ಭವಾನಿ ರೇವಣ್ಣ ಅವರಿಗೆ ಹಾಸನ ವಿಧಾನಸಭಾ ಚುನಾವಣೆ ಟಿಕೆಟ್ ನೀಡಿದರೆ, ಅವರು ಗೆಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಸೂಚನೆ ನೀಡಿದ್ದೆ. ಕುಟುಂಬಕ್ಕೇ ಹಾಸನ ಟಿಕೆಟ್ ಕೊಟ್ಟು ಮಾಧ್ಯಮಗಳಿಗೆ ಆಹಾರ ಆಗುವುದಿಲ್ಲ. ಯಾರೋ ರೇವಣ್ಣ ಕುಟುಂಬಕ್ಕೆ ತಲೆಗೆ ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬವನ್ನು ಮುಗಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆʼ ಎಂದು ಆರೋಪಿಸಿದರು.
ನಮ್ಮವರಿಗೆ ಅಧಿಕಾರಕ್ಕಿಂತ ಹಾಸನ ಟಿಕೆಟ್ ಬಗ್ಗೆ ಚಿಂತೆ
ʻʻನಾನು ಪಕ್ಷ ಕಟ್ಟಿ ಅಧಿಕಾರಕ್ಕೆ ತರಬೇಕೆಂದು ಹಗಲು ರಾತ್ರಿ ಓಡಾಡುತ್ತಿದ್ದೇನೆ. ಆದರೆ, ನಮ್ಮವರು ಒಂದು ಕ್ಷೇತ್ರದ ಟಿಕೆಟ್‌ಗಾಗಿ ಚಿಂತೆ ಮಾಡುತ್ತಿದ್ದಾರೆ. ಬೇರೆ ಪಕ್ಷಗಳಿಗೆ ನೂರಾರು ಸೀಟ್‌ಗಳ ಚಿಂತೆಯಿದೆ. ನಮಗೆ ಹಾಸನದಲ್ಲಿ ಒಂದೇ ಸಿಂಹಾಸನದ ಚಿಂತೆಯಾಗಿದೆ. ನಾನು ನಂದೇ ಆದ ಆಲೋಚನೆ ಮಾಡಿ, ಮಾಹಿತಿ ಪಡೆದು ತೀರ್ಮಾನಕ್ಕೆ ಬರುತ್ತೇನೆ. ಹಾಸನ ಟಿಕೆಟ್ ಗೊಂದಲದ ಚರ್ಚೆ ನನಗೇನು ದೊಡ್ಡದಲ್ಲʼʼ ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಯಕರ್ತರ ಅಭಿಪ್ರಾಯಕ್ಕೆ ಮಣಿಯಬೇಕು
ʻಹಾಸನದಲ್ಲಿ ಸಧೃಡ ಕಾರ್ಯಕರ್ತರಿದ್ದಾರೆ, ಅವರ ಅಭಿಪ್ರಾಯಕ್ಕೆ ಮಣಿಬೇಕು ಅನ್ನೋದು ನನ್ನ ಅಭಿಪ್ರಾಯ. ಇಲ್ಲಿ ಪ್ರತಿಷ್ಠೆ ಮುಖ್ಯವಲ್ಲ. ಅಲ್ಲಿನ ಗ್ರೌಂಡ್ ರಿಯಾಲಿಟಿ ಮುಖ್ಯ. ನನ್ನ ಪ್ರಕಾರ ಇಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಿದರೆ ಗೆಲ್ಲಲ್ಲ. ಆದರೆ, ಪಕ್ಷಕ್ಕಿಂತ ಸ್ವಾರ್ಥ ಮುಖ್ಯ ಅನ್ನುವುದೇ ಆದರೆ ನಾನೇನೂ ಮಾಡಕ್ಕಾಗಲ್ಲʼʼ ಎಂದು ಹೇಳಿದರು.
ರೇವಣ್ಣ 2 ಕಡೆ ಟಿಕೆಟ್ ಕೇಳಿರುವುದು ಗಮನಕ್ಕೆ ಬಂದಿಲ್ಲ
ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇನೆ. ನಾನು ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ನನಗೆ ಅವರಿಗೆ ಉತ್ತರ ಕೊಟ್ಟಗೊಂಡು ಕೂರಲು ಆಗುವುದಿಲ್ಲ. ಕೆಲವು ಸಣ್ಣ- ಪುಟ್ಟ ಸಮಸ್ಯೆಗಳಿಂದ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಎರಡು ಕ್ಷೇತ್ರಗಳೀಗೆ ರೇವಣ್ಣ ಟಿಕೆಟ್ ಕೇಳಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ವಿಧಾನಸಭಾ ಚುನಾವಣೆ | ಮತದಾನ ಬಹಿಷ್ಕಾರ; ಬ್ಯಾನರ್ ಅಳವಡಿಸಿ ಗ್ರಾಮಸ್ಥರ ಆಕ್ರೋಶ
ʻʻದೇವೇಗೌಡರ ಕುಟುಂಬ ಮುಗಿಸಬೇಕೆಂದು ಯಾರ್ಯಾರು ಇವರ ತಲೆ ಕೆಡಿಸುತ್ತಿದ್ದಾರೆ ನಂಗೆ ಗೊತ್ತಿದೆ. ನಾವು ದೇವೇಗೌಡರ ಕುಟುಂಬದ ಹಿತೈಷಿಗಳೆಂದು ಕುಟುಂಬ ಮುಗಿಸಲು ಹೊರಟವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತಕ್ಕ ಪಾಠ ಕಲಿಸುತ್ತೇವೆʼʼ ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಾವೇ ಖರ್ಗೆ ಅವರನ್ನು ಸಿಎಂ ಮಾಡಿ ಎಂದಾಗ ಕೇಳಲಿಲ್ಲ : ಎಚ್ ಡಿ ಕುಮಾರಸ್ವಾಮಿ
ʻʻಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈಗ ದಲಿತ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಿದ್ದಾರೆ. 2018ರಲ್ಲಿ ಅವರು ನಮ್ಮ ಮನೆಗೆ ಮೈತ್ರಿ ಸರ್ಕಾರ ಮಾಡಲು ಬಂದಾಗ ನಾವೇ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸೂಚಿಸಿದ್ದೆವು. ಆದರೆ, ಅವರು ಅದನ್ನು ಬಳಸಿಕೊಳ್ಳಲಿಲ್ಲ. ಈಗ ಇನ್ನೂ ಬಹುಮತ ಬಂದಿಲ್ಲ. ದಲಿತ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಿದ್ದಾರೆʼʼ ಎಂದು ಹೇಳಿದರು.
ಎಐಎಮ್‌ಐಎಮ್ ಪಕ್ಷದ ಜೊತೆ ಹೊಂದಾಣಿಕೆ ಚರ್ಚೆ
ʻʻಕೆಲವು ಪಕ್ಷಗಳ ಜೊತೆಗೆ ಹೊಂದಾಣಿಕೆಯ ಮಾತುಕತೆ ನಡೆಯುತ್ತಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಮ್‌ಐಎಮ್ ಪಕ್ಷದವರು ಕೆಲವು ಸೀಟ್ ಕೇಳಿದ್ದಾರೆ, ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ. ಬಿಜೆಪಿ, ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಮೇಲೆ ಹಲವರು ನಮ್ಮ ಬಳಿ ಬರಲಿದ್ದಾರೆʼʼ ಎಂದು ತಿಳಿಸಿದರು.