ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಮುಂದಾಲೋಚನೆಯಿಂದಲೇ ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ ಸಿದ್ದಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ತಮ್ಮ ಪುತ್ರನ ಕಾರ್ಯ ವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಾತನಾಡಿ ಚರ್ಚೆ ನಡೆಸಿಯೇ ಪಟ್ಟಿ ಬಿಡುಗಡೆ ಮಾಡಿದ್ದಾರೆ. ನಿರೀಕ್ಷೆಯಂತೆ ಹೊಸಬರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಅವರೆಲ್ಲರ ಶಕ್ತಿ ಉಪಯೋಗ ಮಾಡಿಕೊಂಡು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಮುಂದಿನ ನಮ್ಮ ಗುರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಾಗಿದೆ ಆದ್ದರಿಂದ ಎಲ್ಲರನ್ನೂ ಭೇಟಿಯಾಗಿ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದೇನೆ” ಎಂದರು.
“ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಯುವಕರಲ್ಲಿ ಉತ್ಸಾಹ ಹೆಚ್ಚಾಗಿದೆ. ಅಲ್ಲದೇ ರಾಜ್ಯದಲ್ಲಿ ವಾತಾವರಣ ನಿರೀಕ್ಷೆ ಮೀರಿ ನಮ್ಮ ಪರವಾಗಿದೆ.ಯುವಕರ ಉತ್ಸಾಹ ಲೋಕಸಭಾ ಚುನಾವಣೆಗೆ ಪ್ಲಸ್ ಆಗಲಿದೆ. ಪ್ರಧಾನಿ ಮೋದಿ ಆಡಳಿತ ಜಗತ್ತೇ ಮೆಚ್ಚಿದೆ. ಆದ್ದರಿಂದ ಈ ಬಾರಿ ನಮ್ಮ ಗೆಲುವು ನಿಶ್ಚಿತ” ಎಂದರು
ಹಿಜಾಬ್ ಆದೇಶದ ಬಗ್ಗೆ ಮಾತನಾಡಿದ ಯಡಿಯೂರಪ್ಪ, “ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ಈಗಲಾದರೂ ಅವರಿಗೆ ಸದ್ಭುದ್ದಿ ಬರಲಿ. ನಾವು ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ನಿಲ್ಲಿಸಬೇಕು. ಇದರಿಂದ ಯಾವ ಲಾಭ ಆಗುವುದಿಲ್ಲ” ಎಂದರು.
“ವೀರಶೈವ ಲಿಂಗಾಯತ ಸಮುದಾಯದ ಜಾತಿಗಣತಿ ಸರಿಯಾಗಿ ನಡೆದಿಲ್ಲ. ಸಮೀಕ್ಷೆ ಸರಿಯಾಗಿಲ್ಲ. ಆದ್ದರಿಂದ ಮತ್ತೊಮ್ಮೆ ವಾಸ್ತವಾಂಶವುಳ್ಳ ಸಮೀಕ್ಷೆ ನಡೆಸಬೇಕು” ಎಂದು ಆಗ್ರಹಿಸಿದರು.