ಮಹಿಳೆಗೆ ಬೆಂಕಿ ಹಚ್ಚಿದ ನಂತರ ಆಕೆಯ ತವರು ಮನೆಗೆ ಕರೆ ಮಾಡಿದ ಗಂಡನ ಮನೆಯವರು ನಿಮ್ಮ ಸಹೋದರಿಗೆ ಬೆಂಕಿ ಹಚ್ಚಿದ್ದೇವೆ ಎಂದು ತಿಳಿಸಿದ್ದಾರೆ. ಘಟನೆಯು ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಧೋಧರ್ ಗ್ರಾಮದಲ್ಲಿ ನಡೆದಿದೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಂತರ ನಿರ್ಮಲಾ ಎಂಬ ಮಹಿಳೆ ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾಳೆ. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯ ಪತಿಯ ಸಹೋದರ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ಪ್ರಕಾಶ್ ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಕಾಶ್ ಅವರ ಹಿರಿಯ ಸಹೋದರ ಸುರೇಶ್ ತನ್ನ ಅತ್ತಿಗೆ ನಿರ್ಮಲಾ ಅವರಿಂದಾಗಿಯೇ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸದಾ ಕೆಂಡಕಾರುತ್ತಿದ್ದ.
ಪತಿಯ ಮರಣದ ನಂತರ ನಿರ್ಮಲಾ ತನ್ನ ಇಬ್ಬರು ಮಕ್ಕಳೊಂದಿಗೆ ಅತ್ತೆಯ ಮನೆಯಲ್ಲಿ ವಾಸವಾಗಿದ್ದರು. ಆದಾಗ್ಯೂ, ಆಕೆಯ ಭಾವ ತನ್ನ ಸಹೋದರನ ಸಾವಿಗೆ ಅವಳೇ ಕಾರಣ ಎಂದು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
ಶನಿವಾರ ಮಹಿಳೆ ಮೇಲೆ ಸುರೇಶ್ ಹಲ್ಲೆ ನಡೆಸಿ ಮನೆಯಿಂದ ಹೊರಗೆಳೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆಕೆಯ ಸಹೋದರನಿಗೆ ಕರೆ ಮಾಡಿ ನಿಮ್ಮ ತಂಗಿಗೆ ಬೆಂಕಿ ಹಚ್ಚಿದ್ದೇವೆ ಎಂದು ಸುರೇಶ್ ತಿಳಿಸಿದ್ದ. ‘ಆತನ ಸಹೋದರನ ಸಾವಿಗೆ ನನ್ನ ತಂಗಿಯೇ ಕಾರಣ ಎಂದು ಅವರು ಆರೋಪಿಸುತ್ತಿದ್ದರು. ಕೊಲೆ ಬೆದರಿಕೆ ಹಾಕುತ್ತಿದ್ದರು’ ಎಂದು ನಿರ್ಮಲಾ ಸಹೋದರ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಅವರು ನಮ್ಮ ತಂಗಿಯನ್ನು ಕೊಂದಿದ್ದಾರೆ ಎಂದು ನನಗೆ ಕರೆ ಮಾಡಿದ ದಿನವೇ ನಾನು ಆಕೆಯನ್ನು ಕರೆದುಕೊಂಡು ಬರಲು ಹೋಗಿದ್ದೆ” ಎಂದು ಸಹೋದರ ತಿಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.