ಹನುಮ ಜಯಂತಿ ಪೂಜೆಗಾಗಿ ದೇವಾಲಯಗಳಲ್ಲಿ ತಯಾರಿಸಿದ್ದ ಪ್ರಸಾದ ತಿಂದು ಸುಮಾರು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಬೆಂಗಳೂರು ಬಳಿಯ ಹೊಸಕೋಟೆಯ ವಿವಿಧ ದೇವಾಲಯಗಳಲ್ಲಿ ಭಾನುವಾರ ಹನುಮ ಜಯಂತಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಪ್ರಸಾದ ವಿತರಣೆಯನ್ನೂ ಮಾಡಲಾಗಿತ್ತು. ಪ್ರಸಾದ ತಿಂದವರಲ್ಲಿ ಸುಮಾರು 200 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಅವರಲ್ಲಿ, ಓರ್ವ ಮಹಿಳೆ ಚಿಕಿತ್ಸೆ ಫಲಿಸದೆ ಸೋಮವಾರ ಸಾವನ್ನಪ್ಪಿದ್ದಾರೆ.
ಭಾನುವಾರ ಸಂಜೆಯೇ ಹಲವರಿಗೆ ವಾಂತಿಯಾಗಿದ್ದು, ಬೆಂಗಳೂರು, ಕೋಲಾರ, ಹೊಸಕೋಟೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಸಿದ್ದಗಂಗಮ್ಮ (60) ಎಂಬವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಇನ್ನೂ ಎಂಟು ಮಂದಿ ಪರಿಸ್ಥಿತಿ ಗಂಭೀರವಾಗಿದೆ. ಹಲವರ ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.
ಪ್ರಸಾದ ತಯಾರಿಕೆ ಮತ್ತು ವಿತರಣೆ ವೇಳೆ ಸ್ವಚ್ಛತೆ ಕಾಪಾಡದೇ ಇರುವುದರಿಂದ ಫುಡ್ ಪಾಯಿಸನ್ ಆಗಿ, ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.