- 3‘ಡಿ’ ತಂತ್ರಜ್ಞಾನದ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕೇವಲ 5 ಪುರುಷರು ಸಾಕು
- ಈ ಅಂಚೆ ಕಚೇರಿಗೆ ಅಂದಾಜು ₹23 ಲಕ್ಷ ವೆಚ್ಚವಾಗಲಿದೆ : ಎಲ್ ಅಂಡ್ ಟಿ ಕಂಪನಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೇಶದ ಮೊದಲ 3‘ಡಿ’ ಕಾಂಕ್ರೀಟ್ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿಕೊಂಡು ಅಂಚೆ ಕಚೇರಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.
ಎಲ್ ಅಂಡ್ ಟಿ ಕಂಪನಿ 3‘ಡಿ’ ಕಾಂಕ್ರೀಟ್ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿಕೊಂಡು ಈ ಕಟ್ಟಡ ನಿರ್ಮಾಣ ಮಾಡುವ ಜವಾಬ್ದಾರಿ ತೆಗೆದುಕೊಂಡಿದೆ. ಹಲಸೂರಿನ ಕೇಂಬ್ರಿಡ್ಜ್ ಲೇಔಟ್ನಲ್ಲಿ ಈ ಅಂಚೆ ಕಚೇರಿ ನಿರ್ಮಾಣವಾಗುತ್ತಿದೆ. ಅಂದಾಜು 1,000 ಚದರ ಅಡಿ ವಿಸ್ತೀರ್ಣದಲ್ಲಿ 3‘ಡಿ’ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತಿದೆ. ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ.
ಏನಿದು 3‘ಡಿ’ ವಿನ್ಯಾಸದ ಅಂಚೆ ಕಚೇರಿ ಕಟ್ಟಡ?
ಕಾಂಕ್ರೀಟ್ ಮಿಶ್ರಣವನ್ನು ಬಳಸಿಕೊಂಡು ಕಟ್ಟಡವನ್ನು ಮುದ್ರಿಸುವ 3ಡಿ ಪ್ರಿಂಟಿಂಗ್ ತಂತ್ರಜ್ಞಾನ. ಇಟ್ಟಿಗೆ, ಮರಳನ್ನು ಬಳಸುವ ಸಾಂಪ್ರದಾಯಿಕ ಶೈಲಿಗೆ ಭಿನ್ನವಾಗಿ ಕಟ್ಟಡ ನಿರ್ಮಿಸುವುದಾಗಿದೆ. ಈ ಮೂಲಕ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಬಹುದು ಎಂದು ಗುತ್ತಿಗೆ ಪಡೆದ ಕಂಪನಿ ಹೇಳಿದೆ.
“ಸಾಂಪ್ರದಾಯಿಕವಾಗಿ ಒಂದು ಅಂಚೆ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲು 6 ರಿಂದ 8 ತಿಂಗಳು ಬೇಕಾಗುತ್ತದೆ. ಕೆಲಸಕ್ಕೆ 30 ರಿಂದ 40 ಪುರುಷರು ಬೇಕಾಗುತ್ತಾರೆ. ಆದರೆ, 3ಡಿ ಮುದ್ರಣ ತಂತ್ರಜ್ಞಾನಕ್ಕೆ ಕೇವಲ 5 ಪುರುಷರು ಮತ್ತು ಒಟ್ಟು 45 ದಿನಗಳು ಬೇಕಾಗುತ್ತವೆ. ಜತೆಗೆ ಮಾಲಿನ್ಯದ ಮಟ್ಟವು 50% ರಷ್ಟು ಕಡಿಮೆಯಾಗುತ್ತದೆ. ಕಾಂಕ್ರೀಟ್ ಮಿಶ್ರಣ – M30 – ಆರು ಪಟ್ಟು ಹೆಚ್ಚು ಶಕ್ತಿಯನ್ನು ನೀಡುತ್ತದೆ. ನಿರ್ಮಾಣದ ಕಾಮಗಾರಿ ಸಂದರ್ಭದಲ್ಲಿ ಶಬ್ದವೂ ಕಡಿಮೆಯಿದೆ. ವಿದ್ಯುತ್ ಶಕ್ತಿ ಬಳಕೆಯೂ ಕಡಿಮೆ ಇರಲಿದೆ” ಎಂದು ಎಲ್ ಅಂಡ್ ಟಿ ಕಂಪನಿಯ ಅಧಿಕಾರಿಗಳು ಹೇಳಿದರು.
“ಸಾಮಾನ್ಯವಾಗಿ ಅಂಚೆ ಕಚೇರಿಯ ಕಟ್ಟಡವೊಂದಕ್ಕೆ ನಿರ್ಮಾಣವಾಗುತ್ತಿದ್ದ ವೆಚ್ಚಕ್ಕಿಂತ ಕಡಿಮೆಯಾಗಲಿದ್ದು, ಶೇ 30 ರಿಂದ 40ರಷ್ಟು ವೆಚ್ಚ ಉಳಿತಾಯವಾಗಲಿದೆ. ಈ ತಂತ್ರಜ್ಞಾನದ ಮೂಲಕ ಯಾವುದೇ ಶೈಲಿಯಲ್ಲೂ ಕಟ್ಟಡ ನಿರ್ಮಿಸಬಹುದು. ಈ ಅಂಚೆ ಕಚೇರಿಗೆ ಅಂದಾಜು ₹23 ಲಕ್ಷ ವೆಚ್ಚವಾಗಲಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಅಂಚೆ ಕಚೇರಿ ಕಟ್ಟಡವು 3ಡಿ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾಗುತ್ತಿರುವ ಕರ್ನಾಟಕದ ಮೊದಲ ಸರ್ಕಾರಿ ಕಟ್ಟಡವಾಗಿದೆ’’ ಎಂದು ಎಲ್ ಅಂಡ್ ಟಿ ಕನ್ಸ್ಟ್ರಕ್ಷನ್ನ ನಿರ್ದೇಶಕ ಎಂ.ವಿ.ಸತೀಶ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೂಳು ತೆಗೆದು ರಸ್ತೆಗೆ ಸುರಿದ ಬಿಬಿಎಂಪಿ; ವಾಹನ ಸವಾರರು ಹೈರಾಣು
ಈ ಹೊಸ ತಂತ್ರಜ್ಞಾನವನ್ನು ಕಟ್ಟಡ ನಿರ್ಮಾಣ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಉತ್ತೇಜನಾ ಮಂಡಳಿ (ಬಿಎಂಟಿಪಿಸಿ) ಅನುಮೋದಿಸಿದೆ. ಅಂಚೆ ಕಚೇರಿ ಕಟ್ಟಡ ಸ್ವರೂಪದ ವಿನ್ಯಾಸವನ್ನು ಐಐಟಿ ಮದ್ರಾಸ್ ಮಾನ್ಯ ಮಾಡಿದೆ. ಈ ಯೋಜನೆಯನ್ನು ಆಗಸ್ಟ್ 2022ರಲ್ಲಿ ತರಲಾಗಿತ್ತು. ಆದರೆ, ಕಾರ್ಯಗತಗೊಳಿಸಲು ಮತ್ತು ಚಾಲನೆ ಮಾಡಲು ಏಳು ತಿಂಗಳು ತೆಗೆದುಕೊಂಡಿದೆ. ಮಾರ್ಚ್ 20ರಂದು ಕಾಮಗಾರಿಗೆ ಚಾಲನೆ ದೊರೆತಿದೆ.
ಈ ಪ್ರಾಯೋಗಿಕ ಕಟ್ಟಡದ ಯಶಸ್ಸು ಆಧರಿಸಿ ಅಂಚೆ ಇಲಾಖೆಯು ಮತ್ತಷ್ಟು ಕಟ್ಟಡಗಳನ್ನು ಇದೇ ಮಾದರಿಯಲ್ಲಿ ನಿರ್ಮಿಸಲು ಆಲೋಚಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಜನ ಟ್ವೀಟ್ ಮಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.