ಬರ ಪರಿಹಾರದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೂರು ಬಾರಿ ಮನವಿ ಕೊಟ್ಟಿದ್ದರೂ ಪ್ರಾಥಮಿಕ ಸಭೆಯನ್ನೇ ನಡೆಸಿಲ್ಲ. ಹೀಗಾಗಿ, ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತಮಟ್ಟದ ಸಮಿತಿ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರ ಪರಿಹಾರ ಒದಗಿಸಲು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ಪ್ರಧಾನಿಯವರಿಗೆ ನಾವು ಮುಖ್ಯವಾಗಿ ಐದು ಒತ್ತಾಯಗಳನ್ನು ಮಂಡಿಸಿ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಸಮಾಧಾನದಿಂದ ಕೇಳಿಸಿಕೊಂಡು ಸ್ಪಂದಿಸಿದ್ದಾರೆ. ಸ್ಪಂದನೆಗೆ ತಕ್ಕಂತೆ ಶೀಘ್ರ ಪರಿಹಾರವನ್ನು ಅವರಿಂದ ನಿರೀಕ್ಷಿಸಿದ್ದೇವೆ ಎಂದರು.
ಬರ ಪರಿಹಾರ ಶೀಘ್ರ ಬಿಡುಗಡೆ, ನರೇಗಾ ಕೆಲಸವನ್ನು 150 ದಿನಗಳಗೆ ಹೆಚ್ಚಿಸಬೇಕು, ಭದ್ರಾ ಮೇಲ್ದಂಡೆಗೆ ಕೊಟ್ಟ ಮಾತಿನಂತೆ ಹಣ ಬಿಡುಗಡೆ ಮಾಡಬೇಕು, ಮಹದಾಯಿ ಯೋಜನೆಗೆ ಪರಿಸರ ಕ್ಲಿಯರೆನ್ಸ್ ಶೀಘ್ರವಾಗಿ ನೀಡಬೇಕು, ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಅನುಮತಿಸಬೇಕು ಎಂಬ ಐದು ಬೇಡಿಕೆಗಳ ಈಡೇರಿಸುವಂತೆ ಮನವಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Chief Minister of Karnataka, Shri @siddaramaiah, met Prime Minister @narendramodi.@CMofKarnataka pic.twitter.com/UmhypdYRJI
— PMO India (@PMOIndia) December 19, 2023
ಬರ ಪರಿಹಾರ ಸಂಬಂಧ ಇವತ್ತಿನವರೆಗೂ ಉನ್ನತಮಟ್ಟದ ಸಭೆ ಮಾಡಿಲ್ಲ. ಇದರಿಂದ ರಾಜ್ಯದ ರೈತರ ಸಂಕಷ್ಟಕ್ಕೆ ಕೇಂದ್ರದಿಂದ ಬರಬೇಕಾದ ಪರಿಹಾರ ಬರುತ್ತಿಲ್ಲ. ಮಹದಾಯಿ ವಿಚಾರದಲ್ಲಿ ಈಗಾಗಲೇ ಗೆಜೆಟ್ ಕೂಡ ಆಗಿದೆ. ಬೇರೆ ಅಡೆ ತಡೆ ಏನೂ ಇಲ್ಲ. ಪರಿಸರ ಕ್ಲಿಯರೆನ್ಸ್ ಮಾತ್ರ ಬಾಕಿ ಇದೆ. ಇದನ್ನು ಕೇಂದ್ರವೇ ಕೊಡಬೇಕು. ಇದುವರೆಗೂ ಕೊಟ್ಟಿಲ್ಲ. ಕೇಂದ್ರ ಕ್ಲಿಯರೆನ್ಸ್ ಕೊಟ್ಟ ಕೂಡಲೇ ಕೆಲಸ ಶುರು ಮಾಡಬಹುದು ಎಂದು ತಿಳಿಸಿದ್ದಾರೆ.
“ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ₹5300 ಕೋಟಿ ಘೋಷಿಸಿದ್ದರು. ಇವರ ಘೋಷಣೆ ಆಧಾರದಲ್ಲಿ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಕೂಡ ₹5300 ಕೋಟಿ ಘೋಷಿಸಿದ್ದರು. ಇವತ್ತಿನವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಕಮಿಟ್ಮೆಂಟ್. ನೀವೇ ಕೊಟ್ಟಿರುವ ಮಾತಿನಂತೆ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದೇವೆ” ಎಂದು ಸಿಎಂ ಮಾಹಿತಿ ನೀಡಿದರು.