ಈ ವರ್ಷ ಬರಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಮೈಸೂರು ಜಿಲ್ಲೆಯಲ್ಲಿ 2023ರ ಏಪ್ರಿಲ್‌ನಿಂದ ಈವರೆಗೆ 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆಘಾತಕಾರಿ ಸಂಗತಿ ವರದಿಯಾಗಿದೆ. ಮೃತ ರೈತರಲ್ಲಿ 18 ಮಂದಿ ಹೆಚ್ಚಾಗಿ ವಾಣಿಜ್ಯ ಬೆಳೆ ತಂಬಾಕು ಬೆಳೆಯುವ ಪರಿಯಾಪಟ್ಟಣ ತಾಲೂಕಿನವರಾಗಿದ್ದಾರೆ.
ಈ 35 ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರಕ್ಕೆ 27 ಸಂತ್ರಸ್ತ ಕುಟುಂಬದ ಅರ್ಜಿಯನ್ನು ಸರ್ಕಾರ ಅನುಮೋದಿಸಿದೆ. ಐದು ಪ್ರಕರಣಗಳನ್ನು ತಿರಸ್ಕರಿಸಿದೆ. ಉಳಿದ ಮೂರು ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಸಹಾಯಕ ಆಯುಕ್ತರ ನೃತೃತ್ವದ ಸಮಿತಿಯ ಮುಂದೆ ದಾಖಲೆಗಳನ್ನು ಸಲ್ಲಿಸಬೇಕಿದೆ ಎಂದು ತಿಳಿದುಬಂದಿದೆ.
“ರೈತರು ಕೂಲಿ ಕಾರ್ಮಿಕರನ್ನು ಸಂಪೂರ್ಣವಾಗಿ ಅವಲಂಬಿಸಿದ್ದರೆ, ಕೃಷಿಯಲ್ಲಿ ಲಾಭ ದೊರೆಯುವುದಿಲ್ಲ. ರೈತರು ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಇಲಾಖೆಯ ಸಲಹೆಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ. ರೈತರು ಬ್ಯಾಂಕ್‌ಗಳಲ್ಲಿ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಹೇಳಿರುವುದಾಗಿ ಟಿಎನ್‌ಐಇ ವರದಿ ಮಾಡಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯು ಬರಕ್ಕೆ ತುತ್ತಾಗಿತ್ತು. ಆದರೂ, ಅಕ್ಟೋಬರ್‌ನಲ್ಲಿ ಉತ್ತಮ ಮಳೆಯಾಗಿದ್ದು, ಹಿಂಗಾರಿನಲ್ಲಿ ದ್ವಿದಳ ಧಾನ್ಯಗಳು ಮತ್ತು ಮೆಕ್ಕೆಜೋಳವನ್ನು ಶೇ.103 ರಷ್ಟು ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.