ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಗ್ಗಿಲ್ಲದೇ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಈ ನಡುವೆ ಸಿಸಿಬಿ ಪೊಲೀಸರು ರೌಡಿಶೀಟರ್ ಮತ್ತು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಅಮಾಯಕರಿಗೆ ಹೆದರಿಸಿ, ಬೆದರಿಸಿ ನಿವೇಶನ ಕಬಳಿಸುವುದು, ಮೀಟರ್ ಬಡ್ಡಿ ದಂಧೆ ನಡೆಸುವುದು ಸೇರಿದಂತೆ ಹಲವಾರು ಆರೋಪಗಳು ಅನ್ನಪೂರ್ಣೇಶ್ವರಿ ನಗರ ರೌಡಿಶೀಟರ್ ಬೋರ್ ವೆಲ್ ಅನಿಲ್ ಮೇಲೆ ಕೇಳಿಬಂದಿದ್ದವು. ಈ ಹಿನ್ನೆಲೆ, ಅನಿಲ್ ಮನೆ ಮೇಲೆ ಸಿಸಿಬಿ ತಂಡ ದಾಳಿ ನಡೆಸಿದೆ. ಅಲ್ಲದೇ, ದಾಳಿ ವೇಳೆ, ಅನಿಲ್ ಮನೆಯಲ್ಲಿ ತಕರಾರು ಆಸ್ತಿಪತ್ರ, ಹಲವು ಚೆಕ್ಗಳು ಪತ್ತೆಯಾಗಿವೆ. ಸದ್ಯ ಸಿಸಿಬಿ ಪೊಲೀಸರು ಅನಿಲ್ ಮನೆಯಲ್ಲಿ ಸಿಕ್ಕಿರುವ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಸಣ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ: ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ
ಜತೆಗೆ, ಯಶವಂತಪುರ ರೌಡಿಶೀಟರ್ ಗಿರೀಶ್ ಅಲಿಯಾಸ್ ರಾಬರಿ ಗಿರಿ, ವಿವೇಕನಗರ ರೌಡಿಶೀಟರ್ಗಳಾದ ನಾರಾಯಣ, ಹೇಮಂತ್, ರಾಮು, ಸೋಲದೇವನಹಳ್ಳಿ ರೌಡಿಶೀಟರ್ ತಿಮ್ಮ ಸೇರಿ ಅನೇಕರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಿನದ ಲೆಕ್ಕದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಕೃಷ್ಣೇಗೌಡ ಕಚೇರಿ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಗ್ರಿಮೆಂಟ್ ಪೇಪರ್ ಮತ್ತು ಚೆಕ್ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.