ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯ ಹಿನ್ನೆಲೆಯಲ್ಲಿ ಸದ್ಯ ಬಿಜೆಪಿ ಹಾಗೂ ಸಂಘಪರಿವಾರದವರು ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದಾರೆ. ‘ಮತ ಗಳಿಸಲು ಮುಸ್ಲಿಮರ ಓಲೈಕೆ ಮಾಡುವ ಮೂಲಕ ತುಷ್ಟೀಕರಣ ಮಾಡುತ್ತಿದೆ’ ಎಂದು ಕಿಡಿಕಾರುತ್ತಿದ್ದಾರೆ.
ಈಗ ಇದೇ ವಿಚಾರವಾಗಿ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿರುವ ಉಡುಪಿಯ ಪೇಜಾವರ ಮಠದ ಪೇಜಾವರ ಸ್ವಾಮೀಜಿ, “ಸಿದ್ದರಾಮಯ್ಯ ಅವರು ಕರ್ನಾಟಕದ ಎಲ್ಲರ ಮುಖ್ಯಮಂತ್ರಿ ಅವರು ಆಗಿದ್ದಾರೆಯೇ ಹೊರತು ಯಾವುದೇ ಒಂದು ಪಂಗಡದ ಸಿಎಂ ಅಲ್ಲ” ಎಂದು ತಿಳಿಸಿದ್ದಾರೆ.
“ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದರಿಂದ ಸಮಾಜದಲ್ಲಿ ದೊಡ್ಡ ಕ್ಷೋಭೆ ಉಂಟು ಮಾಡಬಹುದು. ಕಾನೂನು ಮಾಡಲಿ. ಆದರೆ, ಅದು ಸಮಾಜದಲ್ಲಿ ಒಂದು ಪಂಗಡವನ್ನು ಮಾತ್ರ ಗುರಿಯಾಗಿರಿಸಿಕೊಂಡು ಮಾಡುವುದು ಸರಿಯಲ್ಲ” ಎಂದು ಹೇಳಿದರು.
“ಸಿದ್ದರಾಮಯ್ಯ ಅವರು ಕರ್ನಾಟಕದ ಎಲ್ಲರ ಮುಖ್ಯಮಂತ್ರಿ ಅವರು ಆಗಿದ್ದಾರೆಯೇ ಹೊರತು ಯಾವುದೇ ಒಂದು ಪಂಗಡದ ಸಿಎಂ ಅಲ್ಲ. ಇಂತಹ ನಡವಳಿಕೆ ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಮೊನ್ನೆ ಪರೀಕ್ಷೆ ಬರೆಯುವಾಗ ಹಿಂದೂಗಳಾದವರು ಕಾಲುಂಗರ, ತಾಳಿ ತೆಗೆಯಬೇಕು ಎಂಬ ಆದೇಶ ಬಂದಿತ್ತು. ಒಂದು ಕಡೆ ಹೀಗಾದರೆ, ಮತ್ತೊಂದು ಪಂಗಡದವರಿಗೆ ಮುಸುಕುಧಾರಿಗಳು ಆಗಿ ಹೋಗಬಹುದು ಎನ್ನುತ್ತಾರೆ. ಇದನ್ನು ಯಾರೂ ಮಾಡಬಾರದು. ಇವರಂತೂ ಖಂಡಿತವಾಗಿ ಮಾಡಬಾರದು” ಎಂದು ಹಿಜಾಬ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಪೇಜಾವರ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.