ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳು ಒಂದೇ ಆರವಣದಲ್ಲಿವೆ. ಎರಡೂ ಶಾಲೆಗಳಿಗೆ ಒಂದೇ ಅಡುಗೆ ಕೋಣೆಯಿದ್ದು, ಅದೂ ಕೂಡ ಶಿಥಿಲಗೊಂಡಿದೆ. ಅಡುಗೆ ಕೋಣೆಯ ಬಾಗಿಲುಗಳು ಮುರಿದಿವೆ. ಪರಿಣಾಮ, ತರಗತಿ ನಡೆಯುವ ಕೊಠಡಿಯಲ್ಲಿಯೇ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಅಡುಗೆ ಕೋಣೆ ನಿರ್ಮಿಸಿಕೊಡಬೇಕೆಂದು ಶಾಲೆಯ ಅಡುಗೆ ಸಿಬ್ಬಂದಿಗಳು ಬೇಡಿಕೆ ಇಟ್ಟಿದ್ದಾರೆ.
ಶಾಲೆಯಲ್ಲಿ ಮೊದಲೇ ತರಗತಿಗಳಿಗೆ ಅಗತ್ಯವಿರುವಷ್ಟು ಕೊಠಡಿಗಳು ಇಲ್ಲ. ಅಡುಗೆ ಕೋಣೆ ಶಿಥಿಲಗೊಂಡಿದೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಬೇಕಿದ್ದರೂ ಬೀಳುವ ಆತಂಕವಿದೆ. ಅದನ್ನು ಕೆಡವಿ, ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ, ಹಳೆಯ ಕಟ್ಟಡದಲ್ಲಿಯೇ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಶಾಲೆಯ ಕೆಲವು ಕೊಠಡಿಗಳು ಕೂಡ ತರಗತಿ ನಡೆಸಲು ಯೋಗ್ಯವಾಗಿಲ್ಲ. ಸರ್ಕಾರ ಕಟ್ಟಡಗಳ ದುರಸ್ತಿ, ನವೀಕರಣ ಹಾಗೂ ಪ್ರಗತಿಗೆ ಅಗತ್ಯವಾಗಿ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಾಲಾ ಪ್ರಗತಿ, ನಿರ್ವಹಣೆಗೆ ಗ್ರಾಮ ಪಂಚಾಯತಿ ಆಡಳಿತದ ಹೊಂದಾಣಿಕೆಯೊಂದಿಗೆ ಮಕ್ಕಳ ಪೋಷಕರ ಎಸ್‌ಡಿಎಂಸಿ ಸಮಿತಿ ರಚಿಸಿದ್ದರೂ ಶಾಲೆಗಳು ಸಮಸ್ಯೆಯಿಂದ ಬಿಡುಗಡೆಗೊಂಡಿಲ್ಲ. ಅನೇಕ ಶಾಲಾ ಕಟ್ಟಡಗಳು ಸೋರುತ್ತಿವೆ. ಗೋಡೆ ಮೇಲೆ ಮಳೆ ನೀರು ಇಳಿದು ಅಪಾಯದ ಸ್ಥಿತಿಗೆ ತಲುಪಿವೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಮಸ್ಯೆ ಬಗ್ಗೆ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೂ, ಯಾವುದೇ ಪ್ರಯೋಜನ ಆಗಿಲ್ಲ. ಮಾಧ್ಯಮಗಳು ಶಾಲೆ ಸಮಸ್ಯೆ ಬಗ್ಗೆ ವರದಿ ಮಾಡಿ, ಸರ್ಕಾರದ ಗಮನಕ್ಕೆ ತರಬೇಕು” ಎಂದು ಶಾಲೆಯ ಅಡುಗೆ ಸಿಬ್ಬಂದಿಗೆ ಈದಿನ.ಕಾಮ್‌ಗೆ ತಿಳಿಸಿದ್ದಾರೆ.