ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದು, ವಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿದ್ದು ಪೂರ್ವನಿರ್ಧಾರಿತ ಹಾಗೂ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ತಿಳಿಸಿದ್ದಾರೆ.
“ಅಮಾನತುಗೊಳಿಸುವಿಕೆಯು ವಿವೇಚನಾ ರಹಿತವಾಗಿದ್ದು, ಸಂಸತ್ತಿನಲ್ಲಿ ಹಾಜರಿಯಿಲ್ಲದ ಇಂಡಿಯಾ ಒಕ್ಕೂಟದ ಸದಸ್ಯರೊಬ್ಬರನ್ನು ಅಮಾನುಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಯಾವುದಾದರೂ ಹಕ್ಕುಚ್ಯುತಿ ನಿರ್ಣಯದ ಅಸ್ತ್ರಗಳಿದ್ದರೆ ಅದನ್ನು ಪ್ರತಿಪಕ್ಷದ ಮೂಗಿಗೆ ಹಾಕಲಾಗುತ್ತದೆ. ಇದು ಸಂಸತ್ತನ್ನು ದುರ್ಬಲಗೊಳಿಸುವ ಸರ್ಕಾರದ ಉದ್ದೇಶಪೂರ್ವಕ ನಡೆಯಾಗಿದೆ. ಒಟ್ಟಾರೆ 146 ಸಂಸದರ ಅಮಾನತುಗೊಳಿಸಿರುವ ಕ್ರಮವು ಸರ್ಕಾರವು ಮತದಾರರ ಧ್ವನಿಯನ್ನು ಪರಿಣಾಮಕಾರಿಯಾಗಿ ಅಡಗಿಸುವುದಾಗಿದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ಸಂಸತ್ತಿನ ಭದ್ರತಾ ಲೋಪದ ಕುರಿತು ಸದನದಲ್ಲಿ ಹೇಳಿಕೆ ನೀಡದ ಗೃಹ ಸಚಿವರು ಮತ್ತು ಕೇಂದ್ರವನ್ನು ಉಪರಾಷ್ಟ್ರಪತಿ ಕ್ಷಮಿಸಿರುವುದು ವಿಷಾದನೀಯ. ಸಂಸತ್ ಅಧಿವೇಶನದಲ್ಲಿದ್ದಾಗ ಗೌರವಾನ್ವಿತ ಗೃಹ ಸಚಿವರು ಟಿವಿ ಚಾನೆಲ್‌ನ ಮುಂದೆ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ನೀಡಿದರು. ಆದರೆ ಪ್ರಜಾಪ್ರಭುತ್ವದ ದೇವಾಲಯದಲ್ಲಿಅಪಹಾಸ್ಯ ಮಾಡಿರುವುದನ್ನು ಅಧ್ಯಕ್ಷರು ಗಮನಿಸದಿರುವುದು ಹೆಚ್ಚು ವಿಷಾದನೀಯ” ಎಂದು ಖರ್ಗೆ ಹೇಳಿದ್ದಾರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
“ಗೃಹ ಸಚಿವರು ರಾಜ್ಯಸಭೆಗೆ ಹಾಜರಾಗುವುದಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗುವುದು ಎಂದು ಕೇಂದ್ರ ಸಚಿವರೊಬ್ಬರು ವಿರೋಧ ಪಕ್ಷದ ನಾಯಕರಿಗೆ ತಿಳಿಸಿದ್ದರು. ಇಂತಹ ಬೆದರಿಕೆಗಳ ಬಗ್ಗೆ ಸಭಾಧ್ಯಕ್ಷಕರು ಪರಿಶೀಲಿಸಬೇಕೆಂದು ನಾವು ಬಯಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ಅಮಾನತುಗಳ ಪರಿಣಾಮವು ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸುವ ಮೂಲಕ ಶಾಸಕಾಂಗ ವ್ಯವಹಾರವನ್ನು ಸುಗಮಗೊಳಿಸಿದೆ ಎಂದು ಗೌರವಾನ್ವಿತ ಅಧ್ಯಕ್ಷರು ಭಾವಿಸುತ್ತಿರುವುದು ಬೇಸರವಾಗಿದೆ ”ಎಂದು ಹೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭದ್ರತಾ ಲೋಪಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕೆಂದು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಸಂಸದರನ್ನು ಒಳಗೊಂಡು 146 ಸಂಸದರನ್ನು ಅಮಾನತುಗೊಳಿಸಲಾಯಿತು.