ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿ, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ, ಸ್ವಚ್ಫತೆ ಮಾಡಿಸಿದ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯೊದಗಿಸಿದೆ.
ಪ್ರಕರಣ ಸಂಬಂಧ ಇಂದು ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ ನಾರಾಯಣಸ್ವಾಮಿ, “ಪ್ರಕರಣ ಮುಚ್ಚಿ ಹಾಕಲು ವಿಫಲ ಯತ್ನ ನಡೆಸಲಾಗಿದೆ” ಎಂದು ಆರೋಪಿಸಿದ್ದಾರೆ.
“ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರದಿಂದ ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಅಧಿವೇಶನದಲ್ಲಿ ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಅವಕಾಶ ನೀಡುತ್ತದೆ ಎನ್ನುವ ಕಾರಣಕ್ಕೆ ಮುಚ್ಚಿ ಹಾಕುವ ಯತ್ನ ನಡೆದಿದೆ” ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಆರೋಪಿಸಿದ್ದಾರೆ.
ಘಟನೆ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮಕ್ಕಳು ವಸತಿ ಶಾಲೆಯಲ್ಲಿ ನಡೆದಿರುವ ಪ್ರಕರಣದಿಂದ ಗಾಬರಿಯಲ್ಲಿದ್ದಾರೆ. ಮಕ್ಕಳನ್ನು ಮಲದ ಗುಂಡಿಯಲ್ಲಿ ಇಳಿಸಿರುವುದು ಸಮಾಜಕ್ಕೆ ಮಾಡಿರುವ ಅಪಮಾನ. ಇದೊಂದು ತಲೆತಗ್ಗಿಸುವ ಘಟನೆ. ಈ ಘಟನೆ ನಡೆದು(ಡಿ.1ರಂದು) 15ದಿನ ಕಳೆದರೂ ಇದುವರೆಗೆ ಜಿಲ್ಲಾಡಳಿತ ಇದರ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ಅಚ್ಚರಿ, ಬೇಸರ ತಂದಿದೆ. ಇದರ ಜೊತೆಗೆ ಮಕ್ಕಳ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪ ಕೂಡ ಕೇಳಿಬಂದಿದೆ. ನ್ಯಾಯಾಧೀಶರು ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ಇದು ಎಲ್ಲ ವಸತಿ ಶಾಲೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ” ಎಂದು ತಿಳಿಸಿದ್ದಾರೆ.
“ಕೇಸು ಹಾಕಿದರೆ, ಪ್ರಕರಣ ದಾಖಲು ಮಾಡಿದರೆ ಬದಲಾವಣೆಯಾಗುವುದಿಲ್ಲ. ಸರ್ಕಾರ ಇದರ ಜವಾಬ್ದಾರಿ ಹೊರಬೇಕಾಗಿದೆ. ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕೊರತೆಗಳ ಬಗ್ಗೆ ಎಸ್‌ಐಟಿ ತನಿಖೆಯಾಗಬೇಕು. ವಸತಿ ಶಾಲೆಗಳಲ್ಲಿ ನಡೆಯುತ್ತಿರುವ ಶೋಷಣೆ ಕುರಿತು ತನಿಖೆಯಾಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ಈ ಪ್ರಕರಣ ಸರ್ಕಾರಕ್ಕೆ ಗೌರವ ತರುವುದಿಲ್ಲ. ಸಚಿವ ಎಸ್.ಸಿ.ಮಹದೇವಪ್ಪ ಅವರ ಮೇಲೆ ವಿಶ್ವಾಸವಿದೆ. ಸಿಎಂ ಸಿದ್ದರಾಮಯ್ಯ ಅವರೂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜಿ ಪಂಚಾಯಿತಿ ಬಗ್ಗೆ ಗೊತ್ತಿಲ್ಲ. ಯಾರೇ ಆಗಿರಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು” ಆಗ್ರಹಿಸಿದರು.
ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದರು, ಈ ಪ್ರಕರಣದಲ್ಲಿ ಯಾರಿಗೂ ಬೆದರಿಕೆ ಹಾಕದಂತೆ ಸಿಇಓ ಪದ್ಮ ಬಸಂತಪ್ಪಗೆ ಸೂಚನೆ ನೀಡಿದರು. ಈ ವೇಳೆ ಸಂಸದ ಎಸ್ ಮುನಿಸ್ವಾಮಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.