ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ

Date:

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ರಾಜಕೀಯ ದ್ವೇಷಾಸೂಯೆಗಳಲ್ಲಿ ಮುಳುಗಿ, ದೋಷಾರೋಪಣೆಗಳಲ್ಲೇ ಕಾಲಹರಣ ಮಾಡುವುದು ಜವಾಬ್ದಾರಿಯುತ ಸರ್ಕಾರಗಳ ನಡೆಯಲ್ಲ; ಯಾವುದೇ ಕಾರಣಕ್ಕೂ ಕ್ಷಮಿಸುವಂಥದ್ದಲ್ಲ. ಕೇಂದ್ರದಿಂದ ಪರಿಹಾರ ಬರಲಿ, ಬರದಿರಲಿ ರೈತರನ್ನು ಆತ್ಮಹತ್ಯೆಯಿಂದ ಪಾರು ಮಾಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಲಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ. 19ರಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿದ್ದಾರೆ. ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದ 236 ತಾಲೂಕುಗಳಲ್ಲಿ 223 ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದಕ್ಕಾಗಿ 4663.12 ಕೋಟಿ ರೂ. ಇನ್ಪುಟ್ ಸಬ್ಸಿಡಿ, 12,577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಿದ್ದರಾಮಯ್ಯನವರನ್ನು ಆತ್ಮೀಯವಾಗಿಯೇ ಬರಮಾಡಿಕೊಂಡು, ಅವರು ಕೊಟ್ಟ ಮನವಿ ಸ್ವೀಕರಿಸಿ, ಸಹಕರಿಸುವುದಾಗಿ ಹೇಳಿದ್ದಾರೆ. ಅಲ್ಲಿಗೆ, ಕರ್ನಾಟಕದಿಂದ ದೆಹಲಿಗೆ ಹೋದ ಮುಖ್ಯಮಂತ್ರಿಗಳ ಜವಾಬ್ದಾರಿ ಹಾಗೂ ಅಹವಾಲು ಸ್ವೀಕರಿಸಿದ ಪ್ರಧಾನಿ-ಗೃಹ ಸಚಿವರುಗಳ ಆದರಣೀಯ ನಡವಳಿಕೆ- ಎರಡೂ ಮುಗಿದಿದೆ. ಅದು ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಜನತೆಯ ಗಮನಕ್ಕೂ ಬಂದಿದೆ. ಆದರೆ ನಾಡಿನ ರೈತನ ಬದುಕು ಮಾತ್ರ ಹಾಗೆಯೇ ಇದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಖ್ಯಮಂತ್ರಿಗಳು ಕೊಟ್ಟ ಮನವಿ ಕೇವಲ ಕಾಗದದ ಹಾಳೆಯಲ್ಲ. ಆ ಮನವಿ ಪತ್ರದಲ್ಲಿರುವುದು ಕೇವಲ ಅಂಕಿ-ಸಂಖ್ಯೆಗಳಲ್ಲ. ಆ ಮನವಿ ಪತ್ರದ ಹಿಂದೆ ಕೃಷಿ-ಕಂದಾಯ ಸಚಿವರು ಮತ್ತವರ ಇಲಾಖೆಯ ಅಧಿಕಾರಿಗಳ ಮೂರು ತಿಂಗಳ ಸಮಯ, ಶ್ರಮ, ಸರ್ವೇ ಕಾರ್ಯವಿದೆ; ಆರು ತಿಂಗಳ ರೈತರ ದಿಕ್ಕೆಟ್ಟ ಬದುಕಿನ ದಾಖಲಾತಿ ಇದೆ. ನಾಡಿನ ಬರಗಾಲದ ಬರ್ಬರ ಚಿತ್ರಣವಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ, ರಾಜ್ಯ ಬರಗಾಲಕ್ಕೆ ತುತ್ತಾಗಿರುವುದನ್ನು ಕಣ್ಣಾರೆ ಕಂಡರೂ, ಕೃಷಿ-ಕಂದಾಯ ಸಚಿವರು ಕೃಷಿ ಕುಟುಂಬದಿಂದ ಬಂದವರಾಗಿದ್ದರೂ, ರೈತರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತಿಲ್ಲ. ದೇಶಕ್ಕೇ ಉಣಬಡಿಸುವ ರೈತ ತನ್ನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಒಂದೊತ್ತು ಹಸಿದುಕೊಂಡು ಮಲಗಬಲ್ಲ; ಆದರೆ ತನ್ನ ಬದುಕಿನ ಭಾಗವೇ ಆದ ಜಾನುವಾರುಗಳಿಗೆ ಹಿಡಿ ಹುಲ್ಲು ಹಾಕದಿದ್ದರೆ, ಆತ ಆತ್ಮಹತ್ಯೆಗೂ ಒಳಗಾಗಬಲ್ಲ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಮೇವು ಸಿಗದ ಸ್ಥಿತಿ ನಿರ್ಮಾಣಗೊಂಡಿದೆ. ಈ ಕಟು ಸತ್ಯ ಅರಿಯದ, ಅರಿವಿಗೆ ಬಂದರೂ ಹೇಳಿಕೆಗಳಿಗೆ, ಭಾಷಣಗಳಿಗೆ, ಸಬೂಬುಗಳಿಗೇ ಸೀಮಿತವಾಗಿರುವ ಕೃಷಿ-ಕಂದಾಯ ಸಚಿವರ ವರ್ತನೆ ರೈತ ಸಮುದಾಯದಲ್ಲಿ ರೇಜಿಗೆ ತರಿಸಿದ್ದರೆ ಆಶ್ಚರ್ಯವಿಲ್ಲ.

ಆರು ತಿಂಗಳಿನ ಬೆಳೆ ನಾಶ ಮತ್ತು ಸಾಲಬಾಧೆಯಿಂದ 2023ರ ಏಪ್ರಿಲ್ ನಿಂದ ನವೆಂಬರ್‌ ವರೆಗೆ ಒಟ್ಟು 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅರ್ಹ ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಮತ್ತು ಮಾಸಿಕ 2,000 ರೂ. ಪಿಂಚಣಿ ನೀಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ ಅದು ಕೂಡ ಘೋಷಣೆಯಾಗಿಯೇ ಉಳಿದಿದೆ.

ರಾಜ್ಯದ ಸ್ಥಿತಿ ಹೀಗಾದರೆ, ದೇಶವನ್ನು ಆಳುತ್ತಿರುವ ಮೋದಿಯವರ ಮೂಗಿನ ಕೆಳಗೆ, 2014ರಿಂದ 2022ರವರೆಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ(ಎನ್‌ಸಿಆರ್‍‌ಬಿ) ವರದಿಯ ಪ್ರಕಾರ, 1,00,474 ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಅಂದರೆ, ದಿನಕ್ಕೆ 30 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಕಣ್ಣಿಗೆ ರಾಚುತ್ತಿದ್ದರೂ, ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ʼಮೋದಿಯವರ ಆಡಳಿತದಲ್ಲಿ ಒಂದೇ ಒಂದು ರೈತ ಆತ್ಮಹತ್ಯೆ ವರದಿಯಾಗಿಲ್ಲʼ ಎಂದು ಹೇಳುತ್ತಾರೆ. ಗೋದಿ ಬಿಸ್ಕೆಟ್ ತಿಂದು ತೇಲಾಡುತ್ತಿರುವ ಪತ್ರಕರ್ತರು, ಅನ್ನದಾತನ ಬಗ್ಗೆ ಬರೆಯುವುದುಂಟೆ?

ಕೈಗಾರಿಕಾ ಮತ್ತು ಸೇವಾ ವಲಯದಲ್ಲಿನ ಕ್ಷಿಪ್ರ ಬೆಳವಣಿಗೆಯಿಂದಾಗಿ 1990-91ರಲ್ಲಿ ಶೇ.35ರಷ್ಟಿದ್ದ ಭಾರತದ ಜಿಡಿಪಿಯಲ್ಲಿನ ಕೃಷಿ ಪಾಲು ಕಳೆದ 2022-23ರ ಹಣಕಾಸು ವರ್ಷದಲ್ಲಿ ಶೇ.15ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದರೂ, ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಪುಡಿಗಾಸಿನ ಪುರಾಣ ಹೇಳುತ್ತಾ ಕೂತಿದ್ದಾರೆ.

ರೈತನ ಕುರಿತು ಕೇಂದ್ರದ ಧೋರಣೆ ಇದಾದರೆ, ರಾಜ್ಯದಲ್ಲಿ ಗಂಭೀರ ಬರಗಾಲವಿದೆ. ಕುಡಿಯಲು ನೀರು, ಜಾನುವಾರುಗಳಿಗೆ ಮೇವು ಕೂಡ ಸಿಗದ ದುಃಸ್ಥಿತಿ ಎದುರಾಗಿದೆ. ಬ್ಯಾಂಕ್‌ ಗಳು ಸಾಲದ ನೋಟಿಸ್‌ ಹಿಡಿದು ರೈತನ ಮನೆ ಬಾಗಿಲು ಬಡಿಯುತ್ತಿವೆ. ಇಂತಹ ಸ್ಥಿತಿಯಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ರಾಜಕೀಯ ದ್ವೇಷಾಸೂಯೆಗಳಲ್ಲಿ ಮುಳುಗಿ, ದೋಷಾರೋಪಣೆಗಳಲ್ಲೇ ಕಾಲಹರಣ ಮಾಡುವುದು ಜವಾಬ್ದಾರಿಯುತ ಸರ್ಕಾರಗಳ ನಡೆಯಲ್ಲ; ಯಾವುದೇ ಕಾರಣಕ್ಕೂ ಕ್ಷಮಿಸುವಂಥದ್ದಲ್ಲ. ಕೇಂದ್ರದಿಂದ ಪರಿಹಾರ ಬರಲಿ, ಬರದಿರಲಿ ರೈತರನ್ನು ಆತ್ಮಹತ್ಯೆಯಿಂದ ಪಾರು ಮಾಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಲಿ.

ರೈತರಿಂದಲೇ ಅಧಿಕಾರಕ್ಕೆ ಏರಿದವರು, ಅಧಿಕಾರದ ಪಿತ್ಥ ನೆತ್ತಿಗೇರಿಸಿಕೊಂಡಿರಬಹುದು; ಆದರೆ ಅದನ್ನು ಇಳಿಸುವುದು ಹೇಗೆ ಎನ್ನುವುದು ರೈತರಿಗೆ ಗೊತ್ತಿದೆ. ಅದಕ್ಕೆ ಆಸ್ಪದ ಕೊಡದೆ, ಅವರೂ ಉಳಿದು, ರೈತರನ್ನೂ ಉಳಿಸುವ ಕೆಲಸವಾಗಲಿ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ

ಎಪಿಎಂಸಿ ಕಾಯ್ದೆ ಬಂದಾಕ್ಷಣ ರೈತರ ಬದುಕು ಬಂಗಾರವಾಗುತ್ತದೆ ಎಂದು ಭ್ರಮಿಸುವ ಅಗತ್ಯವಿಲ್ಲ....

ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?

ಸರ್ಕಾರದ ನೂರೆಂಟು ಹಳವಂಡಗಳನ್ನು, ಹಗರಣಗಳನ್ನು ಸದನದಲ್ಲಿ ಎದ್ದುನಿಂತು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು,...

ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು

ಮಾತು ತಪ್ಪಿದ ಮೋದಿಯವರ ವಿರುದ್ಧ ದೇಶದ ರೈತರು ಫೆ. 13ರಿಂದ ದೆಹಲಿ...