೌನ್ಸಲಿಂಗ್’ ಮಾಡಿಸಬೇಕು ಎಂದು ನಿರ್ದೇಶಿಸಿತ್ತು.
ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದ್ದರು. ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ಶನಿವಾರ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ, ಬೆಳಗಾವಿಗೆ ತೆರಳಿರುವ ಸಿಐಡಿ ತಂಡ ತನಿಖೆ ಆರಂಭಿಸಿದೆ.
ಇನ್ನೊಂದೆಡೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಕೂಡ ಬೆಳಗಾವಿಗೆ ತೆರಳಿದ್ದಾರೆ.