ಸಚಿವ ಶಿವಾನಂದ ಪಾಟೀಲರು ಪದೇಪದೆ ರೈತ ವಿರೋಧಿ ಹೇಳಿಕೆ ಕೊಡುತ್ತಿರುವುದನ್ನು ಇಡೀ ರೈತ ಕುಲದಿಂದ ತೀವ್ರ ಖಂಡನೀಯ. ಇವರು ಇದೇ ರೀತಿ ಅವಹೇಳನ ಮಾತುಗಳನ್ನು ಮುಂದುವರೆಸಿದರೆ ಅವರ ಮತಕ್ಷೇತ್ರದ ಪ್ರತಿ ಮನೆಗಳ ಮುಂದೆ ಒಬ್ಬೊಬ್ಬ ರೈತರು ನಿಂತು ಇವರನ್ನು ಬಹಿಷ್ಕರಿಸಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಕೊಲ್ಹಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಎಚ್ಚರಿಕೆ ನೀಡಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, “ಕೃಷ್ಣಾನದಿ ನೀರು ಹಾಗೂ ವಿದ್ಯುತ್ ಉಚಿತ ನೀಡುತ್ತಿದ್ದೇವೆ ಎನ್ನುತ್ತೀರಿ, ಹೀಗೆ ಹೇಳಲು ನಿಮಗೆ ನಾಚಿಕೆಯಾಗಬೇಕು. ಹಿಂದಿನ ಸರ್ಕಾರ ನೀಡುತ್ತಿದ್ದ 7 ತಾಸು ತ್ರೀಫೇಸ್ ವಿದ್ಯುತ್ ಕಡಿತಗೊಳಿಸಿದ ಪರಿಣಾಮ ಇಂದು ನಮ್ಮ ಕಬ್ಬು ಬೆಳೆ, ಗೊಂಜಾಳ ಎಲ್ಲ ಒಣಗಿ ಹೋಗಿವೆ. ಕೃಷ್ಣಾನದಿ ನೀರು ಆಣೆಕಟ್ಟು ಹಿನ್ನೀರಿಗಾಗಿ ಸಾವಿರಾರು ರೈತರು ಜಮೀನು ತ್ಯಾಗ ಮಾಡಿದ್ದೇವೆ. ಮುಳವಾಡ ಏತ ನೀರಾವರಿ ಎಡಭಾಗದ ಕಾಲುವೆಗೆ ಎಂಟು ತಿಂಗಳು ನೀರು ಬಿಡಬೇಕಿತ್ತು. ಆದರೆ ಮೊದಲೇ ಪಾಳಿ ಅನುಸರಿಸಿ, ಆಲಮಟ್ಟಿ ಜಲಾಶಯದ ನೀರು ನಾರಾಯಣಪುರ ಡ್ಯಾಂಗೆ ಬಿಡುತ್ತೀರಿ, ಆ ಡ್ಯಾಂ ಭರ್ತಿ ಮಾಡಿ, ಈ ಡ್ಯಾಂ ಅರ್ಧ ಮಾಡಿದ್ದೀರಿ. ಇದರಿಂದ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ನಿಮ್ಮ ರೈತರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ” ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಸಕ್ಕರೆ ಸಚಿವರಾಗಿರುವ ಶಿವಾನಂದ ಪಾಟೀಲರು ಒಮ್ಮೆ ಸಕ್ಕರೆ ಖಾತೆಯತ್ತ ಗಮನಿಸಬೇಕು. ನಮ್ಮ ಕಬ್ಬು ಕಾರ್ಖಾನೆಗೆ ಹೋಗಿ ಒಂದು ತಿಂಗಳಾದರೂ ಇನ್ನೂ ನಮಗೆ ಹಣ ಬಿಡುಗಡೆಯಾಗಿಲ್ಲ. ತೂಕದಲ್ಲಿ ಮೋಸ ಮಾಡುತ್ತಾರೆಂದು ನೀವೇ ಹೇಳುತ್ತಿರಿ, ಇನ್ನೂ ತೂಕದ ಮಷಿನ್ ಅಳವಡಿಸಿಲ್ಲ. ರಿಕವರಿ ಚೆಕ್ ಮಾಡುವ ಯಂತ್ರ ಕೂಡಿಸಿ. ಇಂತಹ ರೈತರ ಸಮಸ್ಯೆಗಳ ಕುರಿತು ಸಚಿವರು ಚಿಂತನೆ ಮಾಡಬೇಕು. ರೈತರಿಗೆ ಅದನ್ನು ಉಚಿತವಾಗಿ ನೀಡುತ್ತೇವೆ, ಇದನ್ನು ನೀಡುತ್ತೇವೆ ಎಂದು ಹೇಳುತ್ತೀರಿ. ರೈತರ ಸಾಲಮನ್ನಾ ಮಾಡಲ್ಲ. ನಿಮಗೆ ಲಕ್ಷಾಂತರ ವೇತನ ಬರುವುದು ರೈತರು ಬೆವರು ಸುರಿಸಿ ದುಡಿದ ಹಣದಿಂದ. ಎಲ್ಲ ಶಾಸಕರು ಬರುವ ವೇತನವನ್ನು ತ್ಯಾಗ ಮಾಡಿ ನೋಡೋಣ. ನಾವು ಕೊಟ್ಟಿದ್ದು ನೀವು ತೆಗೆದುಕೊಳ್ಳುತ್ತೀರಿ, ಹೊರತಾಗಿ ನಮಗೆ ಯಾರೂ ಪಗಾರ ಕೊಡುವುದಿಲ್ಲ” ಎಂದು ಸಿಡುಕಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ರಸ್ತೆ ಇಕ್ಕೆಲಗಳಲ್ಲಿ ಡಬ್ಬಿ ಅಂಗಡಿಗಳ ಅಟ್ಟಹಾಸ; ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ
“ನೀರು, ವಿದ್ಯುತ್ ಪಡೆಯುವುದು ನಮ್ಮ ಹಕ್ಕು. ನೀವು ಯಾರೂ ತಮ್ಮ ಮನೆಯಿಂದ ಕೊಡುವುದಿಲ್ಲ. ಸಚಿವ ಶಿವಾನಂದ ಪಾಟೀಲರು ತಕ್ಷಣವೇ ನಾಡಿನ ರೈತರ ಕ್ಷಮೆಯಾಚಿಸಬೇಕು. ನಿಮ್ಮ ಮೇಲಿನ ವಿಶ್ವಾಸದಿಂದ ನಿಮ್ಮನ್ನು ಮೂರು ಬಾರಿ ಆರಿಸಿ ತಂದಿದ್ದೇವೆ. ಯಾವುದೇ ಕ್ಷೇತ್ರದಲ್ಲಿ ಹೋಗಿ ಹೀಗೆ ಮಾತನಾಡುವುದು ನಿಲ್ಲಿಸಿ, ಮೊದಲು ನಿಮ್ಮ ಕ್ಷೇತ್ರದ ಗಮನಹರಿಸಿ, ನೀರು ಹರಿಸಿ, ಕಬ್ಬಿನ ಹಣ ಪಾವತಿಗೆ ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಸೋಮು ಬಿರಾದಾರ ಆಗ್ರಹಿಸಿದರು.