ದುರ್ಗೆ ಕಾಳಿಯರನ್ನ ಪೂಜಿಸ್ತೀರಿ, ಹೆಣ್ಣು ಭ್ರೂಣಗಳನ್ನೇಕೆ ಕೊಲ್ಲುತ್ತೀರಿ?

Date:

ಮದುವೆ ಆಗುವುದಕ್ಕೆ ಹೆಣ್ಣು ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಯುವಕರು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದಾರೆ. ತಮ್ಮಲ್ಲಿ ಹೆಣ್ಣೇ ಇಲ್ಲ ಅಂತ ಬೇರೆ ರಾಜ್ಯ, ದೇಶಗಳಿಂದ ವಧುವನ್ನು ಖರೀದಿ ಮಾಡಿ ತಮ್ಮ ಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ. ಇಂತಹ ನಿದರ್ಶನಗಳು ನಮ್ಮ ಮುಂದೆ ಹಲವಾರಿವೆ.

ಒಂದು ಗಂಡಿಗೆ ಒಂದು ಹೆಣ್ಣು, ಒಂದು ಹೆಣ್ಣಿಗೆ ಒಂದು ಗಂಡು ಅಂತ ಇರಬೇಕು ಎನ್ನುವುದು ನಿಸರ್ಗದ ನಿಯಮ. 1000 ಗಂಡಿಗೆ 1000 ಹೆಣ್ಣು ಮಕ್ಕಳು ಇರಬೇಕು ಎಂದು ಹೇಳುವುದನ್ನು ಸಮಪ್ರಮಾಣದ ಲಿಂಗಾನುಪಾತ ಎನ್ನಲಾಗುತ್ತದೆ. ಒಂದು ವೇಳೆ, ನೈಸರ್ಗಿಕ ನಿಮಯದ ಸಂಖ್ಯೆಯಲ್ಲಿ ವ್ಯತ್ಯಾಸ ಆದರೆ, ಲಿಂಗಾನುಪಾತದಲ್ಲಿ ಅಸಮತೋಲನ ಉಂಟಾಗುತ್ತದೆ. ಇದು ನೈಸರ್ಗಿಕ ನಿಮಯದ ಉಲ್ಲಂಘನೆಯೂ ಆಗುತ್ತದೆ.

2011ರ ಜನಗಣತಿಯ ಪ್ರಕಾರ, ಹರಿಯಾಣದಲ್ಲಿ ಅತ್ಯಂತ ಕೆಟ್ಟ ಲಿಂಗಾನುಪಾತ ದಾಖಲಾಗಿದೆ. ಪ್ರತಿ 1,000 ಹುಡುಗರಿಗೆ ರಾಜ್ಯದಲ್ಲಿ ಕೇವಲ 830 ಹುಡುಗಿಯರು ಮಾತ್ರ ಇದ್ದರು. ಲಿಂಗಾನುಪಾತವೇ ಈ ಮಟ್ಟಿಗೆ ಕುಸಿದಾಗ ಇನ್ನು ಮದುವೆಯಾಗೋದಕ್ಕೆ ಹೆಣ್ಣು ಎಲ್ಲಿಂದ ಸಿಗಬೇಕು. ಮಕ್ಕಳಿಗೆ ಮದುವೆ ಮಾಡಲೇಬೇಕು ಎಂದು ಪಣತೊಟ್ಟ ಹರಿಯಾಣದ ಹಿರಿಯರು ಬಂಗಾಳ, ಬಿಹಾರ್, ಜಾರ್ಖಂಡ್, ಅಸ್ಸಾಂ, ತಮಿಳುನಾಡು ಅಲ್ಲದೇ, ನೆರೆಯ ರಾಷ್ಟ್ರ ಬಾಂಗ್ಲಾದಿಂದಲೂ ಹೆಣ್ಣು ಮಕ್ಕಳನ್ನು ಖರೀದಿ ಮಾಡಿ ಕರೆತಂದು ತಮ್ಮ ಮಕ್ಕಳಿಗೆ ಮದುವೆ ಮಾಡಿದ್ದಾರೆ. ಈ ಹುಡುಗಿಯರಲ್ಲಿ ಅಪ್ರಾಪ್ತ ವಯಸ್ಸಿನವರೂ ಕೂಡ ಸೇರಿದ್ದರು ಎಂಬುದು ವಿಪರ್ಯಾಸ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನು ನಮ್ಮ ಕರ್ನಾಟಕದಲ್ಲಿ ದೀಪಾವಳಿ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ಸುಮಾರು 100ಕ್ಕೂ ಅಧಿಕ ಯುವಕರು ಮದುವೆ ಆಗೋದಕ್ಕೆ ಹೆಣ್ಣು ಸಿಕ್ತಾ ಇಲ್ಲ ಎಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಸುಮಾರು 4 ದಿನಗಳ ಕಾಲ 160 ಕಿ.ಮೀ ಪಾದಯಾತ್ರೆಯ ಮಾಡಿದರು.

ಇತ್ತೀಚೆಗೆ ಬೆಳಕಿಗೆ ಬಂದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ನಿಬ್ಬೆರಗಾಗಿಸಿದೆ. ಹೆಣ್ಣು ಭ್ರೂಣ ಹತ್ಯೆ ದಂಧೆಯಲ್ಲಿ ತೊಡಗಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಒಂದೆಡೆ, ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂದು ಯುವಕರು ಹರಕೆ ಕಟ್ಟಿಕೊಂಡು ಪಾದಯಾತ್ರೆ ಮಾಡುತ್ತಿದ್ದರೆ, ಮತ್ತೊಂದೆಡೆ, ಹೆಣ್ಣೇ ಬೇಡವೆಂದು ಪೋಷಕರು ಭ್ರೂಣದಲ್ಲೇ ಹೆಣ್ಣು ಜೀವವನ್ನು ಕೊಲ್ಲುತ್ತಿದ್ದಾರೆ.

ಹೆಣ್ಣಿನ ಮೇಲೆ ಯಾಕಿಷ್ಟು ತಾತ್ಸಾರ? ಹೆಣ್ಣು ದೈವ ಸಮಾನಳು. ಆದರೆ, ಅವಳು ನಮ್ಮನೆಯಲ್ಲಿ ಹುಟ್ಟೋದು ಬೇಡ. ಬೇರೆ ಮನೆಯಲ್ಲಿ ಹುಟ್ಟಲಿ, ನಮ್ಮನೇಲಿ ಒಂದ್ ಗಂಡು ಹುಟ್ಟಲಿ ಎಂಬ ಮನಸ್ಥಿತಿಗೆ ಕಾರಣವಾದರೂ ಏನು? ಪುರುಷ ಪ್ರಧಾನ ವ್ಯವಸ್ಥೆಯೇ? ಇಂತಹ ಲಿಂಗ ತಾರತಮ್ಯಗ್ರಸ್ಥ ವ್ಯವಸ್ಥೆಯಲ್ಲಿ ಗಂಡಿಗೆ ಹೆಣ್ಣು ಅಧೀನಳು. ಹೆಣ್ಣು ಮದುವೆಯಾಗುವಾಗ ಗಂಡಿಗೆ ವರದಕ್ಷಿಣೆ ನೀಡಬೇಕೆಂಬ ಅನಿಷ್ಟ ಪದ್ದತಿ, ಹೆಣ್ಣು ಕುಟುಂಬದ ಹೊರೆ ಎಂಬಂತಹ ಧೋರಣೆ ಹುಟ್ಟು ಹಾಕಿದೆ. ವರದಕ್ಷಿಣೆ ಅಪರಾಧವಾಗಿದ್ದರೂ, ಅದನ್ನು ತಡೆಯುವಲ್ಲಿ ಆಡಳಿತಾಂಗ ವಿಫಲವಾಗಿದೆ. ಆ ಕಾರಣದಿಂದಾಗಿಯೂ ಹೆಣ್ಣು ಜೀವವನ್ನು ಮೊಳಕೆಯಲ್ಲೇ ಕೊಲ್ಲಲಾಗುತ್ತಿದೆ.

ಗಂಡು ಮಗು ಲಾಭದ ಉತ್ಪನ್ನವಾದರೆ, ಹೆಣ್ಣು ನಷ್ಟದ ಸರಕಾಗಿದ್ದಾಳೆ. ಲಿಂಗ ಸಮಾನತೆ, ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ 21ನೇ ಶತಮಾನದ 20ರ ದಶಕದಲ್ಲೂ ಗಂಡು ಮಗು ಬೇಕೆಂಬ ವ್ಯಾಮೋಹ ಸಮಾಜವನ್ನು ರೋಗಗ್ರಸ್ತವನ್ನಾಗಿಸಿದೆ. ತಾಯಿಯೇ ಅಸಹಾಯಕಳಾಗಿ ತನ್ನ ಹೆಣ್ಣು ಹಸುಗೂಸನ್ನು ಕೊಲ್ಲಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ಪೈಶಾಚಿಕ ಯಮಸ್ವರೂಪಿಗಳಾಗಿ ಭ್ರೂಣ ಹತ್ಯೆಯ ಕೃತ್ಯ ಎಸಗುತ್ತಿದ್ದಾರೆ.

ಸದ್ಯ, ಮಂಡ್ಯದ ಆಲೆಮನೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ದಂಧೆ ನಡೆಸುತ್ತಿದ್ದ ಜಾಲವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಭೇದಿಸಿದ್ದಾರೆ. 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ವಿಚಾರಣೆಯ ವೇಳೆ ಬೆಚ್ಚಿ ಬೀಳಿಸುವ ಆಘಾತಕಾರಿ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ. ಪ್ರತಿ ತಿಂಗಳು 20 ರಿಂದ 25 ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡುತ್ತಿದ್ದೆವು. 2 ವರ್ಷಗಳಲ್ಲಿ ನಿರಂತರವಾಗಿ 900 ಹೆಣ್ಣು ಭ್ರೂಣ ಹತ್ಯೆ ಮಾಡಿದ್ದೇವೆಂದು ಅವರು ಒಪ್ಪಿಕೊಂಡಿದ್ದಾರೆ.

ಭಾರತದಲ್ಲಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧ. ಕರ್ನಾಟಕದಲ್ಲಿಯೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ಮತ್ತು ಲಿಂಗಾನುಪಾತದ ಸಮತೋಲನ ಕಾಪಾಡುವುದು ‘ಭ್ರೂಣ ಹತ್ಯೆ ನಿಷೇಧ’ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೂ, ಭ್ರೂಣ ಲಿಂಗ ಪತ್ತೆ ಮಾಡಿ ಹತ್ಯೆಗೈಯುವ ಕೃತ್ಯಗಳು ನಡೆಯುತ್ತಲೇ ಇವೆ.

ಮಂಡ್ಯದ ಆಲೆ ಮನೆಯಲ್ಲಿ ಭ್ರೂಣ ಹತ್ಯೆ ಮಾಡುತ್ತಿದ್ದ ಜಾಲ ಪತ್ತೆಯಾದ ಬಳಿಕ ಪೊಲೀಸರು ಹಾಗೂ ಅರೋಗ್ಯಾಧಿಕಾರಿಗಳು ಸಕ್ರಿಯವಾಗಿದ್ದು, ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲೆಯಾದ್ಯಂತ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧ ನಡೆದ ದಾಳಿ ವೇಳೆ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದ 14 ಕ್ಲಿನಿಕ್‌ಗಳಿಗೆ ಬೀಗ ಜಡಿದಿದ್ದಾರೆ. ಅಲ್ಲದೆ, ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಆರೋಗ್ಯ ಇಲಾಖೆ ಘೋಷಿಸಿದೆ. ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡುವುದಾಗಿಯೂ ಹೇಳಿದೆ.

ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು 1994ರಲ್ಲಿ. ಅಂದರೆ, ಕಾಯ್ದೆ ಜಾರಿಯಾಗಿ 27 ವರ್ಷಗಳು ಕಳೆದಿವೆ. ಆದರೆ, ಈ 27 ವರ್ಷಗಳಲ್ಲಿ ಈ ಕಾಯ್ದೆಯಡಿ ಕೇವಲ 89 ಪ್ರಕರಣಗಳು ಮಾತ್ರ ದಾಖಲಾಗಿವೆ. ಅದರಲ್ಲೂ, ಶಿಕ್ಷೆಯಾಗಿರುವ ಪ್ರಕರಣಗಳ ಸಂಖ್ಯೆ ಕೇವಲ 38 ಮಾತ್ರ.

ಭಾರತದಲ್ಲಿ ಪ್ರತಿ ವರ್ಷ ಅಂದಾಜು 5 ಲಕ್ಷ ಹೆಣ್ಣು ಜೀವಗಳು ಭ್ರೂಣ ಹತ್ಯೆಗೆ ಬಲಿಯಾಗುತ್ತಿವೆ. ಕಳೆದ ಮೂರು ದಶಕಗಳಲ್ಲಿ ಭಾರತದ ನಾನಾ ರಾಜ್ಯಗಳಲ್ಲಿ ಒಟ್ಟು 1.2 ಕೋಟಿ ಲಿಂಗಾಧಾರಿತ ಗರ್ಭಪಾತಗಳು ನಡೆದಿವೆ ಎಂದು ವರದಿಯಾಗಿದೆ.

ಅಂದರೆ, ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಇತ್ತೀಚಿಗೆ, ನವೀಕೃತ ಅಲ್ಟ್ರಾ ಸೌಂಡ್ ಡಯಗ್ನೊಸ್ಟಿಕ್ ವಿಧಾನಗಳು ಇಂತಹ ಕೃತ್ಯಗಳಿಗೆ ಮತ್ತಷ್ಟು ಕುಮ್ಮಕ್ಕು ನೀಡಿವೆ. ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆಗೆ ರಾಜ ಮಾರ್ಗ ತೆರೆದಂತಾಗಿದೆ.

ಹೆಣ್ಣು ಭ್ರೂಣ ಹತ್ಯೆಯು ದೇಶದಲ್ಲಿ ಮತ್ತು ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಬಹುದೊಡ್ಡ ಅಂತರವನ್ನು ಸೃಷ್ಟಿಸಿದೆ. ಈ ಕಾರಣದಿಂದಾಗಿ ವಿವಾಹವಾಗಲು ತುಡಿಯುತ್ತಿರುವ ಯುವಕರಿಗೆ ವಧು ಸಿಗುತ್ತಿಲ್ಲ. ಆದರೆ, ಇದು ಸಮಾಜದ ಕಣ್ಣಿಗೆ ಕಾಣದೇ ಇರುವ ಮುಸುಕು ಸತ್ಯವಾಗಿ ಉಳಿದಿದೆ.

1,000 ಪುರುಷರಿಗೆ 1,000 ಮಹಿಳೆಯರು ಇರಬೇಕೆಂದು ಲಿಂಗಾನುಪಾತ ಹೇಳುತ್ತದೆ. ಆದರೆ, ಆ ಲಿಂಗಾನುಪಾತವನ್ನು ಸಾಧಿಸಲು ಭಾರತಕ್ಕೆ ಇನ್ನೂ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ, ದಶಕಗಳಿಂದ ದಶಕಕ್ಕೆ ಲಿಂಗಾನುಪಾತದ ಅಂತರ ದೊಡ್ಡದಾಗುತ್ತಾ ಹೋಗುತ್ತಿದೆ.

2001ರಲ್ಲಿ ಪ್ರತಿ ಸಾವಿರ ಗಂಡುಮಕ್ಕಳಿಗೆ 927 ಹೆಣ್ಣುಮಕ್ಕಳು ಹುಟ್ಟುತ್ತಿದ್ದರು. ಆದರೆ, 2022ರಲ್ಲಿ ಪ್ರತಿ ಸಾವಿರ ಗಂಡುಮಕ್ಕಳಿಗೆ 914 ಹೆಣ್ಣುಮಕ್ಕಳು ಮಾತ್ರ ಹುಟ್ಟುತ್ತಿದ್ದಾರೆ. 2014-15ರಲ್ಲಿ 1,000 ಗಂಡು ಮಕ್ಕಳಿಗೆ 918 ಹೆಣ್ಣು ಮಕ್ಕಳಷ್ಟೇ ಜನಿಸಿದ್ದಾರೆ. ಭಾರತವು ವಿಶ್ವಗುರುವಾಗುತ್ತಿದೆ ಎಂದು ಹೇಳುತ್ತಿರುವ ಸಮಯದಲ್ಲೇ ಹೆಣ್ಣು ಮಕ್ಕಳ ಜನನ ಸಂಖ್ಯೆ ತೀವ್ರ ಕುಸಿತ ಕಾಣುತ್ತಿದೆ. ಪರಿಣಾಮ, 2017ರ ವಿಶ್ವಸಂಸ್ಥೆಯ ಮಕ್ಕಳ ಅಸಮಾನತೆಯ ಸೂಚ್ಯಂಕದಲ್ಲಿ 172 ದೇಶಗಳ ಪೈಕಿ ಭಾರತವು 116ನೇ ಸ್ಥಾನದಲ್ಲಿದೆ. ಈ ನಡುವೆ, ಹೆಣ್ಣುಮಕ್ಕಳ ಜನನದ ಲಿಂಗಾನುಪಾತ 2022-23ರ ಅವಧಿಯಲ್ಲಿ 933ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಹೇಳಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹರಿಶ್ಚಂದ್ರ ಘಾಟ್ | ಮೃತದೇಹ ಸುಟ್ಟ ವಾಸನೆಯಿಂದ ನಿತ್ಯ ನರಕ; ಸತ್ತು ಬದುಕುತ್ತಿರುವ ಜನ!

ಕರ್ನಾಟಕದಲ್ಲಿ 2020-21ರಲ್ಲಿ 1,000 ಪುರುಷರಿಗೆ 949 ಮಹಿಳೆಯರು ಇದ್ದರು. 2021-22ರಲ್ಲಿ ಮಹಿಳೆಯರ ಸಂಖ್ಯೆ 940ಕ್ಕೆ ಕುಸಿದಿತ್ತು. 2022-23ರಲ್ಲಿ 945ಕ್ಕೆ ಏರಿಕೆಯಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಹಿಳೆಯರ ಲಿಂಗಾನುಪಾತ 760ಕ್ಕೆ ಕುಸಿದಿದೆ ಎಂಬ ಆಘಾತಕಾರಿ ವಿಷಯವನ್ನೂ ಆರೋಗ್ಯ ಇಲಾಖೆಯ ವರದಿಗಳು ಹೇಳಿವೆ.

ಇನ್ನು, 2022-23ರಲ್ಲಿ ಸಾವಿರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಲಿಂಗಾನುಪಾತವು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 919, ಪಶ್ಚಿಮ ಬಂಗಾಳದಲ್ಲಿ 932, ಬಿಹಾರದಲ್ಲಿ 895, ಚಂಡಿಗಡದಲ್ಲಿ 902, ಹಿಮಾಚಲ ಪ್ರದೇಶದಲ್ಲಿ 932 ಆಗಿದೆ. ಈ ಅನುಪಾತನವು ಕಳೆದೆರಡು ವರ್ಷಗಳಿಗಿಂತ ಈ ವರ್ಷ ಕುಸಿತ ಕಂಡಿದೆ ಎಂಬುದು ಮರೆಮಾಚಲಾರದ ಸತ್ಯ ಸಂಗತಿ.

ಉತ್ತರ ಪ್ರದೇಶ, ಅಸ್ಸಾಮ್ ಮತ್ತು ಕೇರಳದಂಥ ರಾಜ್ಯಗಳಲ್ಲಿ ಲಿಂಗಾನುಪಾತದಲ್ಲಿ ಸುಧಾರಣೆ ಆಗಿದೆ. ಉತ್ತರ ಪ್ರದೇಶದಲ್ಲಿ 2020-21ರಲ್ಲಿ 940 ಇದ್ದ ಹಣ್ಣು ಮಕ್ಕಳ ಅನುಪಾತ 2022-23ರಲ್ಲಿ 944ಕ್ಕೆ ಏರಿದೆ. ಅಸ್ಸಾಂನಲ್ಲಿ ಲಿಂಗಾನುಪಾತವು 2020-21ರಲ್ಲಿ 942 ಇದ್ದದ್ದು, 2022-23ರಲ್ಲಿ 951ಕ್ಕೆ ಏರಿದೆ. ರಾಜಸ್ಥಾನದಲ್ಲಿ ಲಿಂಗಾನುಪಾತವು ಕಳೆದ ಮೂರು ವರ್ಷಗಳಲ್ಲಿಯೂ 946ರೇ ಆಗಿದೆ.

ಭಾರತದ ಬಹುತೇಕ ರಾಜ್ಯಗಳಲ್ಲಿ ಲಿಂಗಾನುಪಾತ ಕುಸಿಯುತ್ತಿರುವುದು ಒಂದೆಡೆಯಾದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕೊಡಲಾಗುವ ಹಣ ಬಳಕೆಯಾಗದೇ ಉಳಿಯುತ್ತಿರುವುದು ಮತ್ತೊಂದೆಡೆ ಕಾಣಿಸುತ್ತಿದೆ. ಇದೆಲ್ಲದರ ನಡುವೆ, ನೀತಿ ಆಯೋಗ ಮಾತ್ರ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ಯಶಸ್ಸಿನ ಕಥೆಯನ್ನು ಹೇಳುತ್ತಿರುವುದು ವಿಚಿತ್ರವಾಗಿದೆ.

ಕೇಂದ್ರ ಸರ್ಕಾರ, ಹೆಣ್ಣು ಮಕ್ಕಳ ರಕ್ಷಣೆಗಾಗಿ 2015ರಲ್ಲಿ ‘ಬೇಟಿ ಬಚಾವೊ, ಬೇಟಿ ಪಡಾವೊ’ ಅಭಿಯಾನವನ್ನು ಜಾರಿಗೊಳಿಸಿತು. ಆದರೆ, ಅದೊಂದು ಜಾಹೀರಾತಿನ ಅಭಿಯಾನವಾಗಿಯೇ ಉಳಿದು ಹೋಗಿದೆ. ಪ್ರಧಾನಿ ಮೋದಿ ಅವರ ಅಡಳಿತಾವಧಿಯಲ್ಲೇ ಸಾವಿರಾರು ಹೆಣ್ಣು ಮಕ್ಕಳು ದೌರ್ಜನ್ಯಗಳಿಗೆ ತುತ್ತಾಗಿದ್ದಾರೆ. ಮಹಿಳೆಯರನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಎಸಗಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಆದರೆ, ಸರ್ಕಾರ ಅವುಗಳನ್ನು ತಡೆಗಟ್ಟುವಲ್ಲಿ, ಅಪರಾಧಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಹೆಣ್ಣಿನ ರಕ್ಷಣೆ ಬಿಜೆಪಿ ಸರ್ಕಾರದ ಚುನಾವಣಾ ಭಾಷಣಕ್ಕೆ ಸೀಮಿತವಾಗಿಬಿಟ್ಟಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜ್ವಲ್ ಪ್ರಕರಣ | ಉಪ್ಪು ತಿಂದವನು ನೀರು ಕುಡಿಯಲೇಬೇಕು: ಎಚ್ ಡಿ ಕುಮಾರಸ್ವಾಮಿ

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಪ್ರಕರಣ...

ರಾಯಚೂರು | ಬಿಸಿಲಿನ ತಾಪಕ್ಕೆ ನಿರ್ಜಲೀಕರಣ; ಇಬ್ಬರು ಮಕ್ಕಳು ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಭೀಕರ ಬಿಸಿಲಿನ ತಾಪಕ್ಕೆ...

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಡಾ. ಜಿ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ...