ಬಿಜೆಪಿ ಸರ್ಕಾರ ಜಾರಿ ಮಾಡಿರುವ 2019ರ ಭೂಸ್ವಾಧೀನ ಕಾಯಿದೆ ಮತ್ತು 2020ರ ಭೂಸುಧಾರಣಾ ಕಾಯಿದೆಗಳು ರೈತನ ಪಾಲಿನ ಮರಣಶಾಸನಗಳಾಗಿ ಪರಿಣಮಿಸಿವೆ
ಕೃಷಿವಲಯ ತೀವ್ರ ಒತ್ತಡಕ್ಕೆ ಸಿಲುಕಿದೆ. ಬೆಳೆ ವಿಮೆ, ಸರ್ಕಾರದಿಂದ ಕೃಷಿ ಉತ್ಪನ್ನಗಳ ಖರೀದಿ, ಮಾರುಕಟ್ಟೆ, ಸಾಲ, ದಾಸ್ತಾನು ವ್ಯವಸ್ಥೆಗಳು ಅವಗಣನೆಗೆ ಗುರಿಯಾಗಿ ನರಳಿವೆ. ಮಳೆಯನ್ನೇ ಅತಿಯಾಗಿ ಆಶ್ರಯಿಸಿರುವ ಒಕ್ಕಲುತನ, ಧಾರಣೆಗಳ ಕುಸಿತ, ಒಂದೆಕರೆ ಗಾತ್ರಕ್ಕೆ ಕುಗ್ಗುತ್ತ ನಡೆದಿರುವ ಭೂ ಹಿಡುವಳಿಗಳು, ಹದ್ದುಮೀರಿದ ಮನುಷ್ಯಲಾಲಸೆಯನ್ನು ಪ್ರತಿಭಟಿಸಿ ಎರ್ರಾಬಿರ್ರಿಯಾಗಿರುವ ಹವಾಮಾನ, ಜಾಳಾಗುತ್ತಿರುವ ನೆಲ, ಕೃಷಿಯೇತರ ಉದ್ದೇಶಗಳಿಗೆ ಕೃಷಿ ಭೂಮಿಯ ಪರಿವರ್ತನೆ ಈ ವಲಯವನ್ನು ಹಿಂಡಿ ಹಿಪ್ಪೆ ಮಾಡಿವೆ.
ಬೆಂಗಳೂರು ನಗರ ಜಾಗತಿಕ ಭೂಪಟದಲ್ಲಿ ಪ್ರಧಾನ ಸ್ಥಾನ ಗಳಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಿಲ್ದಾಣದ ಸನಿಹದಲ್ಲಿ ರೈತರು ಒಂದೂವರೆ ವರ್ಷದಿಂದ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವಿಮಾನನಿಲ್ದಾಣದ ಬಳಿ ಕೈಗಾರಿಕೆ ಮತ್ತು ಬಂಡವಾಳ ಪಾರ್ಕ್‌ನ ಎರಡನೆಯ ಹಂತವನ್ನು ಅಭಿವೃದ್ಧಿಪಡಿಸುವ ಯೋಜನೆ ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಒಂದನೆಯ ಹಂತದಲ್ಲಿ ಇದೇ ಉದ್ದೇಶಕ್ಕೆಂದು ರೈತರಿಂದ ಸಾವಿರ ಎಕರೆಗಳಿಗೂ ಹೆಚ್ಚಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಸ್ಥಳೀಯ ಕೃಷಿ ಅರ್ಥವ್ಯವಸ್ಥೆ ಛಿದ್ರಗೊಂಡಿತ್ತು. ಪರಿಸರ ಸಮಸ್ಯೆಗಳು ಸರಮಾಲೆಯೇ ತಲೆದೋರಿತ್ತು. ರೈತರನ್ನು ಒಕ್ಕಲೆಬ್ಬಿಸಿ ಖಾಲಿ ಮಾಡಿಸಿದ ಈ ಜಮೀನನ್ನು ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಬಿಡಿಗಾಸಿಗೆ ನೀಡಲಾಗಿದೆ. ಎರಡೇ ಕಾರ್ಖಾನೆಗಳು ತಲೆಯೆತ್ತತೊಡಗಿವೆ. ನೆಲ ಕಳೆದುಕೊಂಡ ರೈತರಿಗೆ ಈ ‘ಅಭಿವೃದ್ಧಿ’ಯಲ್ಲಿ ಪಾಲು ಸಿಕ್ಕಿಲ್ಲ. ಉದ್ಯೋಗಾವಕಾಶದ ಸುಳಿವೇ ಇಲ್ಲ. ಅವರ ಹಿತಾಸಕ್ತಿಯನ್ನು ಲೆಕ್ಕಿಸುವವರೇ ದಿಕ್ಕಿಲ್ಲ. ಅವರ ಪ್ರತಿಭಟನೆ ಅರಣ್ಯರೋದನ. ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ನೀಡಿದ್ದ ವಚನವನ್ನು ಮರೆತೇ ಹೋಗಿದೆ.
ಈ ಸೀಮೆಯ ಹದಿಮೂರು ಹಳ್ಳಿಗಳ ರೈತರು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ನಿತ್ಯ ಸರದಿಯ ಪ್ರಕಾರ ಸೇರುತ್ತಾರೆ. ಚಂದಾ ಎತ್ತಿದ ಹಣ ಮತ್ತು ದವಸಧಾನ್ಯದ ಸಾಮೂಹಿಕ ಭೋಜನ, ಆನಂತರ ಕೃಷಿಯನ್ನು ಬಾಧಿಸುವ ವಿಷಯಗಳ ಚರ್ಚೆಯಲ್ಲಿ ತೊಡಗುತ್ತಾರೆ. 1,777 ಎಕರೆಗಳಷ್ಟು ಕೃಷಿಭೂಮಿಯನ್ನು ವಶಪಡಿಸಿಕೊಳ್ಳುವ ತೀರ್ಮಾನವನ್ನು ಕೈ ಬಿಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಾರೆ. ಎಷ್ಟೇ ಪರಿಹಾರ ನೀಡಿದರೂ ತಮ್ಮ ಹೊಲನೆಲಗಳನ್ನು ಬಿಟ್ಟುಕೊಡೆವು, ರೈತರಾಗಿಯೇ ಉಳಿಯುವೆವು ಎಂಬುದು ಅವರ ದೃಢ ಸಂಕಲ್ಪ. ರಾಗಿ, ನೀಲಿ ದ್ರಾಕ್ಷಿ, ತರಾವರಿ ತರಕಾರಿಗಳು, ಹಣ್ಣುಗಳು, ಹೂವುಗಳು ಸೊಂಪಾಗಿ ಬೆಳೆಯುವ ಫಲವತ್ತು ನೆಲದ ಸೀಮೆಯಿದು. ಸರ್ಕಾರ ಜಮೀನು ಸ್ವಾಧೀನಪಡಿಸಿಕೊಂಡರೆ ಲಕ್ಷ ಲಕ್ಷ ಜೀವನೋಪಾಯಗಳು ನೆಲಕಚ್ಚುತ್ತವೆ. ನೆಲವನ್ನೇ ನಂಬಿ ಬದುಕುವ ಮಕ್ಕಳ ಬೇರುಗಳು ಬುಡಮೇಲಾಗಿ ವಲಸೆಯ ಸಂಕಟದ ವಿಷವೃತ್ತಕ್ಕೆ ಬೀಳುತ್ತವೆ. ಈ ದುರಂತ ಹೊಸ ವಿದ್ಯಮಾನವೇನೂ ಅಲ್ಲ. ದಶಕ ದಶಕಗಳಿಂದ ನಡೆದುಕೊಂಡು ಬಂದಿರುವಂತಹುದೇ. ಆದರೆ ಯಾವುದು ವಿಕಾಸ, ಯಾವುದು ವಿನಾಶ ಎಂಬ ನಿಚ್ಚಳ ನೋಟ ಕಾಣದಾಗಿದೆ. ನಗದು ಹಣಕ್ಕಾಗಿ ಜೀವಪೋಷಣೆಯ ನಿಜಸಂಪತ್ತನ್ನು ಕೈಯಾರೆ ಹಾಳುಗೆಡವಲಾಗುತ್ತಿದೆ. ತಾನು ಕುಳಿತ ಟೊಂಗೆಯನ್ನೇ ಕಡಿದು ಹಾಕುವ ಮೂರ್ಖ ಮಾನವ ಇಂದು ಸರ್ವವ್ಯಾಪಿ. ಭೂದಲ್ಲಾಳಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳನೇಕರು ಈ ವಿಧ್ವಂಸಕ ಕೃತ್ಯದಲ್ಲಿ ಸಕ್ರಿಯರು. ಸಾಮಾಜಿಕ ಮಾನವಶಾಸ್ತ್ರಜ್ಞೆ ಎ.ಆರ್.ವಾಸವಿ ಅವರು ಈ ಕುರಿತು ಇತ್ತೀಚೆಗೆ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ಬರೆದಿರುವ ಲೇಖನ ಕಣ್ಣು ತೆರೆಸುವಂತಹುದು. ಆದರೆ ನಿದ್ರೆ ಮಾಡಿದವರಂತೆ ನಟಿಸುವವರನ್ನು ಯಾರು ಎಚ್ಚರಿಸಲಾದೀತು?
ಬಿಜೆಪಿ ಸರ್ಕಾರ ಜಾರಿ ಮಾಡಿರುವ 2019ರ ಭೂಸ್ವಾಧೀನ ಕಾಯಿದೆ ಮತ್ತು 2020ರ ಭೂಸುಧಾರಣಾ ಕಾಯಿದೆಗಳು ರೈತನ ಪಾಲಿನ ಮರಣಶಾಸನಗಳಾಗಿ ಪರಿಣಮಿಸಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕಾಯಿದೆಗಳನ್ನು ಮರುವಿಮರ್ಶೆಗೆ ಒಳಪಡಿಸಬೇಕು. ರೈತನ ಕೊರಳಿಗೆ ಬಿಗಿದಿರುವ ಉರುಳನ್ನು ಕಳಚಬೇಕು. ರೈತನನ್ನು ಹೆಬ್ಬಾವಿನಂತೆ ಸುತ್ತಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಮಾಫಿಯಾವನ್ನು ನಿಗ್ರಹಿಸಬೇಕು. ಘನತೆಯಿಂದ ಬದುಕುವ ಹಕ್ಕನ್ನು ರೈತರಿಗೆ ಮರಳಿಸಬೇಕು.

ಈ ಲೇಖನದಲ್ಲಿನ ವಿವರಣೆಗಳು ನಮ್ಮ ರೈತ ಸಹೋದರರ ನೋವನ್ನು ತಿಳಿಸುತ್ತವೆ 😟. ಕೃಷಿ ಭೂಮಿಯ ಪರಿವರ್ತನೆ ಮತ್ತು ಅದರ ಪರಿಣಾಮಗಳು ನಮ್ಮ ಸಮಾಜಕ್ಕೆ ದೊಡ್ಡ ಹೊಡೆತವಾಗಿವೆ. ಭೂಸ್ವಾಧೀನ ಮತ್ತು ಭೂಸುಧಾರಣಾ ಕಾಯಿದೆಗಳ ಅನುಷ್ಠಾನ ಹೇಗೆ ರೈತರ ಜೀವನವನ್ನು ಪ್ರಭಾವಿತಗೊಳಿಸಿದೆ ಎಂಬುದು ಚಿಂತನೀಯ ವಿಷಯ. ಸರ್ಕಾರಗಳು ಅವರ ದನಿಯನ್ನು ಕೇಳಲಿ, ಅವರ ಹಿತಾಸಕ್ತಿಯನ್ನು ರಕ್ಷಿಸಲಿ 🙏. #ರೈತರಹಿತ #ಭೂಸ್ವಾಧೀನ #ಕೃಷಿಭೂಮಿ