ರಾಮ ಮಂದಿರ ಉದ್ಘಾಟನೆಯಿಂದ ಕರಾವಳಿಯ ಶೂದ್ರ ಸ್ವಾಮೀಜಿಗಳು ಹೊರಕ್ಕೆ!

Date:

Advertisements

“ರಾಮನ ಹೆಸರಿನಲ್ಲಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿಸುವ ಮೂಲಕ ಕರ್ನಾಟಕದಲ್ಲಿ ಸಾವು ನೋವು, ಅಪನಂಬಿಕೆ, ಧರ್ಮ ದ್ವೇಷಗಳಿಗೆ ಕಾರಣರಾದ ಶೂದ್ರ ಸ್ವಾಮೀಜಿಗಳಿಗೆ ಈಗಲಾದರೂ ಬುದ್ದಿ ಬರಬೇಕಿದೆ…”

ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮಕ್ಕೆ ದೇಶದ ಗಣ್ಯರು, ಪ್ರಮುಖ ರಾಜಕಾರಣಿಗಳು, ಸ್ವಾಮೀಜಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗುತ್ತಿದೆ. ರಾಮಮಂದಿರ ನಿರ್ಮಾಣ ವಿಷಯವನ್ನೇ ಇಟ್ಟುಕೊಂಡು ಕೋಮುವಾದದ ಪ್ರಯೋಗಶಾಲೆಯನ್ನಾಗಿಸಿದ ಕರಾವಳಿಯ ಶೂದ್ರ ಸ್ವಾಮೀಜಿಗಳನ್ನು ಮಾತ್ರ ರಾಮಮಂದಿರ ಉದ್ಘಾಟನೆಯಿಂದ ಹೊರಗಿಡಲಾಗಿದೆ.

1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಬಳಿಕ ಕರ್ನಾಟಕದಲ್ಲೂ ಹಿಂದುತ್ವ ಚಳವಳಿಯನ್ನು ತೀವ್ರಗೊಳಿಸಲಾಯಿತು. ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಕರ್ನಾಟಕದ ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದರು. ಆ ಬಳಿಕ ಆರ್‌ಎಸ್‌‌ಎಸ್ ತಂತ್ರಗಾರಿಕೆಯ ಭಾಗವಾಗಿ ಕರ್ನಾಟಕ ಕರಾವಳಿಯನ್ನು ಪ್ರಯೋಗಶಾಲೆಯನ್ನಾಗಿಸಿ ಶೂದ್ರ ಸ್ವಾಮೀಜಿಗಳನ್ನು ಕೋಮುಕಣಕ್ಕೆ ಇಳಿಸಲಾಯಿತು. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳೂ ಸೇರಿದಂತೆ ಉಡುಪಿ ಅಷ್ಟ ಮಠದ 8 ಹಿರಿಯ ಸ್ವಾಮೀಜಿಗಳಾಗಲೀ, 8 ಕಿರಿಯ ಸ್ವಾಮೀಜಿಗಳಾಗಲೀ, ಇನ್ನುಳಿದ ಕರ್ನಾಟಕದ ಬ್ರಾಹ್ಮಣ ಸ್ವಾಮೀಜಿಗಳಾಗಲೀ ಕೋಮುವಾದ ನೆಲೆಯ ರಾಮಮಂದಿರ ಚಳವಳಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬಿಜೆಪಿ ಇನ್ನೂ ಗಟ್ಟಿಗೊಳ್ಳದ ಸಮಯದಲ್ಲಿ, ಜಾತ್ಯತೀತ ಸರ್ಕಾರಗಳೇ ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿದ್ದ ದಿನಗಳಲ್ಲಿ ಬ್ರಾಹ್ಮಣ ಸ್ವಾಮಿಗಳು ತೆರೆಮರೆಯಲ್ಲಿ ನಿಂತು ಶೂದ್ರ ಸ್ವಾಮೀಜಿಗಳನ್ನು ಕೋಮುಕದನಕ್ಕೆ ಬೀದಿಗೆ ಅಟ್ಟಿದ್ದರು.

Advertisements

90ರ ದಶಕದಲ್ಲಿ ರಾಮಮಂದಿರಕ್ಕಾಗಿ ಇಟ್ಟಿಗೆ ಅಭಿಯಾನ ಕರ್ನಾಟಕದ ಕರಾವಳಿಯಲ್ಲಿ ತೀವ್ರಗೊಂಡಿತ್ತು. ಈ ಅಭಿಯಾನಕ್ಕೆ ಒಮ್ಮೆ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳು ಬಂದಿದ್ದು ಬಿಟ್ಟರೆ ಉಳಿದಂತೆ ಕರಾವಳಿಯ ಶೂದ್ರ ಸ್ವಾಮೀಜಿಗಳೇ ನೇತೃತ್ವ ವಹಿಸಿದ್ದರು. ಕೊಲ್ಯ ರಮಾನಂದ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಕೇಮಾರು ಈಶ ವಿಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ ರಾಮಮಂದಿರ ನಿರ್ಮಾಣ ಚಳವಳಿಯ ನೇತೃತ್ವ ವಹಿಸಿದ್ದರು.

ಆರ್‌‌ಎಸ್‌ಎಸ್‌ನ ಮಾರ್ಗದರ್ಶನದಂತೆ ಈ ಐವರು ಶೂದ್ರ ಸ್ವಾಮೀಜಿಗಳು ನಾಲ್ಕು ಹಂತದ ಹಿಂದುತ್ವ ಚಳವಳಿಯನ್ನು ರಾಮಮಂದಿರ ನಿರ್ಮಾಣ ಹಿನ್ನಲೆಯಲ್ಲಿ ಮುನ್ನಡೆಸಿದರು. 90ರ ದಶಕದಲ್ಲಿ ನಡೆದ ಇಟ್ಟಿಗೆ ಸಂಗ್ರಹ ಚಳವಳಿ ಮೊದಲನೆಯದ್ದಾದರೆ, 2001 ಅಕ್ಟೋಬರ್ ನಿಂದ ಪ್ರಾರಂಭಗೊಂಡ ’ರಾಮ ನಾಮ ದೀಕ್ಷಾ ಅಭಿಯಾನ’ ಎರಡನೆಯದ್ದು. ಇದಾದ ಬಳಿಕ 2001 ಡಿಸೆಂಬರ್ 02ರಂದು ರಾಮನಾಮ ಯಜ್ಞ ಎಂಬ ಬೃಹತ್ ಯಜ್ಞ ಮತ್ತು ಸಮಾರೋಪ ಸಮಾರಂಭವನ್ನು ಮಂಗಳೂರಿನ ಮೂಲ್ಕಿಯಲ್ಲಿ ನಡೆಸಲಾಯಿತು. ಈಗಿನಂತೆ ಆಗ ಶೂದ್ರ ಸ್ವಾಮೀಜಿಗಳ ಮಠದಲ್ಲಿ ಹಣವಿರಲಿಲ್ಲ. ಈಗಿನಂತೆ ಮಠಗಳಿಗೆ ತೆರಿಗೆದಾರರ ಹಣವನ್ನು ಬಿಟ್ಟಿಯಾಗಿ ನೀಡಲು ಬಿಜೆಪಿ ಸರ್ಕಾರವೂ ಇರಲಿಲ್ಲ. ಭಕ್ತರಿಂದ ಕಾಡಿಬೇಡಿ ಹಣ ಸಂಗ್ರಹಿಸಿ ಶೂದ್ರ ಸ್ವಾಮೀಜಿಗಳು ಅವಿಭಜಿತ ಜಿಲ್ಲೆಯಾದ್ಯಂತ ಸಂಚರಿಸಿ ಹೋಬಳಿ ಮಟ್ಟದಲ್ಲಿ ರಾಮ ನಾಮ ದೀಕ್ಷೆ ನೀಡಿ ಮೂಲ್ಕಿಯಲ್ಲಿ ಸಮಾರೋಪ ಸಮಾರಂಭ ಮಾಡಿದ್ದರು. ಈ ರಾಮ ನಾಮ ದೀಕ್ಷೆ ಸಮಾರೋಪ ಕಾರ್ಯಕ್ರಮದಲ್ಲಿ ಕೊಲ್ಯ ರಮಾನಂದ ಸ್ವಾಮೀಜಿ, ಕೇಮಾರು ಈಶ ವಿಠಲ ದಾಸ ಸ್ವಾಮೀಜಿ, ಅಮೃತಾನಂದಮಯಿ ಮಠದ ಸ್ವಾಮೀಜಿ ಭಾಗಿಯಾಗಿದ್ದರು. ಒಬ್ಬನೇ ಒಬ್ಬ ಬ್ರಾಹ್ಮಣ ಸ್ವಾಮೀಜಿ ಈ ಯಜ್ಞ ಸಮಾರೋಪದಲ್ಲಿ ಭಾಗಿಯಾಗಲಿಲ್ಲ. ಆರ್‌‌ಎಸ್‌ಎಸ್‌ ಪ್ರಾಯೋಜಿತ ಇದೇ ಯಜ್ಞ ಸಮಾರೋಪ ಸಮಾರಂಭದಲ್ಲಿ ಮುಂದಿನ ಹಿಂದುತ್ವ ಚಳವಳಿಯಾಗಿ ‘ಹಿಂದೂ ಸಮಾಜೋತ್ಸವ’ಗಳನ್ನು ನಡೆಸಬೇಕು ಎಂದು ನಿರ್ಣಯಿಸಲಾಯಿತು.

ರಾಮ ಮಂದಿರ ನಿರ್ಮಾಣ ಸಂಕಲ್ಪ ಎಂಬ ಘೋಷಣೆಯೊಂದಿಗೆ ರಾಜ್ಯದ ಮೊದಲ ‘ಹಿಂದೂ ಸಮಾಜೋತ್ಸವ‘ 2002 ಜನವರಿ 06 ರಂದು ಸುರತ್ಕಲ್‌ನಲ್ಲಿ ನಡೆಯಿತು. ಒಡಿಯೂರು ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಕದ್ರಿ ಜೋಗಿ ಮಠದ ಸ್ವಾಮೀಜಿ, ಕೇಮಾರು ಈಶ ವಿಠಲ ದಾಸ ಸ್ವಾಮೀಜಿ ಮೊದಲ ಹಿಂದೂ ಸಮಾಜೋತ್ಸವದ ನೇತೃತ್ವ ವಹಿಸಿ ದಿಕ್ಸೂಚಿ ಭಾಷಣ ಮಾಡಿದ್ದರು. ಈ ಮೊದಲ ಹಿಂದೂ ಸಮಾಜೋತ್ಸವದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಸ್ವಾಮೀಜಿ ಉಪಸ್ಥಿತರಿರಲಿಲ್ಲ. ಆಗಿನ ಬ್ರಾಹ್ಮಣ ಮಠಗಳು ರಾಮಮಂದಿರ ನಿರ್ಮಾಣವನ್ನು ಪ್ರತಿಪಾದಿಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯದಲ್ಲಿದ್ದ ಜಾತ್ಯತೀತ ಸರ್ಕಾರಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದವು. ಬ್ರಾಹ್ಮಣ ಮಠಗಳು ಅನುದಾನಗಳನ್ನು ಪಡೆಯುತ್ತಾ ಕಾಂಗ್ರೆಸ್, ಜನತಾ ಸರ್ಕಾರಗಳ ಮಂತ್ರಿಗಳನ್ನು ಮಠಕ್ಕೆ ಕರೆಸಿ ಸನ್ಮಾನಿಸುತ್ತಿದ್ದವು. ಶೂದ್ರಗಳ ಮಠಗಳ ಸ್ವಾಮೀಜಿಗಳು ಮಾತ್ರ ಬೀದಿಗಿಳಿದು ರಾಮಮಂದಿರ ನಿರ್ಮಾಣಕ್ಕಾಗಿ ಹಿಂದುತ್ವ ಚಳವಳಿ ನಡೆಸುತ್ತಿದ್ದವು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವಷ್ಟೇ ಹಿಂದೂ ಸಮಾಜೋತ್ಸವಗಳಲ್ಲಿ ಬ್ರಾಹ್ಮಣ ಸ್ವಾಮೀಜಿಗಳು ಬಹಿರಂಗವಾಗಿ ಕಾಣಿಸಿಕೊಳ್ಳಲಾರಂಭಿಸಿದರು. ಮಂಗಳೂರಿನಲ್ಲಿ ನಡೆದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಬ್ರಾಹ್ಮಣ ಸ್ವಾಮೀಜಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿದ್ದಕ್ಕೆ ಶೂದ್ರ ಸ್ವಾಮೀಜಿಗಳು ಮುನಿಸಿಕೊಂಡು ‘ಸಮಾಜೋತ್ಸವ ಶುರು ಮಾಡಿದಾಗ ಈ ಬ್ರಾಹ್ಮಣ ಸ್ವಾಮೀಜಿಗಳೇ ಇರಲಿಲ್ಲ. ಈಗ ಬಿಜೆಪಿ ಸರ್ಕಾರ ಬಂದಾಗ ನಾವೇ ಹೊರಗಿನವರು’ ಎಂದು ಹೇಳಿಕೆಯನ್ನೂ ನೀಡಿದ್ದರು.

ರಾಮಮಂದಿರ ಟ್ರಸ್ಟ್‌ನಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳಿದ್ದರು. ಅವರು ನಿಧನರಾದ ನಂತರ ಅವರ ಶಿಷ್ಯ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ನೇಮಿಸಲಾಗಿದೆ. ಇದು ಯಾವ ಮಾನದಂಡದ ನೇಮಕ ಎಂಬುದು ಶೂದ್ರ ಸ್ವಾಮೀಜಿಗಳ ಪ್ರಶ್ನೆ! ಪೇಜಾವರ ವಿಶ್ವೇಶತೀರ್ಥರು ರಾಮಮಂದಿರ ಚಳವಳಿಯ ಭಾಗವಾಗಿದ್ದರು. ಪೇಜಾವರ ವಿಶ್ವ ಪ್ರಸನ್ನ ತೀರ್ಥ ಆಗ ಬಾಲಕರಾಗಿದ್ದು ರಾಮಮಂದಿರ ಚಳವಳಿಯ ಭಾಗವಲ್ಲ. ಆದರೂ ಟ್ರಸ್ಟಿ ಹುದ್ದೆ ಪಡೆದಿದ್ದು ಹೇಗೆ? ಅದೇನು ವಂಶಪಾರಂಪರ್ಯವೇ ? ಅಥವಾ ಮಠ ಪಾರಂಪರ್ಯ ಹುದ್ದೆಯೇ? ವಿಶ್ವೇಶತೀರ್ಥರ ನಿಧನದ ಬಳಿಕ ರಾಮಮಂದಿರ ಚಳವಳಿಯಲ್ಲಿ ಸಕ್ರಿಯರಾಗಿದ್ದ ಕರ್ನಾಟಕದ ಯಾವುದಾದರೂ ಶೂದ್ರ ಸ್ವಾಮೀಜಿಯನ್ನು ಟ್ರಸ್ಟ್‌ಗೆ ನೇಮಿಸಬೇಕಿತ್ತಲ್ಲವೇ ? “ಪೇಜಾವರ ಹಿರಿಯ ವಿಶ್ವೇಶತೀರ್ಥ ಸ್ವಾಮೀಜಿಗಳು ಬದುಕಿದ್ದಾಗ ಶೂದ್ರ ಸ್ವಾಮೀಜಿಗಳ ಜೊತೆ ಊಟ ಮಾಡದಿದ್ದರೂ, ಕೃಷ್ಣನಿಗೆ ಶೂದ್ರ ಸ್ವಾಮೀಜಿಗಳಿಂದ ಆರತಿ ಎತ್ತಿಸದಿದ್ದರೂ, ಆಗಾಗ ಕರೆದು ಒಟ್ಟಿಗೆ ಕೂರಿಸಿ ಸಭೆ ನಡೆಸುತ್ತಿದ್ದರು. ಈಗಿನ ಪೇಜಾವರ ವಿಶ್ವಪ್ರಸನ್ನ ತೀರ್ಥರಿಗೆ ದಿವಂಗತ ವಿಶ್ವೇಶ ತೀರ್ಥರ ಸರ್ಕಾರಿ ಪ್ರೊಟೋಕಾಲ್‌ಗಳು ಮಾತ್ರ ಬೇಕಾಗಿದೆ” ಎಂದು ಹೆಸರು ಹೇಳಲಿಚ್ಚಿಸದ ಶೂದ್ರ ಧಾರ್ಮಿಕ ಮುಖಂಡರೊಬ್ಬರು ಹೇಳುತ್ತಾರೆ.

ರಾಮನ ಹೆಸರಿನಲ್ಲಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿಸುವ ಮೂಲಕ ಕರ್ನಾಟಕದಲ್ಲಿ ಸಾವು ನೋವು, ಅಪನಂಬಿಕೆ, ಧರ್ಮ ದ್ವೇಷಗಳಿಗೆ ಕಾರಣರಾದ ಶೂದ್ರ ಸ್ವಾಮೀಜಿಗಳಿಗೆ ಈಗಲಾದರೂ ಬುದ್ದಿ ಬರಬೇಕಿದೆ. ಆರ್‌ಎಸ್‌ಎಸ್‌ನ ಅಂತಿಮ ಗುರಿ ಬ್ರಾಹ್ಮಣ್ಯದ ಸ್ಥಾಪನೆಯೇ ಹೊರತು ಹಿಂದುತ್ವವಲ್ಲ ಎಂದು ಅರಿವಿಗೆ ಬರಬೇಕಿದೆ.

ಇದನ್ನೂ ಓದಿರಿ: ಎಲ್ ಕೆ ಅಡ್ವಾಣಿ, ಎಂ ಎಂ ಜೋಷಿಗೆ ರಾಮಮಂದಿರ ಉದ್ಘಾಟನೆಗೆ ಬರಬೇಡಿ ಎಂದ ಟ್ರಸ್ಟ್!

ಸೂರಿಂಜೆ 1
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X