ತಾಲೂಕು ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳು ಪರದಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಸೋಮವಾರ ರಾತ್ರಿ ನಡೆದಿದೆ.
ರಾತ್ರಿ 10 ಗಂಟೆಯ ವೇಳೆಗೆ ವಿದ್ಯುತ್ ಕಡಿತಗೊಂಡಿತ್ತು. ಕೆಲ ಸಮಯ ವಿದ್ಯುತ್ ಬಾರದೆ, ಪರ್ಯಾಯ ವ್ಯವಸ್ಥೆಯ ಬಗ್ಗೆ ಸಿಬ್ಬಂದಿ ಕಾಳಜಿ ವಹಿಸದಿದ್ದ ಕಾರಣ ರೋಗಿಗಳು ಪರದಾಡಿದ್ದಾರೆ. ಆಸ್ಪತ್ರೆಯಲ್ಲಿಯೇ ವಿದ್ಯುತ್ ಸಂಪರ್ಕ ಸರಿಯಾಗಿ ಇಲ್ಲದನ್ನು ಕಂಡು ರೋಗಿಗಳು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಜನರೇಟರ್ ಇದ್ದರೂ, ಅದನ್ನು ಸಿಬ್ಬಂದಿಗಳು ಆನ್ ಮಾಡಿಲ್ಲ. ಕರೆಂಟ್ ಇಲ್ಲದ ಸಮಯದಲ್ಲಿ ವೈದ್ಯರು, ಸಿಬ್ಬಂದಿಗಳ ಸುಳಿವೇ ಇರಲಿಲ್ಲ ರೋಗಿಗಳು ಆರೋಪಿಸಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ಧೋರಣೆಯ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.
“ಸೋಮವಾರ ರಾತ್ರಿ 10 ನಿಮಿಷ ವಿದ್ಯುತ್ ಕಡಿತವಾಗಿತ್ತು. ಸಿಬ್ಬಂದಿಗಳು ಜರನೇಟರ್ ಆನ್ ಮಾಡದೇ ಇದ್ದಿದ್ದರಿಂದ ರೋಗಿಗಳು ಆತಂಕಗೊಂಡಿದ್ದಾರೆ. ಪ್ರಕರಣದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ. ಲೋಪಕ್ಕೆ ಕಾರಣವಾದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ರಾಯಬಾಗ ವೈದ್ಯಾಧಿಕಾರಿ ಶಿವನಗೌಡ ಎಂ ಪಾಟೀಲ್ ತಿಳಿಸಿದ್ದಾರೆ.