ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ದೃಷ್ಟಿ ವೀಕಲಚೇತನರ ಅನುಕೂಲಕ್ಕಾಗಿ ಮುಂಬರುವ ನಿಲ್ದಾಣದ ಹೆಸರನ್ನು ಘೋಷಣೆ ಮಾಡುವ ಆಡಿಯೊ ವ್ಯವಸ್ಥೆಯನ್ನು ಏಪ್ರಿಲ್ 15ರ ವೇಳೆಗೆ ಅಳವಡಿಕೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಬಿಎಂಟಿಸಿಯ ಶೇ.58 ರಷ್ಟು ಬಸ್‌ಗಳಲ್ಲಿ ಆಡಿಯೊ ಘೋಷಣೆಯ ವ್ಯವಸ್ಥೆ ಮಾಡಲಾಗಿದೆ. ಆದರೆ, 2,562 ಬಸ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ ಎಂದು ಹೇಳಿದೆ.
ಬಸ್‌ಗಳಲ್ಲಿ ಆಡಿಯೊ ಅನೌನ್ಸ್‌ಮೆಂಟ್ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡುವಂತೆ ವಕೀಲ ಎನ್. ಶ್ರೇಯಸ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಕೀಲ ಎನ್ ಶ್ರೇಯಸ್ ಅವರು ದೃಷ್ಟಿ ದೋಷವುಳ್ಳವರು. ಮುಖ್ಯವಾಗಿ ದೃಷ್ಟಿ ಸಮಸ್ಯೆ ಇರುವವರಿಗೆ ಅನುಕೂಲವಾಗಲು ಅವರು ಇಳಿಯಬೇಕಿರುವ ಬಸ್ ನಿಲ್ದಾಣಗಳು ಮತ್ತು ಗಮ್ಯಸ್ಥಾನಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ಬಸ್‌ಗಳಲ್ಲಿ ಆಡಿಯೊ ಅನೌನ್ಸ್‌ಮೆಂಟ್ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡುವಂತೆ ಕೋರಿದ್ದರು.
ಈ ಹಿಂದೆ ಬಿಎಂಟಿಸಿಯ ಕೆಲವು ಬಸ್‌ಗಳಲ್ಲಿ ಆಡಿಯೊ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಅದನ್ನು ಈಗ ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಶ್ರೇಯಸ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆಕೆಆರ್‌ಟಿಸಿ | ಪ್ರೀಮಿಯಂ ರಹಿತ ₹1.20 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿ
“ಮುಂಬರುವ ನಿಲ್ದಾಣಗಳ ಬಗ್ಗೆ ಜನರಿಗೆ ತಿಳಿಸಲು ಶೇಕಡಾ 58% ರಷ್ಟು ಬಸ್‌ಗಳಲ್ಲಿ ಆಡಿಯೊ ವ್ಯವಸ್ಥೆ ಅಳವಡಿಸಲಾಗಿದೆ. 2,562 ಬಸ್‌ಗಳಲ್ಲಿ ಅಳವಡಿಸಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ 1,141 ಬಸ್‌ಗಳಲ್ಲಿ ಆಡಿಯೊ ವ್ಯವಸ್ಥೆ ಕಲ್ಪಿಸಲಾಗುವುದು” ಎಂದು ಬಿಎಂಟಿಸಿ ಪರ ವಕೀಲರು ಹೇಳಿದ್ದಾರೆ.
2024ರ ಏಪ್ರಿಲ್ 15ರವರೆಗೆ ಬಿಎಂಟಿಸಿ ಬಸ್‌ಗಳಲ್ಲಿ ಆಡಿಯೊ ವ್ಯವಸ್ಥೆ ಅಳವಡಿಕೆ ಮಾಡಿ, ಏಪ್ರಿಲ್ 18ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಒಂದು ವೇಳೆ, ಅಳವಡಿಕೆ ಮಾಡದೇ ಇದ್ದಲ್ಲಿ ಯಾವುದೇ ಕ್ಷಮೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.