ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲಾಗಿದೆ. ಬೇಸಿಗೆಯಲ್ಲಿ ಯಾವುದೇ ಬೆಳೆಗೆ ನೀರು ಹರಿಸಬಾರದೆಂದು ತೀರ್ಮಾನ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಕೆಆರ್‌ಎಸ್‌ನಲ್ಲಿ ಸದ್ಯಕ್ಕೆ 16 ಟಿಎಂಸಿ ನೀರಿದೆ. ಆ ಪೈಕಿ, 20% ನೀರು (2-3 ಟಿಎಂಸಿ) ನೀರು ಬೇಸಿಗೆಯ ಬಿಸಿಲಿಗೆ ಆವಿಯಾಗುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.
“ಉಳಿಯುವ 13 ಟಿಎಂಸಿ ನೀರನ್ನು ಬೇಸಿಗೆಯಲ್ಲಿ ಕುಡಿಯುವ ಉದ್ದೇಶಕ್ಕೆ ಬಳಸಬೇಕಾಗಿದೆ. ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು ತಿಂಗಳಿಗೆ 2.1 ಟಿಎಂಸಿ ಬೇಕಾಗುತ್ತದೆ. ಹೀಗಾಗಿ, ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲು ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ಇದೇ ನೀರನ್ನು ಜೂನ್‌ವರೆಗೂ ಕುಡಿಯುವ ಉದ್ದೇಶಕ್ಕೆ ಬಳಸಬೇಕಿದೆ. ಒಂದು ವೇಳೆ, ಮುಂದಿನ ದಿನಗಳಲ್ಲಿಯೂ ಮಳೆಯಾಗದಿದ್ದರೆ, ಕುಡಿಯುವ ನೀರಿಗೂ ಕೊರತೆ ಉಂಟಾಗಬಹುದು” ಎಂದು ಅವರು ಹೇಳಿದ್ದಾರೆ.