ಹಣ ನೀಡದಿದ್ದರೆ ಮನೆಯಲ್ಲಿ ಗಾಂಜಾ ಇಡುತ್ತೇನೆ ಎಂದು ಹೆದರಿಸಿ ನಕಲಿ ಪೊಲೀಸ್ ವೇಷಧಾರಿವೊಬ್ಬ ದಂಪತಿಯಿಂದ ಬರೋಬ್ಬರಿ ಒಂದೂವರೆ ಕೋಟಿ ಹಣ ವಸೂಲಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ 3ನೇ ಸೆಕ್ಷನ್ ಫ್ಲಾಟ್ ನಲ್ಲಿ ಉತ್ತರ ಭಾರತ ಮೂಲದ ದಂಪತಿ ವಾಸ ಮಾಡುತ್ತಿದ್ದರು. ಡಿಸೆಂಬರ್ 17ರಂದು ರಾತ್ರಿ 9:30ರ ಸುಮಾರಿಗೆ ಪೊಲೀಸ್ ವೇಷದಲ್ಲಿ ಬಂದ ಆರೋಪಿ ಹಣ ನೀಡದಿದ್ದರೇ, ಮನೆಯಲ್ಲಿ ಗಾಂಜಾ ಇಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ.
ಮನೆಯಲ್ಲಿರುವ ಹಣ ಮತ್ತು ಒಡವೆ ನೀಡುವಂತೆ ಹೇಳಿದ್ದಾನೆ. ಆತನನ್ನೇ ನಿಜವಾದ ಪೊಲೀಸ್ ಎಂದು ಭಾವಿಸಿದ ದಂಪತಿ ಆತ ಹೇಳಿದ ಹಾಗೇ ಕೇಳಿದ್ದಾರೆ.
ಆರೋಪಿ ಮೊದಲಿಗೆ ಮನೆಯ ಮಾಲೀಕ ಸಂಜೀವ್ ಭೋರಾ ಅವರನ್ನು ಕರೆದುಕೊಂಡು ಹೋಗಿ ಅವರ ಎಟಿಎಂನಿಂದ ಹಣ ಡ್ರಾ ಮಾಡಿಸಿಕೊಂಡು ಮತ್ತೆ ಅವರ ಜೊತೆಗೆ ಅವರ ಮನೆಗೆ ಬಂದಿದ್ದಾನೆ. ನಂತರದಲ್ಲಿ ಭೋರಾ ಅವರ ದಂಪತಿಯನ್ನು ಆಕೆಯ ಎಟಿಎಂ ಕಾರ್ಡ್‌ನೊಂದಿಗೆ ಕರೆದುಕೊಂಡು ಹೋಗಿ ಆಕೆಯ ಬಳಿಯಿಂದಲೂ ಹಣ ಡ್ರಾ ಮಾಡಿಸಿಕೊಂಡು ಆಕೆಯನ್ನು ಮನೆಗೆ ಬಿಟ್ಟು ಪರಾರಿಯಾಗಿದ್ದಾನೆ.
ದಂಪತಿಯ ಬಳಿಯಿಂದ ಆರೋಪಿ ಬರೋಬ್ಬರಿ ಒಂದೂವರೆ ಕೋಟಿ ಹಣ ಡ್ರಾ ಮಾಡಿಸಿಕೊಂಡಿದ್ದಾನೆ. ಘಟನೆ ನಡೆದ ಮೂರು ದಿನಗಳ ಬಳಿಕ ಮನೆಗೆ ಬಂದಿರುವುದು ನಕಲಿ ಪೊಲೀಸ್ ಎಂದು ದಂಪತಿಗೆ ತಿಳಿದುಬಂದಿದೆ. ಆರೋಪಿ ಬೆಳಗಿನ ಜಾವ 3 ಗಂಟೆವರೆಗೆ ದಂಪತಿ ಮನೆಯಲ್ಲಿ ಸುತ್ತಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಕ್ರಿಸ್ಮಸ್ ಹಬ್ಬ | ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರ ವಿಶೇಷ ಪ್ರಾರ್ಥನೆ: ಚರ್ಚ್ ಸುತ್ತಮುತ್ತ ಪೊಲೀಸರ ಗಸ್ತು
ಬಳಿಕ, ಡಿಸೆಂರ್ 20ರಂದು ದಂಪತಿ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ಆಧರಿಸಿ ಆರೋಪಿ ಪತ್ತೆ ಕಾರ್ಯ ಆರಂಭಿಸಿದ್ದಾರೆ.