ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ನವದೆಹಲಿನಲ್ಲಿ ನಡೆದ ವಿಪಕ್ಷಗಳ ಮೈತ್ರಿ ಒಕ್ಕೂಟ ‘ಇಂಡಿಯಾ’ದ ನಾಲ್ಕನೇ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಕಣಕ್ಕಿಳಿಸಲು ಪ್ರಸ್ತಾಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ವಾರಣಾಸಿಯಿಂದ ಪ್ರಿಯಾಂಕಾ ಗಾಂಧಿಯನ್ನು ಬೆಂಬಲಿಸುವುದಾಗಿ ಅವರು ಹೇಳಿದರು ಎಂದು ವರದಿಗಳು ಹೇಳುತ್ತವೆ.
2019 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿಯವರು ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕಾಂಗ್ರೆಸ್ ಕೊನೆಯ ಹಂತದಲ್ಲಿ ಅಜಯ್ ರೈ ಅವರನ್ನು ಕಣಕ್ಕಿಳಿಸಿದ ನಂತರ ಊಹಾಪೋಹಗಳಿಗೆ ತೆರೆ ಬಿದ್ದಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
ಇಂಡಿಯಾ ಒಕ್ಕೂಟದ ಸಭೆಯ ನಂತರ, ವಾರಣಾಸಿಯಿಂದ ಪ್ರಿಯಾಂಕಾ ಗಾಂಧಿಯವರ ಉಮೇದುವಾರಿಕೆ ಬಗ್ಗೆ ಕೇಳಿದಾಗ, “ನಾವು ಸಭೆಯಲ್ಲಿ ಚರ್ಚಿಸಿದ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.
ಪಕ್ಷದ ನಾಯಕರು ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ನಾಯಕಿ ಎಂದು ಪರಿಗಣಿಸುತ್ತಾರೆ. ಇದುವರೆಗೂ ಆಕೆ ಚುನಾವಣೆಗೆ ಸ್ಪರ್ಧಿಸಿಲ್ಲ. 2019ರ ಸಾರ್ವತ್ರಿಕ ಚುನಾವಣೆ ವೇಳೆ ಅಖಾಡಕ್ಕಿಳಿದಿದ್ದ ಪ್ರಿಯಾಂಕಾ ಉತ್ತರ ಪ್ರದೇಶದ ರಾಜಕೀಯದ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ. ಅವರು ಆ ರಾಜ್ಯದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಮೈತ್ರಿಕೂಟದ ನಾಲ್ಕನೇ ಸಭೆಯಲ್ಲಿ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಡಿಸೆಂಬರ್ 31, 2023 ರೊಳಗೆ ‘ಸೀಟು ಹಂಚಿಕೆ’ ಸೂತ್ರವನ್ನು ಅಂತಿಮಗೊಳಿಸುವಂತೆ ಇಂಡಿಯಾ ಒಕ್ಕೂಟದ ಸದಸ್ಯರನ್ನು ಒತ್ತಾಯಿಸಿದರು.
ರಾಜ್ಯ ಮಟ್ಟದಲ್ಲಿ ಸೀಟು ಹಂಚಿಕೆಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಅಂತಿಮಗೊಳಿಸಲಾಗುವುದು ಮತ್ತು ಅಂತಿಮವಾಗಿ ಜನವರಿ ಎರಡನೇ ವಾರದ ವೇಳೆಗೆ ಉನ್ನತ ನಾಯಕತ್ವದ ಮಟ್ಟದಲ್ಲಿ ಸ್ಥಾನ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.