ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ

Date:

Advertisements
ಸರ್ವಾಧಿಕಾರವು ಸಾಂಸ್ಥೀಕರಣಗೊಳ್ಳುವುದು, ಶಾಸನಬದ್ಧಗೊಳ್ಳುವುದು ಅಪಾಯಕಾರಿ ವಿದ್ಯಮಾನ. ಭಾರತವು ಅಂತಹ ಸಾಂಸ್ಥೀಕೃತ ಸರ್ವಾಧಿಕಾರದತ್ತ ಸಾಗುತ್ತಿದ್ದು, ನ್ಯಾಯಾಲಯಗಳಲ್ಲಿ ಅದನ್ನು ಪ್ರಶ್ನಿಸುವುದು ಮತ್ತು ನಿಧಾನವಾಗಿ ಚುನಾವಣೆಗಳ ಮೂಲಕ ಬದಲಾವಣೆ ತರುವುದು ಅಸಾಧ್ಯವಾಗುವ ಘಟ್ಟದತ್ತ ಸಾಗುತ್ತಿದೆ. ಯಾವುದೇ ಆಧುನಿಕ ಸಮಾಜದ ಮಟ್ಟಿಗೆ ಅದು ಗುಲಾಮಗಿರಿಯಲ್ಲದೇ ಇನ್ನೇನೂ ಅಲ್ಲ.

 

ಭಾರತದ ಆಳುವ ಪಕ್ಷ ಅಥವಾ ನಾಯಕ/ಕಿ ಸರ್ವಾಧಿಕಾರದ ಧೋರಣೆಯನ್ನು ಪ್ರದರ್ಶಿಸಿರುವುದು ಹೊಸತೇನಲ್ಲ. ಇಂದಿರಾಗಾಂಧಿಯವರು 1975ರಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯೂ ಅಂತಹ ಒಂದು ಧೋರಣೆಯೇ ಆಗಿತ್ತು. ಆದರೆ, ಸರ್ವಾಧಿಕಾರವು ಸಾಂಸ್ಥೀಕರಣಗೊಳ್ಳುವುದು, ಶಾಸನಬದ್ಧಗೊಳ್ಳುವುದು ಅಪಾಯಕಾರಿ ವಿದ್ಯಮಾನ. ಭಾರತವು ಅಂತಹ ಸಾಂಸ್ಥೀಕೃತ ಸರ್ವಾಧಿಕಾರದತ್ತ ಸಾಗುತ್ತಿದ್ದು, ನ್ಯಾಯಾಲಯಗಳಲ್ಲಿ ಅದನ್ನು ಪ್ರಶ್ನಿಸುವುದು ಮತ್ತು ನಿಧಾನವಾಗಿ ಚುನಾವಣೆಗಳ ಮೂಲಕ ಬದಲಾವಣೆ ತರುವುದು ಅಸಾಧ್ಯವಾಗುವ ಘಟ್ಟದತ್ತ ಸಾಗುತ್ತಿದೆ. ಯಾವುದೇ ಆಧುನಿಕ ಸಮಾಜದ ಮಟ್ಟಿಗೆ ಅದು ಗುಲಾಮಗಿರಿಯಲ್ಲದೇ ಇನ್ನೇನೂ ಅಲ್ಲ.

ಬೇರೆ ಬೇರೆ ಸಿದ್ಧಾಂತಗಳುಳ್ಳ ಪಕ್ಷಗಳು ಅಧಿಕಾರಕ್ಕೆ ಬಂದರೂ, ಸಾಂವಿಧಾನಿಕ ಕಟ್ಟುಪಾಡು ಮತ್ತು ನೈತಿಕತೆಗಳ ವಿಶಾಲ ಚೌಕಟ್ಟಿನಲ್ಲೇ ಅವರು ಆಡಳಿತ ನಡೆಸಬೇಕಾಗುತ್ತದೆ. ಅವರವರ ಸಿದ್ಧಾಂತವನ್ನು ಈ ವಿಶಾಲ ಚೌಕಟ್ಟಿನಡಿ ಸಾಧ್ಯವಿರುವ ಕೆಲವು ನೀತಿಗಳಿಗಷ್ಟೇ ಸೀಮಿತಗೊಳಿಸಬೇಕಾಗುತ್ತದೆ. ಆದರೆ, ಇಂದು ಆಗುತ್ತಿರುವುದು ಅದಲ್ಲ. ಸರ್ವಾಧಿಕಾರವನ್ನು ಸಂವಿಧಾನದ ಒಳಗೂ, ಶಾಸನಗಳ ಒಳಗೂ, ಸಾಂವಿಧಾನಿಕ ಸಂಸ್ಥೆಗಳ ಒಳಗೂ ಶಾಸನಬದ್ಧವಾಗಿ ಸ್ಥಿರೀಕರಿಸಿಬಿಟ್ಟರೆ ಅದರ ಕತೆ ಮುಗಿದಂತೆಯೇ.

ಉದಾಹರಣೆಗೆ ದೇಶದಲ್ಲಿ ದೇಶದ ಪೌರತ್ವವನ್ನೇ ಎರಡು ಸ್ತರದಲ್ಲಿ ವಿಂಗಡಿಸುವ ಎನ್‌ಆರ್‍‌ಸಿ, ಸಿಎಎಗಳು. ಮೇಲ್ನೋಟಕ್ಕೆ ʼದೇಶದ ಅಸಲೀ ಪ್ರಜೆಗಳಲ್ಲದ, ಅಕ್ರಮ ವಲಸಿಗರನ್ನು ಹೊರಹಾಕುವʼ ಕಾಯ್ದೆಗಳಂತೆ ಅವು ಕಾಣುತ್ತವೆ. ಆದರೆ, ಆ ರೀತಿಯ ʼಅಕ್ರಮತನʼವನ್ನು ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ನಿಗದಿಪಡಿಸಿರುವುದೇ ಅದರ ಅಸಲಿ ಹುನ್ನಾರವನ್ನು ಬಿಚ್ಚಿಟ್ಟಿತು. ಅದಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ್ದು, ಒಂದು ವೇಳೆ ಅಸಲಿ ಪೌರರೆಂದು ಈಗ ತೀರ್ಮಾನವಾದರೂ, ಮುಂದೊಂದು ದಿನ ಇನ್ಯಾರೋ ಇವರ ಪೌರತ್ವವನ್ನು ಸಂಶಯಿಸಿ ದೂರುಕೊಟ್ಟರೆ ಅವರ ಕಡತ ಮತ್ತೆ ತೆರೆಯಲ್ಪಡುತ್ತದೆ. ಇದು ಸದಾಕಾಲ ಪೌರತ್ವದ ತೂಗುಗತ್ತಿಯನ್ನು ತೂಗಲಾಗುತ್ತಿರುತ್ತದೆ ಎಂಬುದಕ್ಕೆ ಸಾಕ್ಷಿ. ಎಲ್ಲವೂ ಕಾನೂನುಬದ್ಧವಾಗಿ. ಇನ್ನೂ ಜನಗಣತಿಯ ಭಾಗವಾಗಿ ಎನ್‌ಪಿಆರ್‌ ಮತ್ತು ನಂತರ ಎನ್‌ಆರ್‍‌ಸಿ ನಡೆದಿರದೇ ಇರುವುದರಿಂದ ಇದು ಜಾರಿಯಾಗಿಲ್ಲ.

Advertisements

ಹಾಗೆ ನೋಡಿದರೆ ಮೇಲ್ಜಾತಿ ಬಡವರಿಗೆ ಮೀಸಲಾತಿ ತರುವ ನೆಪದಲ್ಲಿ ತರಲಾದ EWS ಮೀಸಲಾತಿಯೇ ಶಾಸನಬದ್ಧ ಅನ್ಯಾಯ. ಇದನ್ನು ಈಗಾಗಲೇ ಎಷ್ಟೋ ಜನರು ಸಾಬೀತು ಮಾಡಿ ತೋರಿಸಿದ್ದಾರೆ. ಇನ್ನು ಮತಾಂತರ ನಿಷೇಧ ಕಾಯ್ದೆ. ಮೇಲ್ನೋಟಕ್ಕೆ ʼಆಮಿಷ, ಒತ್ತಡಕ್ಕೆ ಗುರಿ ಮಾಡಿ ಯಾರನ್ನೂ ಮತಾಂತರ ಮಾಡಬಾರದುʼ ಎಂಬುದು ಸರಿಯೆಂಬಂತೆಯೇ ಕಾಣಬಹುದು. ಆದರೆ, ಯಾರ ಮೇಲೆ ಆರೋಪ ಹೊರಿಸಲಾಗಿರುತ್ತದೋ ಅವರೇ ತಾವು ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು ಎಂಬ ನಿಯಮವು ನಿಜವನ್ನು ಹೊರಗೆಡಹುತ್ತದೆ. ಅಂದರೆ ಕ್ರಿಶ್ಚಿಯನ್ನರನ್ನು ಬಲಿಪೀಠಕ್ಕೆ ತರಲು ನೇತಾಡುತ್ತಿರುವ ತೂಗುಗತ್ತಿಯದು ಮತ್ತು ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವ ಒಂದು ಸಮುದಾಯವನ್ನು ನಿರಂತರ ಮತಾಂತರದ ಮೂಲಕ ವಿಪರೀತ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬ ಸುಳ್ಳು ನೆರೇಟಿವ್‌ ಮೂಲಕ ದಾಳಿಗೊಳಪಡಿಸಲು ಇದನ್ನು ಜಾರಿಗೆ ತರಲಾಗಿದೆ; ಕಾನೂನುಬದ್ಧವಾಗಿ.

ಇಂತಹ ಕಾನೂನುಗಳು ಬಂದಿದ್ದರೆ ಅದನ್ನು ಕೋರ್ಟಿನಲ್ಲಿ, ಅದರಲ್ಲೂ ಸುಪ್ರೀಂಕೋರ್ಟಿನಲ್ಲಿ ಪ್ರಶ್ನೆ ಮಾಡಬಹುದಲ್ಲಾ– ನಮ್ಮ ಸಂವಿಧಾನವು ಅದಕ್ಕೆ ಅವಕಾಶ ಮಾಡಿಕೊಡುತ್ತದಲ್ಲಾ ಎಂಬ ಪ್ರಶ್ನೆ ಏಳುತ್ತದೆ. ಸುಪ್ರೀಂಕೋರ್ಟನ್ನು ಯಾವುದೇ ಹಲ್ಲಿಲ್ಲದ ಹಾವಾಗಿ, ಒಕ್ಕೂಟ ಸರ್ಕಾರದ ಬಾಲಬಡುಕನಾಗಿ ಪರಿವರ್ತಿಸಲಾಗಿದೆ ಎಂಬುದಕ್ಕೆ ಈಗ ಒಂದೆರಡು ಸಾಕ್ಷಿಗಳು ಮಾತ್ರವೇ ಇಲ್ಲ. ಹತ್ತಾರು ಸರಣಿ ತೀರ್ಪುಗಳು ಅದನ್ನು ಖಾತರಿಪಡಿಸುತ್ತವೆ. ಆಗಿದ್ದು ತಪ್ಪೇ, ತಪ್ಪು ಮಾಡಿದವರಿಗೆ ಯಾವ ಶಿಕ್ಷೆಯೂ ಇಲ್ಲ; ಬದಲಿಗೆ ದಾಳಿ ಮಾಡಿದವರಿಗೇ ಬಹುಮಾನ ನೀಡಲಾದ ಬಾಬ್ರಿ ಮಸೀದಿ ಪ್ರಕರಣವೊಂದೇ ಅದಕ್ಕೆ ನಿದರ್ಶನವಲ್ಲ. ಕಾಶ್ಮೀರದ 370ನೇ ವಿಧಿ, EWS ಸೇರಿದಂತೆ ಬೇಕಾದಷ್ಟು ಉದಾಹರಣೆಗಳಿವೆ. ದೇಶದ ಸಂಸತ್ತು ಅಂಗೀಕರಿಸಿದ್ದ 1991ರ ಪೂಜಾಸ್ಥಳಗಳ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಸ್ಥಳೀಯ ನ್ಯಾಯಾಲಯಗಳು ದೇಶದೆಲ್ಲೆಡೆ ಪೂಜಾಸ್ಥಳಗಳನ್ನು ಅಗೆಯಲು ತೀರ್ಪು ನೀಡುತ್ತಿವೆ.

ಸಂಸತ್ತಿನಲ್ಲೂ ಇದರ ಪುನರಾವರ್ತನೆಯಾಗುತ್ತಿದೆ. ಸ್ಪೀಕರ್‌ ಸ್ಥಾನವು ಅನ್ಯಾಯವನ್ನು ಶಾಸನಬದ್ಧಗೊಳಿಸಲೆಂದೇ ಇರುವ ಹುದ್ದೆಯಾಗಿದೆ. ಸ್ಪೀಕರ್‌ ಸ್ಥಾನದಲ್ಲಿರುವವರು ಯಾರನ್ನು ಬೇಕಾದರೂ ಹೀಗಳೆಯಬಹುದು; ಅಮಾನವೀಯ ಜೋಕುಗಳಿಗೆ ನಗಬಹುದು; ಸ್ವತಃ ತಾವೇ ಅಮಾನವೀಯವಾಗಿ ವರ್ತಿಸಬಹುದು ಎಂಬಂತಾಗಿದೆ. ನೂರಾರು ಜನ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಿರುವ ರೀತಿ ಅದಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಿದೆ. ಕೆಲವು ನೇಮಕಾತಿಗಳನ್ನು ಮಾಡಲು ಸಂಸತ್ತಿಗೆ (ಅಂದರೆ ವಿರೋಧ ಪಕ್ಷದ ನಾಯಕರೂ ಸೇರಿ) ಮತ್ತು ಸುಪ್ರೀಂಕೋರ್ಟಿಗೆ (ಅಂದರೆ ಅದರ ಮುಖ್ಯ ನ್ಯಾಯಮೂರ್ತಿಗಳಿಗೆ) ಸರ್ಕಾರದ ಜೊತೆ ಪಾಲಿರುತ್ತಿತ್ತು. ಇದೀಗ ಜಾರಿಗೆ ಬರುತ್ತಿರುವ ಹೊಸ ಕಾನೂನಿನನ್ವಯ ಎಲ್ಲವನ್ನೂ ಪ್ರಧಾನಿಯೊಬ್ಬರೇ ಮಾಡಿ ಮುಗಿಸಬಹುದು. ಚುನಾವಣಾ ಆಯುಕ್ತರು ಈ ರೀತಿ ನಡೆದುಕೊಂಡರೆ ಅಲ್ಲಿಗೆ ಪ್ರಜಾತಂತ್ರದ ಐದು ವರ್ಷಗಳಿಗೊಮ್ಮೆ ನಡೆಯುವ ಆಯ್ಕೆಯ ಕುರಿತು ಭರವಸೆ ಎಲ್ಲಿ ಉಳಿದೀತು?

ಇಂದು ಇವೆಲ್ಲವೂ ಚರ್ಚೆಗೆ ಬರುತ್ತಿರುವುದು ಕ್ರಿಮಿನಲ್‌ ಕಾಯ್ದೆಗಳನ್ನು ಬದಲಿಸಿರುವ ರೀತಿಯಿಂದ. ಸಂಸತ್ತಿನಲ್ಲಿ ನೂರಾರು ಜನ ಸಂಸತ್‌ ಸದಸ್ಯರನ್ನು ಹೊರಹಾಕಿದ್ದ ಹೊತ್ತಿನಲ್ಲಿ ಅಪ್ರಜಾತಾಂತ್ರಿಕವಾಗಿ ಅನುಮೋದನೆ ಪಡೆದುಕೊಂಡ ಈ ಕಾಯ್ದೆ ತಿದ್ದುಪಡಿಗಳು ಇನ್ನು ಮುಂದೆ ದೇಶದಲ್ಲಿ ಕ್ರಿಮಿನಲ್‌ ಆಡಳಿತವನ್ನೇ ಕಾನೂನುಬದ್ಧಗೊಳಿಸಲಿದೆ.

ನಿಸ್ಸಂದೇಹವಾಗಿ ಇವೆಲ್ಲವೂ ದೇಶವನ್ನು ಗುಲಾಮಗಿರಿಗೆ ತಳ್ಳುತ್ತಿರುವುದಕ್ಕೆ ದ್ಯೋತಕವಾಗಿದೆ. ದೇಶದ ಜನರು ಗುಲಾಮರಾಗಲೇ ಬಯಸುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X