- ರೌಡಿ ಶೀಟರ್ ಮೇಲೆ ನಾಲ್ಕೈದು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪರಾರಿ
- ಹತ್ಯೆಯಾದ ಕಾರ್ತಿಕ್ ಕೊಲೆ, ಅತ್ಯಾಚಾರ ಸೇರಿದಂತೆ 13 ಅಪರಾಧಗಳಲ್ಲಿ ಭಾಗಿ
ಬೆಂಗಳೂರಿನ ಹಲಸೂರು ಬಳಿಯ ಜೋಗುಪಾಳ್ಯದಲ್ಲಿ ಮಂಗಳವಾರ ರೌಡಿ ಶೀಟರ್‌ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಗುಪಾಳ್ಯ ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ 6.30ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ಕಾರ್ತಿಕ್ ಮೇಲೆ ನಾಲ್ಕೈದು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹತ್ಯೆಯಾಗುವ ವೇಳೆ, ಕಾರ್ತಿಕ್ ಒಂದು ಚಿಕ್ಕ ಓಣಿಗೆ ನುಗ್ಗಿ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದಾನೆ. ಅಲ್ಲಿ ದಾರಿಯಿಲ್ಲದ ಕಾರಣ ಮನೆಯೊಳಗೆ ಪ್ರವೇಶಿಸಲು ಮುಂದಾಗುತ್ತಾನೆ. ಆದರೆ, ಆ ಮನೆ ಬೀಗ ಹಾಕಿದ್ದು, ನಾಲ್ಕು ಜನರ ಗ್ಯಾಂಗ್‌ವೊಂದು ಅವನನ್ನು ಕೊಲೆ ಮಾಡಿ ಪರಾರಿಯಾಗಿದೆ.
“ಹತ್ಯೆಯಾದ ಕಾರ್ತಿಕ್ ಕೊಲೆ, ಅತ್ಯಾಚಾರ, ಕೊಲೆ ಯತ್ನ, ಕಳ್ಳತನ ಮತ್ತು ದರೋಡೆ ಸೇರಿದಂತೆ 13 ಅಪರಾಧಗಳಲ್ಲಿ ಭಾಗಿಯಾಗಿದ್ದನು. 2019ರಲ್ಲಿ ಗೂಂಡಾ ಕಾಯ್ದೆಯಡಿ ಈತನನ್ನು ಜೈಲಿಗೆ ಕಳುಹಿಸಲಾಗಿತ್ತು. ಬೆಂಗಳೂರಿನಿಂದ ಗಡಿಪಾರು ಕೂಡ ಮಾಡಲಾಗಿದ್ದು, ಸೋಮವಾರದಂದು ಪೊಲೀಸರು ಕಾರ್ತಿಕ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ನೋಟಿಸ್ ಕಳುಹಿಸಿದ್ದಾರೆ” ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಭೀಮಾಶಂಕರ್ ಎಸ್ ಗುಳೇದ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪತ್ನಿಗೆ ಐಎಎಸ್ ಅಧಿಕಾರಿಯಿಂದ ವರದಕ್ಷಿಣೆ ಕಿರುಕುಳ; ದೂರು ದಾಖಲು
ಹಂತಕರ ಸುಳಿವಿಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಈ ಕೃತ್ಯವನ್ನು ಕಾರ್ತಿಕ್ ಎದುರಾಳಿಗಳು ಮಾಡಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.