ನಿಮ್ಮ ಕೃಷಿ ಭೂಮಿಯಲ್ಲಿ ನೀವೇ ವ್ಯವಸಾಯ ಮಾಡಬೇಕು. ಬೇರೆಯವರು ಬಂದು ನಿಮ್ಮ ಭೂಮಿ ಕೇಳಿದರೆ ಮಾರಾಟ ಮಾಡಬಾರದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಗಿರಿಜನರಿಗೆ ಕಿವಿಮಾತು ಹೇಳಿದರು.
ಎಚ್ ಡಿ ಕೋಟೆ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಿ.ಪಿ ಕುಪ್ಪೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಹಕ್ಕುಪತ್ರ ವಿತರಿಸಿ ಮಾತನಾಡಿದರು.
“ಅರಣ್ಯ ಹಕ್ಕು ಕಾಯ್ದೆಯನ್ನು ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅರಣ್ಯದಲ್ಲಿ 70 ವರ್ಷಗಳಿಂದ ವಾಸಿಸುವ ಗಿರಿಜನರ ಹೆಸರಿಗೆ ಖಾತೆ ಮಾಡಿಕೊಡಲು ಜಾರಿಗೆ ತಂದರು. ಭೂ ಮಾಲೀಕರಾಗುವುದು ಒಂದು ಬಗೆಯ ಸಾಮಾಜಿಕ ಸಮಾನತೆಯ ಸಂಕೇತವಾಗಿದೆ. ನಿಮ್ಮ ಭೂಮಿಯಲ್ಲಿ ಅಗತ್ಯವಿರುವ ಆಹಾರ ಧಾನ್ಯಗಳನ್ನು ಬೆಳೆಯಬೇಕು. ಪೌಷ್ಠಿಕ ಆಹಾರ ಸೇವನೆ ಮಾಡುವ ಮೂಲಕ ನೀವು ಮತ್ತು ನಿಮ್ಮ ಮಕ್ಕಳು ಹೆಚ್ಚು ಆರೋಗ್ಯವಂತರಾಗಬೇಕು” ಎಂದು ಸಲಹೆ ನೀಡಿದರು.
“ಹಾಡಿಯಲ್ಲಿ ವಾಸಿಸುವ ಜನರು ಕಾಡಿನ ಮಕ್ಕಳಾಗಿದ್ದು, ಕಾಡನ್ನು ಸಂರಕ್ಷಿಸುವಲ್ಲಿ ನಿಮ್ಮ ಪಾತ್ರ ಹಿರಿದು. ಈ ಹಿನ್ನೆಲೆಯಲ್ಲಿ ನೀವು ಯಾವುದೇ ದುಶ್ಚಟಗಳಿಗೆ ಒಳಗಾಗಬಾರದು. ಇದರಿಂದ ಆರೋಗ್ಯ ಕೆಡುತ್ತದೆ. ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಅನೀಮಿಯ ಮುಕ್ತ ಮಾಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಇಲ್ಲಿನ ಎಲ್ಲ ಮಹಿಳೆಯರು ಪೌಷ್ಠಿಕಯುಕ್ತ ಆಹಾರ ಸೇವಿಸಬೇಕು” ಎಂದು ಹೇಳಿದರು.
“ಹಾಡಿಗಳ ಜನರ ಜೀವನ ಸುಧಾರಿಸಲು ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಸರ್ಕಾರದ ಯೋಜನೆಗಳು ಗಿರಿಜನರಿಗೆ ತಲುಪಿಸುವಲ್ಲಿ ಕ್ರಮವಹಿಸಲಾಗುವುದು. ಅನುವಂಶಿಕವಾಗಿ ಬರುವ ಖಾಯಿಲೆಗಳನ್ನು ತಡೆಗಟ್ಟಲು ಸಂಬಂಧಗಳಲ್ಲದೆ ಬೇರೆ ಕಡೆಗೆ ವಿವಾಹವಾಗುವುದನ್ನು ರೂಢಿಸಿಕೊಳ್ಳಿ” ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, “ಈ ಭಾಗದಲ್ಲಿ ಶೈಕ್ಷಣಿಕ ಸೌಲಭ್ಯ ಅಗತ್ಯವಿದೆ. ಒಂದರಿಂದ ಪಿಯುಸಿವರಗೆ ತರಗತಿಗಳನ್ನು ತೆರೆದು ಇಲ್ಲಿನ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ನೆರವು ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನರಿಗೆ ದಿನನಿತ್ಯ ಕೆಲಸ ನೀಡಬೇಕು. ಸಣ್ಣ ಕೈಗಾರಿಕೆಯನ್ನು ಆರಂಭಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿ ಆರ್ಥಿಕ ಸಬಲರನ್ನಾಗಿಸಲು ಸರ್ಕಾರ ಗಮನಹರಿಸಬೇಕು” ಎಂದು ಹೇಳಿದರು.
ಇದಕ್ಕೂ ಮುನ್ನ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ತಾಲೂಕಿನ ಭೋಗಾಪುರ, ಹುಲ್ಮೆಟ್ಲು, ಗುಂಡ್ರೆ, ಮಚ್ಚೂರು ಗ್ರಾಮದಲ್ಲಿನ ಬುಡಕಟ್ಟು ಸಮುದಾಯದ 249 ಕುಟುಂಬಳಿಗೆ 2006ರ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕುಪತ್ರಗಳನ್ನು ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯಿತ್ರಿ, ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್, ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಪಂಚಾಯತ್ ಇಒ ಧರಣೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಬಹುತೇಕರು ಇದ್ದರು.