ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?

Date:

ಬಾಯಿ ಇರುವ ಬಲಿಷ್ಠರು, ಬಹುಸಂಖ್ಯಾತರೇ ಜಾತಿ ಜನಗಣತಿ ಬಗ್ಗೆ ವಿರೋಧ ವ್ಯಕ್ತಪಡಿಸುವುದು, ಅಬ್ಬರಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಏನನ್ನು ಸೂಚಿಸುತ್ತದೆ? ಇದು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿ ಎನ್ನುವುದಕ್ಕೆ ಹಾಗೂ ಅವರ ಸಮಸಮಾಜದ ಆಶಯಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆಯೇ? 

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಎರಡು ದಿನಗಳ ಅಖಿಲ ಭಾರತ ವೀರಶೈವ – ಲಿಂಗಾಯತ 24ನೇ ಮಹಾ ಅಧಿವೇಶನ ಮುಗಿದಿದೆ. ಶಾಮನೂರು ಶಿವಶಂಕರಪ್ಪನವರ ಮುಂದಾಳತ್ವದಲ್ಲಿ ಜರುಗಿದ ಈ ಮಹಾ ಅಧಿವೇಶನದಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ಸ್ವಾಮೀಜಿಗಳು, ಸಾಹಿತಿಗಳು, ಚಿಂತಕರು, ರಾಜಕಾರಣಿಗಳು ಸೇರಿದಂತೆ 2 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು, ಒಗ್ಗಟ್ಟು ಪ್ರದರ್ಶಿಸಿದ್ದು ಸಮುದಾಯಕ್ಕೆ ಶಕ್ತಿ ತುಂಬಿದೆ. ಸರ್ಕಾರದ ಮೇಲೆ ಸವಾರಿ ಮಾಡುವ ಧೈರ್ಯ ಬಂದಿದೆ.

ಈ ಸಂದರ್ಭದಲ್ಲಿ ಮಹಾಸಭಾವು ಸಮುದಾಯದ ಬೇಡಿಕೆಗಳನ್ನು ಒಳಗೊಂಡ ಪ್ರಮುಖ 8 ನಿರ್ಣಯಗಳನ್ನು ಕೈಗೊಂಡಿದೆ. ಅದರಲ್ಲಿ ರಾಜ್ಯ ಸರ್ಕಾರವು ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕು, ವೈಜ್ಞಾನಿಕವಾಗಿಲ್ಲದ ಜಾತಿ ಗಣತಿ ತಿರಸ್ಕರಿಸಬೇಕು, ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತರನ್ನು ಸೇರ್ಪಡೆ ಮಾಡಬೇಕು ಎಂಬ ನಿರ್ಣಯಗಳಿವೆ.

12ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಕಟ್ಟಿಕೊಟ್ಟ ಮಹಾನ್ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನ ಚಿಂತನೆ, ಅನುಭಾವ ಸಾರ್ವಕಾಲಿಕವಾಗಿದ್ದು, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವತತ್ವ ಪರಿಪಾಲನೆ ಪರಿಹಾರವಾಗಿದೆ. ಈ ಹಿನ್ನೆಲೆಯಲ್ಲಿ ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಎಂಬ ನಿರ್ಣಯ ನಿಜಕ್ಕೂ ಮೆಚ್ಚುವಂಥದ್ದು. ಸರ್ಕಾರದ ಮೇಲೆ ಒತ್ತಡ ತರುವುದರಲ್ಲೂ ತಪ್ಪಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ಮಹಾ ಅಧಿವೇಶನದಲ್ಲಿ ಕೈಗೊಂಡ ಮತ್ತೊಂದು ಪ್ರಮುಖ ನಿರ್ಣಯ, ಕಾಂತರಾಜ ಆಯೋಗದ ವರದಿಯ ಜಾತಿ ಗಣತಿಯನ್ನು ತಿರಸ್ಕರಿಸುವ ನಿರ್ಣಯ, ಸಮಾಜಕ್ಕೆ – ಸರ್ಕಾರಕ್ಕೆ ಬೇರೆಯದೆ ಸಂದೇಶವನ್ನು ರವಾನಿಸುತ್ತಿದೆ. ಈ ನಿರ್ಣಯ ಕೈಗೊಳ್ಳಲಿಕ್ಕಾಗಿಯೇ ಮಹಾ ಅಧಿವೇಶನವೆಂಬ ಶಕ್ತಿ ಪ್ರದರ್ಶನ ಏರ್ಪಡಿಸಿರಬಹುದೇ ಎಂಬ ಅನುಮಾನ ಕೇಳಿಬರತೊಡಗಿದೆ. ಇದರ ಜೊತೆಗೆ, ಕಾಂಗ್ರೆಸ್ ಸರ್ಕಾರ ಲಿಂಗಾಯತರನ್ನು ಕಡೆಗಣಿಸಿದೆ, ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ನೀಡದೆ ಸತಾಯಿಸುತ್ತಿದೆ ಎಂಬ ಕೊರಗೂ ಇದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಸಿದ್ದರಾಮಯ್ಯನವರ ಕಳೆದ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸಲಾಗಿರುವ ಕಾಂತರಾಜ ಆಯೋಗದ ವರದಿಯನ್ನು ಶತಾಯಗತಾಯ ಜಾರಿಗೊಳಿಸಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಲಿಂಗಾಯತರನ್ನು ಸಿಡಿದೇಳುವಂತೆ ಮಾಡಿದೆ.

ಜೊತೆಗೆ, ರಾಜ್ಯದ ಮತ್ತೊಂದು ಬಲಿಷ್ಠ ಜಾತಿಯಾದ ಒಕ್ಕಲಿಗ ಸಮುದಾಯ ಜಾತಿಗಣತಿ ವೈಜ್ಞಾನಿಕವಾಗಿಲ್ಲ, ಎಲ್ಲರನ್ನು ಒಳಗೊಂಡಿಲ್ಲ ಎಂದು ವಿರೋಧ ವ್ಯಕ್ತಪಡಿಸಿರುವುದು ಲಿಂಗಾಯತರ ಈ ಅಸಮಾಧಾನಕ್ಕೆ ತುಪ್ಪ ಸುರಿದಿದೆ. ಅಷ್ಟೇ ಅಲ್ಲ, ವಿರೋಧ ವ್ಯಕ್ತಪಡಿಸುವ ಪತ್ರಕ್ಕೆ ಒಕ್ಕಲಿಗ ಸ್ವಾಮೀಜಿಗಳು, ರಾಜಕೀಯ ನಾಯಕರು ಮತ್ತು ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿರುವ ಒಕ್ಕಲಿಗ ಜಾತಿಯ ಸಚಿವರು ಸಹಿ ಮಾಡಿರುವುದು ಸರ್ಕಾರದ ಮೇಲೆ ಒತ್ತಡವನ್ನುಂಟು ಮಾಡಿದೆ.

ಈಗ ದಾವಣಗೆರೆ ವೀರಶೈವ ಲಿಂಗಾಯತರ ಮಹಾ ಅಧಿವೇಶನದಲ್ಲಿ ಶಾಮನೂರು ಶಿವಶಂಕರಪ್ಪನವರು, ‘ನಾವು ಜಾತಿ ಗಣತಿಯ ವಿರೋಧಿಗಳಲ್ಲ. ಆದರೆ, ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇದರಿಂದ ಸಮಾಜಕ್ಕೆ ತೀವ್ರ ಸ್ವರೂಪದ ನಷ್ಟವಾಗಲಿದೆʼ ಎಂದಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.

ಶಾಮನೂರು ಶಿವಶಂಕರಪ್ಪನವರ ವಿರೋಧದಲ್ಲಿ ರಾಜಕೀಯವಿಲ್ಲ, ಸ್ವಹಿತಾಸಕ್ತಿ ಅಡಗಿಲ್ಲ. ಅವರು ಪ್ರತಿನಿಧಿಸುವ ಕಾಂಗ್ರೆಸ್‌ ಪಕ್ಷದಿಂದ ಅವರಿಗೆ ಏನು ಆಗಬೇಕಾದ್ದೂ ಇಲ್ಲ. ಆದರೆ ಇದೇ ಮಾತುಗಳನ್ನು ಕಾಂಗ್ರೆಸ್‌ ಪಕ್ಷದ ಇತರ ಲಿಂಗಾಯತ ನಾಯಕರ ಬಗ್ಗೆ ಹೇಳಲಿಕ್ಕಾಗುವುದಿಲ್ಲ. ಇದೇ ಮಹಾ ಅಧಿವೇಶನದಲ್ಲಿ, ʻವೀರಶೈವ – ಲಿಂಗಾಯತ ಸಮುದಾಯದಲ್ಲಿ 90ರಿಂದ 100 ಒಳಪಂಗಡಗಳಿವೆ. ವಾಸ್ತವಾಂಶದ ಆಧಾರದಲ್ಲಿ ಜಾತಿ ಗಣತಿ ನಡೆಸಬೇಕು ಎಂಬುದು ನಮ್ಮ ಬೇಡಿಕೆ. ಇದಕ್ಕೆ ಸಮುದಾಯದ ಎಲ್ಲ ಶಾಸಕರು ಪಕ್ಷಾತೀತವಾಗಿ ಸಮ್ಮತಿ ಸೂಚಿಸಿದ್ದಾರೆ. ನಾವೇನು ಜಾತಿಗಣತಿ ವಿರೋಧಿಗಳಲ್ಲ. ಆದರೆ ವೈಜ್ಞಾನಿಕ ಆಧಾರದಲ್ಲಿ ಜಾತಿಗಣತಿ ಮಾಡಬೇಕು. ನಾವು ಯಾರ ಹಕ್ಕನ್ನೂ ಕಸಿಯುತ್ತಿಲ್ಲʼ ಎಂದು ಸಚಿವ ಈಶ್ವರ ಖಂಡ್ರೆಯವರು ಮಾತನಾಡಿರುವುದು; ಲಿಂಗಾಯತ ಸಮುದಾಯದ ಪರವೋ, ಸಿದ್ದರಾಮಯ್ಯನವರ ಪರವೋ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ.

ರಾಜ್ಯದಲ್ಲಿ ಈ ಬಾರಿ ಆಯ್ಕೆಯಾಗಿರುವ ಶಾಸಕರಲ್ಲಿ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿದೆ. 224ರಲ್ಲಿ 56 ಶಾಸಕರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನಲ್ಲಿ 34, ಬಿಜೆಪಿಯಲ್ಲಿ 19, ಜೆಡಿಎಸ್‌ ಪಕ್ಷದಿಂದ ಇಬ್ಬರು, ಒಬ್ಬರು ಪಕ್ಷೇತರ ಶಾಸಕರಾಗಿದ್ದಾರೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸರ್ಕಾರದಲ್ಲಿ ಲಿಂಗಾಯತ ಸಮುದಾಯದ 7 ಮಂದಿ ಸಚಿವರಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದಲ್ಲಿಯೂ ಲಿಂಗಾಯತ ಕೋಮಿನ ಒಬ್ಬರು ಸಚಿವರಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಈ ಪ್ರಮಾಣದಲ್ಲಿ ನಾಯಕರು, ಶಾಸಕರು, ಸಚಿವರು ಇದ್ದರೂ; ಮೀಸಲಾತಿ, ಉದ್ಯೋಗ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಸವಲತ್ತುಗಳನ್ನು ಪಡೆಯುತ್ತಲೇ ಬಂದಿದ್ದರೂ, ಮಹಾ ಅಧಿವೇಶನದಲ್ಲಿ ಸೇರಿದ್ದ ಜನರನ್ನು ಕಂಡು, ‘ವೀರಶೈವ-ಲಿಂಗಾಯತ ಸಮಾಜವನ್ನು ನಿರ್ಲಕ್ಷಿಸಲು, ನಮ್ಮನ್ನು ಬಿಟ್ಟು ಈ ರಾಜ್ಯವನ್ನು ಆಳಲು ಯಾರಿಗೂ ಸಾಧ್ಯವಿಲ್ಲ’ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾತು ಅಹಂಕಾರದಂತೆ ಕೇಳಿಸಿದರೆ ಆಶ್ಚರ್ಯವಿಲ್ಲ.

ಬಾಯಿ ಇರುವ ಬಲಿಷ್ಠರು, ಬಹುಸಂಖ್ಯಾತರೇ ಹೀಗೆ ಅಬ್ಬರಿಸಿದರೆ, ನಮಗೆ ಅನ್ಯಾಯವಾಗುತ್ತಿದೆ ಎಂದು ಸರ್ಕಾರದ ಮೇಲೆ ಒತ್ತಡ ಹಾಕಿದರೆ, ನಮ್ಮನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಧಿಮಾಕು ತೋರಿದರೆ; ದನಿ ಇಲ್ಲದವರು, ಅಂಚಿನಲ್ಲಿರುವವರು, ಅಸಹಾಯಕರು, ಶೋಷಣೆಗೊಳಗಾಗುತ್ತಲೇ ಇರುವವರು ಎದ್ದು ನಿಲ್ಲುವುದು ಯಾವಾಗ? ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿ ಎನ್ನುವ ಸಮುದಾಯವೇ, ಅವರ ಸಮಸಮಾಜದ ಆಶಯಕ್ಕೆ ತದ್ವಿರುದ್ಧ ನಿಲುವು ತಾಳುವುದು ಏನನ್ನು ಸೂಚಿಸುತ್ತದೆ?

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...