“ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಾನೂನು ಉಪಕರಣಗಳಿಗೆ ಅನುಗುಣವಾಗಿ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದೆ. ಅದರ ಅನುಷ್ಠಾನಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕೆ ರಾಜ್ಯವು ಬದ್ಧವಾಗಿರಬೇಕು. ಹಿಂದಿನ ಸರ್ಕಾರದ ಆದೇಶವೊಂದರ ಮೂಲಕ ಹಿಜಾಬ್ ನಿಷೇಧಿಸಿ ಉಂಟಾಗಿದ್ದ ಅಡೆತಡೆಗಳನ್ನು ನಿವಾರಿಸುವ ಕ್ರಮಕ್ಕೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆ ಸ್ವಾಗತಾರ್ಹ” ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ ಪಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಕರ್ನಾಟಕ ಶಿಕ್ಷಣ ಕಾಯಿದೆ 1983 ಮತ್ತು ಕಾಯಿದೆ ಅಡಿಯಲ್ಲಿ ರಚಿಸಲಾದ ನಿಯಮಗಳು (1995 ಮತ್ತು 1999 ನಿಯಮಗಳು) ಸಮವಸ್ತ್ರ ಗೊತ್ತುಪಡಿಸುವ ಅಧಿಕಾರವನ್ನು ಆಯಾ ಶಾಲೆಗಳು ಮತ್ತು ಶಾಲಾ ಅಭಿವೃದ್ಧಿ ಮಂಡಳಿಗಳಿಗೆ ಯೋಜಿಸಿವೆ” ಎಂದು ತಿಳಿಸಿದ್ದಾರೆ.
“ಹಾಗಾಗಿ, ಅಸ್ತಿತ್ವದಲ್ಲಿರುವ ಶಾಸನ ಮತ್ತು ಸಂಬಂಧಿಸಿದ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರುವುದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗುತ್ತದೆ. ಜತೆಗೆ, ಈ ಪ್ರಕರಣವು ಈಗ ಸರ್ವೋಚ್ಚ ನ್ಯಾಯಾಲಯದ ಉನ್ನತ ಪೀಠದ ಮುಂದೆ ಬಾಕಿ ಉಳಿದಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚನೆ: ರಾಕ್‌ಲೈನ್ ವೆಂಕಟೇಶ್ ಮಗನ ವಿಚಾರಣೆ
ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಇವೆಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ, ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಮುನ್ನ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಒತ್ತಾಯಿಸಿದೆ.