ಮನೆಯ ಮುಂದೆ ಗಾಡಿ ನಿಲ್ಲಿಸಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಅಪ್ಪ-ಮಗ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಬೆಂಗಳೂರಿನ ಆರ್ ಆರ್ ನಗರದ ಜವರೇಗೌಡ ನಗರದಲ್ಲಿ ಡಿ.20ರಂದು ನಡೆದಿದೆ. ಮೋಹನ್ ಗೌಡ ಹಾಗೂ ಆತನ ಮಗ ತೇಜಸ್ ಆರೋಪಿಗಳು. ಕೃಷ್ಣಪ್ಪ ಹಲ್ಲೆಗೊಳಗಾದ ವ್ಯಕ್ತಿ.
ಜವರೇಗೌಡ ನಗರದ 7 ನೇ ಕ್ರಾಸ್ನಲ್ಲಿ ಮೋಹನ್ ಗೌಡ ಮತ್ತು ಕೃಷ್ಣಪ್ಪ ಅವರಿಬ್ಬರ ಮನೆ ಅಕ್ಕ-ಪಕ್ಕದಲ್ಲಿ ಇದೆ. ಮನೆಯ ಮುಂದೆ ಗಾಡಿ ನಿಲ್ಲಿಸುವ ವಿಚಾರಕ್ಕೆ ಕೃಷ್ಣಪ್ಪ ಮತ್ತು ಮೋಹನ್ ಗೌಡ ಮಧ್ಯೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಡಿ.20ರಂದು ಕೃಷ್ಣಪ್ಪ ತನ್ನ ಟಾಟಾ ಏಸ್ ಗಾಡಿಯನ್ನು ಮೋಹನ್ ಗೌಡ ಅವರ ಮನೆ ಮುಂದೆ ನಿಲ್ಲಿಸಿದ್ದರು.
ಈ ವೇಳೆ ಮೋಹನ್ ಗೌಡ ಅವರ ಮನೆಯ ಸೀಟ್ಗೆ ಗಾಡಿ ತಾಗಿದೆ. ಇದಕ್ಕೆ ಕೋಪಗೊಂಡು ಜಗಳ ಆರಂಭಿಸಿದ ಪಕ್ಕದ ಮನೆಯ ಮೋಹನ್ ಗೌಡ ಹಾಗೂ ಆತನ ಮಗ ತೇಜಸ್ ಗೌಡ ಕೃಷ್ಣಪ್ಪ ಅವರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 10 ಸರ್ಕಾರಿ ಆಸ್ಪತ್ರೆಗಳ ಮೇಲೆ ಲೋಕಾಯುಕ್ತ ದಾಳಿ
ಒಂಟಿ ಮಹಿಳೆಯ ಮನೆಗೆ ನುಗ್ಗಿ ದರೋಡೆ
ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ.
ರಾಜಸ್ಥಾನದ ಮಾಣಿಕ್ ರಾಮ್ ಅವರ ಮನೆಯಲ್ಲಿ ದರೋಡೆ ನಡೆದಿದ್ದು, ಇವರು ಜ್ಯುವೆಲ್ಲರಿ ಶಾಪ್ ಇಟ್ಟುಕೊಂಡಿದ್ದರು.
ಮಾಣಿಕ್ ರಾಮ್ ಜ್ಯುವೆಲ್ಲರಿ ಶಾಪ ಇಟ್ಟಿರುವ ಬಗ್ಗೆ ತಿಳಿದಿದ್ದ ನಾಲ್ವರು ಅಪಾರ ಪ್ರಮಾಣದ ಹಣ, ಬಂಗಾರ, ಬೆಳ್ಳಿ ಸಿಗುತ್ತದೆ ಎಂದು ರಾಮ್ ಮನೆಗೆ ದರೋಡೆ ಮಾಡಲು ಮಧ್ಯಾಹ್ನವೇ ನುಗ್ಗಿದ್ದರು.
ಮಾಣಿಕ್ ರಾಮ್ ಪತ್ನಿ ಮಧು ಮನೆಯಲ್ಲಿ ಒಬ್ಬರೇ ಇರುವುದನ್ನು ಕಂಡು ದರೋಡೆ ಮಾಡಲು ಮನೆ ಒಳಗೆ ನುಗ್ಗಿದ್ದ ನಾಲ್ವರು ಆರೋಪಿಗಳಿಗೆ ಸಿಕ್ಕಿದ್ದು ಕೇವಲ ₹5 ಸಾವಿರ. ಜ್ಯೂವೆಲ್ಲರಿ ಅಂಗಡಿಯ ಕೆಲಸದ ಹುಡುಗ ಮನೆಗೆ ಬರುತ್ತಿದ್ದಂತೆಯೇ ಆರೋಪಿಗಳು ಆತನನ್ನು ನೂಕಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.