ಕೃಷಿ ಸಾಲ ಮನ್ನಾ, ಬರ ಪರಿಹಾರ, ಕೃಷಿ ಉತ್ಪನ್ನಗಳ ಸಬ್ಸಿಡಿ ಸೇರಿದಂತೆ ನಾನಾ ಹಕ್ಕೊತ್ತಾಯಗಳನ್ನು ಸರ್ಕಾರಗಳ ಮುಂದಿಟ್ಟು, ದೇಶದ ನಾನಾ ಭಾಗಗಳಲ್ಲಿ ‘ರೈತ ಮಹಾ ಅಧಿವೇಶನ’ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಮುಂದಾಗಿದೆ, ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಮಹಾ ಅಧಿವೇಶನ ನಡೆಯಲಿದೆ ಎಂದು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಡಿಸೆಂಬರ್ 20ರಿಂದ ಮಹಾ ಅಧಿವೇಶನಗಳು ಆರಂಭವಾಗಲಿವೆ. ಡಿ.20ರಂದು ಕೇರಳದ ಪಾಲಕ್ಕಾಡ್‌ನಲ್ಲಿ ರೈತರ ಮಹಾ ಅಧಿವೇಶನ ನಡೆಯಲಿದೆ. 21ರಂದು ತಮಿಳುನಾಡಿನ ಚೆನ್ನೈ, 23ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಹಾಗೂ 26ರಂದು ಹೈದರಾಬಾದ್‌ನಲ್ಲಿ ಮಹಾ ಆಧಿವೇಶನಗಳು ನಡೆಯಲಿವೆ. ರೈತರ ಶಕ್ತಿ ಪ್ರದರ್ಶಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುತ್ತದೆ” ಎಂದು ಹೇಳಿದ್ದಾರೆ.
“ರೈತರಿಗೆ ಸಾಲ ನೀಡಿರುವ ಬ್ಯಾಂಕ್‌ಗಳು ಬಡ್ಡಿ ಬಡ್ಡಿ ದುಪ್ಪಟ್ಟಾಗುತ್ತದೆ ಎಂದು ರೈತರನ್ನು ಹೆದರಿಸುತ್ತಿವೆ. ಇಂಗ್ಲಿಷ್ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಸಾಲ ನವೀಕರಿಸುತ್ತಿವೆ. ಹೀಗಾಗಿ, ರೈತರು ಸಾಲ ಮನ್ನಾದಿಂದ ವಂಚಿತರಾಗುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಇತ್ತೀಚಿನ ವರ್ಷಗಳಲ್ಲಿ ರೈತರು ಅತಿವೃಷ್ಠಿ, ಬರಗಾಲದಿಂದ ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಈ ವರ್ಷ ಬರ ಎದುರಾಗಿದೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಭಿಕ್ಷೆಯ ರೂಪದಲ್ಲಿ 2,000 ರೂ. ಪರಿಹಾರ ನೀಡಿದೆ. ಬರದಿಂದ ತತ್ತರಿಸಿರುವ ರೈತರಿಗೆ ಪ್ರತಿ ಎಕರೆಗೆ 25,000 ರೂ. ಪರಿಹಾರ ನೀಡಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧ, ಎಥೆನಾಲ್ ಉತ್ಪಾದನೆಗೆ ತಡೆ ಹಾಕಿರುವುದು ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೆ ತರಬೇಕು” ಎಂದು ಆಗ್ರಹಿಸಿದ್ದಾರೆ.
“60 ವರ್ಷ ದಾಟಿರುವ ರೈತರಿಗೆ ಪಿಂಚಣಿ ವ್ಯವಸ್ಥೆ ನೀಡಬೇಕು. ತಿಂಗಳಿಗೆ ಕನಿಷ್ಠ 5,000 ರೂ. ಪಂಚಣಿ ಒದಗಿಸಬೇಕು. ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಹಕ್ಕುಪತ್ರಗಳನ್ನು ಕೂಡಲೇ ವಿತರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ವೆಂಕಟೇಶ್, ಹೆಗ್ಗೂರು ರಂಗರಾಜು, ನೀಲಕಂಠಪ್ಪ ಮತ್ತು ವಾಜಮಂಗಲ ಮಾದೇವ್ ಇದ್ದರು.