ತುಮಕೂರು ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಕ್ರಿಸ್‌ಮಸ್ ಹಬ್ಬ ಸಡಗರರಿಂದ ನಡೆಯುತ್ತಿದೆ. ತಮಕೂರಿನ ಚರ್ಚ್ ಸರ್ಕಲ್‌ನಲ್ಲಿರುವ ಸಿಎಸ್‌ಐ ವೆಸ್ಲಿ ದೇವಾಲಯ, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ಸಿಎಸ್‌ಐ ಲೇಔಟ್‌ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಸಿರಾಗೇಟ್‌ನಲ್ಲಿರುವ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಗರದ ಎಲ್ಲ ಚರ್ಚ್‌ಗಳು ವಿಶೇಷವಾಗಿ ವಿದ್ಯುದ್ದೀಪಾಲಂಕಾರರಿಂದ ಕಂಗೊಳಿಸುತ್ತಿವೆ. ಕ್ರೈಸ್ತ ಬಾಂಧವರು ಪರಸ್ಪರ ಸಿಹಿ ಹಂಚಿ ತಿನ್ನುವ ಮೂಲಕ ಶಾಂತಿ ಸೌಹಾರ್ದತೆ ಸಂಕೇತವನ್ನು ಸಾರಿದ್ದಾರೆ.
ಸಿಎಸ್‌ಐ ಮಹಾದೇವಾಲಯದಲ್ಲಿ ಸಂದೇಶ ನೀಡಿದ ಸಿಎಸ್‌ಐ ಚರ್ಚ್‌ನ ಮಾರ್ಗನ್ ಸಂದೇಶ್, “ಕ್ರಿಸ್‌ಮಸ್ ಏಸುಕ್ರಿಸ್ತನ ಜನ್ಮದಿನದ ಸಂಕೇತ. ಮನುಷ್ಯರಿಗೋಸ್ಕರ ದೇವರು ಪರಲೋಕವನ್ನು ಬಿಟ್ಟು ಭೂಲೋಕಕ್ಕೆ ಬಂದಂತಹ ಶುಭ ವರ್ತಮಾನ ತಿಳಿಸುವಂತಹದ್ದು. ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದು ಹಬ್ಬದ ಉದ್ದೇಶ” ಎಂದರು.
ಈ ಸುದ್ದಿ ಓದಿದ್ದೀರಾ?: ಸಾಲ ಮನ್ನಾಕ್ಕಾಗಿ ಬರಗಾಲ ಬರಬೇಕೆಂಬುದು ರೈತರ ಆಸೆ: ಸಚಿವ ಶಿವಾನಂದ ಪಾಟೀಲ್
“ಕ್ರಿಸ್‌ಮಸ್ ಹಬ್ಬ ಕ್ರೈಸ್ತರೆಲ್ಲರೂ ಬಹಳ ಉತ್ಸುಕತೆಯಿಂದ ಸಂತಸ, ಸಂಭ್ರಮದಿಂದ ಆಚರಿಸುವಂತಹ ಹಬ್ಬ. ಕ್ರೈಸ್ತರಿಗೆ ಮೂರು ಹಬ್ಬಗಳು ಮಹತ್ವದ್ದಾಗಿವೆ. ಕ್ರಿಸ್‌ಮಸ್ ಹಬ್ಬವನ್ನು ಬೆಳಕಿನ ಹಬ್ಬವೆಂದು ಆಚರಿಸಲಾಗುತ್ತದೆ. ಏಸುಕ್ರಿಸ್ತನು ಬೆಳಕಾಗಿ ಬಂದಿದ್ದಾನೆ. ಹಾಗಾಗಿ ಎಲ್ಲ ಚರ್ಚ್ಗಳಲ್ಲಿ ಕ್ಯಾಂಡಲ್‌ಗಳನ್ನು ಹಿಡಿದು ಏಸುವಿನ ಬೆಳಕು ನಮ್ಮೆಲ್ಲ ಸಂಕಷ್ಟವನ್ನು ದೂರ ಮಾಡುತ್ತದೆ ಎಂದು ಹಬ್ಬವನ್ನು ಆಚರಿಸಲಾಗುತ್ತದೆ. ಡಿಸೆಂಬರ್ ಮೊದಲ ದಿನದಿಂದ ಈ ಹಬ್ಬದ ಸಡಗರ ಸಂಭ್ರಮಗಳು ಆರಂಭವಾಗುತ್ತದೆ” ಎಂದರು.
“ಬಹಳಷ್ಟು ವರ್ಷಗಳ ಹಿಂದೆ ಏಸುಕ್ರಿಸ್ತ ಹುಟ್ಟಿದಾಗ ಅಂದಿನ ಸಾಮಾಜಿಕ, ಆರ್ಥಿಕವಾದ ಪರಿಸ್ಥಿತಿಗಳು, ರಾಜಕೀಯ, ಧಾರ್ಮಿಕವಾದ ಪರಿಸ್ಥಿತಿಗಳು, ಬಡವರು, ನಿರ್ಗತಿಕರಿಗೆ ವಿರುದ್ಧವಾಗಿ ದೌರ್ಜನ್ಯ, ಶೋಷಣೆ ಮಾಡುವಂತಹ ಸನ್ನಿವೇಶ ಇದ್ದಾಗ ಏಸುಕ್ರಿಸ್ತ ಅಂತಹವರ ಪರವಾಗಿ ಸಮಾಜದಲ್ಲಿ ಶಾಂತಿ, ಸಮಾಧಾನ ತಂದು ದೇವರು ಬಡವರ ಪರ ಇದ್ದಾನೆ ಎಂದು ಸಾರಿ ಹೇಳಿದಂತಹ ಹಬ್ಬ ಇದಾಗಿದೆ” ಎಂದು ಹೇಳಿದರು.
“ಕ್ರಿಸ್‌ಮಸ್ ಹಬ್ಬ ಇಡೀ ಮನುಷ್ಯರನ್ನು ರಕ್ಷಣೆಯ ದಾರಿಯಲ್ಲಿ ನಡೆಸಲಿಕ್ಕೆ ಬಂದಂತಹ ಏಸುವಿನ ಆಗಮನವನ್ನು ಸೂಚಿಸುತ್ತದೆ. ಕ್ರಿಸ್ಮಸ್ ಶಾಂತಿ ಸಮಾಧಾನದ ಹಬ್ಬ. ಶಾಂತಿ ಕಾಪಾಡುವುದೇ ಈ ಹಬ್ಬದ ಸಂದೇಶ” ಎಂದರು.