ಸಂಸತ್‌ನಲ್ಲಿ ಸಂಸದರ ಅಮಾನತು ಮಾಡಲಾಗಿರುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ – ಸಿಪಿಐಎಂ) ಪದಾಧಿಕಾರಿಗಳು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
“ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಹಾಳು ಮಾಡುತ್ತದೆ. ಸರ್ವಾಧಿಕಾರಿ ಧೋರಣೆಯಾಗಿದೆ” ಎಂದು ದೂರಿದ್ದಾರೆ.
“ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೊರೇಟ್ ಬಂಡವಾಳಶಾಹಿ ಪರ ಆಡಳಿತ ನಡೆಸುತ್ತಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಅತ್ಯಂತ ಪ್ರಧಾನ ಅಂಗವಾಗಿದೆ. ಹೀಗಿದ್ದರೂ ಪ್ರಶ್ನೆ ಕೇಳಿದ ಕಾರಣಕ್ಕಾಗಿ ಸಂಸದರನ್ನು ಅಮಾನತುಗೊಳಿಸಿರುವುದು ಸರಿಯಲ್ಲ. ಸಂಸತ್ ಕಲಾಪದ ವೇಳೆಯೇ ದಾಳಿ ನಡೆದಿರುವುದು ಗಂಭೀರವಾದ ಭದ್ರತಾಲೋಪವಾಗಿದೆ. ಇದಕ್ಕೆ ಗೃಹ ಸಚಿವರಿಂದ ಉತ್ತರ ಬಯಸುವ, ಪ್ರಶ್ನಿಸುವ ಹಕ್ಕು ಸಂಸದರಿಗೆ ಇದೆ. ಆದರೆ ಮೋದಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಗೌರವದಿಂದ ಕಾಣುತ್ತಿದೆ ಇದನ್ನು ಎಲ್ಲ ಪ್ರಜಾಪ್ರಭುತ್ವವಾದಿಗಳು ಖಂಡಿಸಲೇಬೇಕು” ಹೇಳಿದ್ದಾರೆ.
“ಬಿಜೆಪಿ ಅಧಿಕಾರಕ್ಕಾಗಿ ಧರ್ಮದ ಆಧಾರದಲ್ಲಿ ಜನರ ನಡುವೆ ವಿಷ ಬೀಜ ಬಿತ್ತುತ್ತಿದೆ. ಅಮಾಯಕರ ಸಾವುಗಳಿಗೆ ಕಾರಣವಾಗುತ್ತಿದೆ. ರಾಮ ಸೇರಿ ಎಲ್ಲ ದೇವರುಗಳನ್ನು ತಮ್ಮ ಅಧಿಕಾರದ ಆಸೆಗಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಸಂಘಪರಿವಾರ ಮುಖಂಡರು ಸಮಾಜ ಕಲುಷಿತಗೊಳಿಸುತ್ತಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ
ಪ್ರತಿಭಟನೆಯಲ್ಲಿ ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೋಳಿ, ನರಸಣ್ಣ ನಾಯಕ, ನರಸಿಂಹ ಪುಚ್ಚಲದಿನ್ನಿ, ರಮೇಶ ಯಾಪಲದಿನ್ನಿ, ವಿರೇಶ, ನಾಗೇಂದ್ರ, ಶ್ಯಾಮ ಸುಂದರ, ಈ ರಂಗನಗೌಡ ಭಾಗವಹಿಸಿದ್ದರು.