ಉತ್ತರ ಪ್ರದೇಶ ಕಾನ್ಪುರದ ಪಹೇವಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಬುದ್ಧ ಕಥಾ’ ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ಜನರ ಮೇಲೆ ಕೆಲವು ಮೇಲ್ಜಾತಿ ಸಮುದಾಯದವರು ಹಲ್ಲೆ ಜೊತೆಗೆ ಗುಂಡಿನ ದಾಳಿ ನಡೆಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ದಲಿತ ಸಮುದಾಯದ ಸದಸ್ಯರ ಮೇಲೆ ಹಲ್ಲೆ ನಡೆಸಿದ ನಂತರ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ(ಡಿ.19) ಎಂಟು ಜನರ ವಿರುದ್ಧ ಹಲವು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬುದ್ಧ ಕಥಾ ಕಾರ್ಯಕ್ರಮದ ಸ್ಥಳದಲ್ಲಿ ಮಲಗಿದ್ದ ದಲಿತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಸಂತ ರವಿದಾಸ್ ಅವರ ಪ್ರತಿಮೆಯನ್ನೂ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ರಾಮ್ ಸಾಗರ್ ಎಂಬುವರು ಸಾಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, “ಡಿಸೆಂಬರ್ 19 ರಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಕೆಲವು ಸಮಾಜ ವಿರೋಧಿಗಳು ಸಮುದಾಯದಲ್ಲಿ ಮಲಗಿದ್ದವರ ಮೇಲೆ ದಾಳಿ ಮಾಡಿದ್ದಾರೆ. ಅವರು ರೈಫಲ್ ಬಳಸಿ ಗುಂಡು ಹಾರಿಸಿದರು. ಘಟನೆಯಲ್ಲಿ ಪಿಂಟು, ನಿತಿನ್, ಪಂಕಜ್ ಎಂಬುವವರು ಗಾಯಗೊಂಡರು. ಅಪರಾಧಿಗಳು ಸಂತ ರವಿದಾಸ್ ಪ್ರತಿಮೆಯನ್ನು ಧ್ವಂಸಗೊಳಿಸಿದರು” ಎಂದು ತಿಳಿಸಿದ್ದಾರೆ.
ಠಾಣೆಯಲ್ಲಿ ಗಲಭೆ, ಹಲ್ಲೆ, ಪೂಜಾ ಸ್ಥಳ ಅಥವಾ ಪವಿತ್ರ ವಸ್ತುವನ್ನು ಅಪವಿತ್ರಗೊಳಿಸುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಯುಗದ ಜನತಂತ್ರ- ಆಡುವುದು ಒಂದು, ಮಾಡುವುದು ಇನ್ನೊಂದು
ಆರೋಪಿಗಳನ್ನು ಚಂದ್ರಭಾನ್ ಮಿಶ್ರಾ, ಗೋಲು ಮಿಶ್ರಾ, ಶಿವಂ ಮಿಶ್ರಾ, ಜೀತು ಮಿಶ್ರಾ, ಅರುಣ್ ಕೋಟೇದಾರ್, ಕಿನ್ನರ್ ಮಿಶ್ರಾ, ವಿಷಂಭರ್ ಮಿಶ್ರಾ ಮತ್ತು ಮನೀಶ್ ತಿವಾರಿ ಎಂದು ಪೊಲೀಸರು ಗುರುತಿಸಿದ್ದಾರೆ.
ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳಿಂದ ಒಂಬತ್ತು ದಿನಗಳ ಬುದ್ಧ ಕಥಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಸೋಮವಾರ ನಾಲ್ಕನೇ ದಿನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರಿನ ಪ್ರಕಾರ, ಮೇಲ್ಜಾತಿ ಸಮುದಾಯದ 15-20 ಜನರು ಕಾರ್ಯಕ್ರಮದ ಸ್ಥಳದಲ್ಲಿ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ನಾಲ್ಕು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುದ್ಧ ಕಥಾ ಕಾರ್ಯಕ್ರಮವನ್ನು ಆಯೋಜಿಸದಂತೆ ಮೇಲ್ಜಾತಿ ಸಮುದಾಯದವರು ದಲಿತರ ಮೇಲೆ ಈ ಹಿಂದೆ ಒತ್ತಡ ಹೇರಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಸಂತ ರವಿದಾಸ್ ಅವರ ಪ್ರತಿಮೆಯನ್ನೂ ಧ್ವಂಸಗೊಳಿಸಲಾಗಿದೆ. ಅವರು ಹಣ, ಕೆಲವು ಎಲೆಕ್ಟ್ರಾನಿಕ್ ವಸ್ತುಗಳು, ನಗದು ಮತ್ತು ಸಂವಿಧಾನದ ಪ್ರತಿಯನ್ನು ಸಹ ಕದ್ದಿದ್ದಾರೆ” ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಕಾನ್ಪುರದ ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಆನಂದ್ ಪ್ರಕಾಶ್ ತಿವಾರಿ ಅವರು ಮಂಗಳವಾರ ಮಾತನಾಡಿ, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ. ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲು ಹಿರಿಯ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಧ್ವಂಸಗೊಂಡ ಪ್ರತಿಮೆಯ ಜಾಗದಲ್ಲಿ ನಾವು ಹೊಸ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ನಾನು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದೇವೆ” ಎಂದು ತಿಳಿಸಿದರು.